ತೆಲುಗು ನಟ, ರಾಜಕಾರಣಿ ಪವನ್ ಕಲ್ಯಾಣ್ ಕುಕ್ಕೆ ಸುಬ್ರಹ್ಮಣ್ಯ ಭೇಟಿ : ಆಶ್ಲೇಷ ಬಲಿ ಸಮರ್ಪಣೆ

ಕುಕ್ಕೆಸುಬ್ರಹ್ಮಣ್ಯ: ದಕ್ಷಿಣ ಭಾರತದ ಹೆಸರಾಂತ ನಾಗಾರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಟಾಲಿವುಡ್ ಖ್ಯಾತ ನಾಯಕ ನಟ ಪವನ್ ಕಲ್ಯಾಣ್ ಮಂಗಳವಾರ ಭೇಟಿ ನೀಡಿದರು. ದೇವಳದಲ್ಲಿ ಸಂಕಲ್ಪದ ಬಳಿಕ ಅವರು ಆಶ್ಲೇಷ ಬಲಿ ಸೇವೆ ನೆರವೇರಿಸಿ, ದೇವರ ದರುಶನ ಪಡೆದರು.

ನಾಯಕ ನಟನಿಗೆ ದೇವಳದ ಅರ್ಚಕರು ಶಾಲು ಹೊದಿಸಿ ಮಹಾಪ್ರಸಾದ ನೀಡಿ ಹರಸಿದರು. ಬಳಿಕ ಹೊಸಳಿಗಮ್ಮನ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು. ನಂತರ ಆದಿಸುಬ್ರಹ್ಮಣ್ಯ ದೇವಳಕ್ಕೆ ತೆರಳಿ ದೇವರ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು. ಅಲ್ಲದೆ, ಆದಿ ಸುಬ್ರಹ್ಮಣ್ಯದಲ್ಲಿ ಹುತ್ತಕ್ಕೆ ವಸ್ತ್ರ ಸಮರ್ಪಿಸಿದರು.

ಗೌರವಾರ್ಪಣೆ
ಪವನ್ ಕಲ್ಯಾಣ್ ಅವರಿಗೆ ದೇವಳದ ಆಡಳಿತ ಕಚೇರಿಯಲ್ಲಿ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಶಾಲು ಹೊದಿಸಿ, ಶ್ರೀದೇವರ ಮಹಾಪ್ರಸಾದ ನೀಡಿ ಗೌರವಿಸಿದರು. ಈ ಸಂದರ್ಭ ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಸನ್ನ ದರ್ಬೆ ಉಪಸ್ಥಿತರಿದ್ದರು.

ಸ್ವಚ್ಛತಾ ಯೋಜನೆಗೆ ಶ್ಲಾಘನೆ
ಪ್ರತೀ ಏಕಾದಶಿಯಂದು ದೇವಸ್ಥಾನದಲ್ಲಿ ನಡೆಸುವ ಸ್ವಚ್ಛತಾ ಕಾರ್ಯಕ್ರಮದ ಬಗ್ಗೆ ತಿಳಿದುಕೊಂಡ ಪವನ್ ಕಲ್ಯಾಣ್ ಈ ಯೋಜನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಎಲ್ಲಾ ದೇವಸ್ಥಾನಗಳೂ ಕುಕ್ಕೆ ಸುಬ್ರಹ್ಮಣ್ಯವನ್ನು ಅನುಸರಿಸಬೇಕೆಂದು ಮನವಿ ಮಾಡಿದರು. ಇದರಿಂದ ಪರಿಸರ ಸ್ವಚ್ಛತಾ ಜಾಗೃತಿ ಸಾಧ್ಯ ಎಂದರು. ಶ್ರೀದೇವಳದಿಂದ ಭಕ್ತರ ಅನುಕೂಲತೆಗಾಗಿ ನಡೆಯುತ್ತಿರುವ ಸಮಗ್ರ ಅಭಿವೃದ್ದಿಯ ಮಾಸ್ಟರ್ ಪ್ಲ್ಯಾನ್ ಯೋಜನೆಯನ್ನು ಕೂಡಾ ಮುಕ್ತ ಕಂಠದಿಂದ ಶ್ಲಾಘಿಸಿದರು.

ದೇವಳದಲ್ಲಿ ಖ್ಯಾತ ನಟನನ್ನು ಕಂಡ ಭಕ್ತರು ಅವರ ಸುತ್ತ ಸೇರಿ ಕ್ಲಿಕ್ಕಿಸಿಕೊಂಡರು. ಅಭಿಮಾನಿಗಳಿಗೆ ನಿರಾಸೆಯಾಗದಂತೆ ಪವನ್ ಕಲ್ಯಾಣ್ ಸೆಲ್ಪಿಗೆ ಮುಖ ಒಡ್ಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!