ಹೈವೋಲ್ಟೇಜ್ ಕ್ಷೇತ್ರ ಪುತ್ತೂರಿನಲ್ಲಿ ಶಾಂತಿಯುತ ಮತದಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಯು ಬುಧವಾರ ಶಾಂತಿಯುತವಾಗಿ ನಡೆಯಿತು.
ಬೆಳಗ್ಗೆ 7  ಗಂಟೆಯಿಂದ 9 ಗಂಟೆ ತನಕ ಕೇವಲ ಶೇ. 13 ರಷ್ಟು ಮತದಾನ ನಡೆದಿತ್ತು. 11 ಗಂಟೆ ಹೊತ್ತಿಗೆ ಶೇ. 28, ಮಧ್ಯಾಹ್ನ 1 ಗಂಟೆ ಹೊತ್ತಿಗೆ 47.44 ಹಾಗೂ ಅಪರಾಹ್ನ 3 ಗಂಟೆಗೆ 61.45 ಶೇ. ಮತದಾನವಾಗಿತ್ತು.
ಒಂದಷ್ಟು ಸಮಸ್ಯೆ
ಬಜತ್ತೂರು ಗ್ರಾಮದ ಹೊಸಗದ್ದೆ ಮತಕೇಂದ್ರವೂ ಸೇರಿದಂತೆ ತಾಲೂಕಿನ ಕೆಲವು ಮತಗಟ್ಟೆಗಳಲ್ಲಿ ಸರ್ವರ್ ಸಮಸ್ಯೆಯಿಂದ ಸ್ಲಲ್ಪ ತಡವಾಗಿಯೇ ಮತದಾನ ಆರಂಭವಾಗಿತ್ತು. ಸಂಟ್ಯಾರು ಶಾಲಾ ಮತಕೇಂದ್ರದಲ್ಲಿ ಮತದಾನ ಆರಂಭಗೊಂಡು 3 ಮತಚಲಾವಣೆ ನಡೆದಾಗ ಮತಯಂತ್ರ ಕೈಕೊಟ್ಟಿತು. ನಂತರ ಅಧಿಕಾರಿಗಳು ಮತಯಂತ್ರವನ್ನು ದುರಸ್ತಿ ಮಾಡಿ ಮತದಾನ ಸರಾಗವಾಗಿ ನಡೆಯಿತು.
ಬಿಸಿಲ ತಡೆ
ಬೆಳಗ್ಗೆ ಮತದಾನ ಆರಂಭವಾಗುತ್ತಲೇ ಸರತಿ ಸಾಲು ಅಧಿಕವಾಗಿ ಕಂಡುಬಂತು. ಮಧ್ಯಾಹ್ನದ ಹೊತ್ತಿಗೆ ಉರಿಬಿಸಿಲಿನ ಕಾರಣ ಮತದಾನ ಕೇಂದ್ರಗಳಲ್ಲಿ ಸರತಿ ಸಾಲಿಲ್ಲದೆ ಮತದಾನ ನೀರಸವಾಗಿ ಕಂಡುಬಂತು. ಸಂಜೆಯ ಸಮಯಕ್ಕೆ ಮತ್ತೆ ಬಿರುಸು ಪಡೆದುಕೊಂಡಿತು.
ಕಡಿತದ ಸಮಸ್ಯೆ
ಪಡುವನ್ನೂರು ಪ್ರೌಢಶಾಲಾ ಮತಗಟ್ಟೆಯಲ್ಲಿ ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ 2 ಮತದಾನ ಕೇಂದ್ರಗಳಿದ್ದವು. ಇಲ್ಲಿ 1377 ಮತದಾರರಿದ್ದು, ಈ ಬಾರಿ ಕೇವಲ ಒಂದೇ ಮತಕೇಂದ್ರ ವ್ಯವಸ್ಥೆ ಮಾಡಲಾಗಿತ್ತು. ಇದರಿಂದ ಮತಗಟ್ಟೆಗೆ ಬಂದ ಮತದಾರರು 2 ಗಂಟೆಗೂ ಹೆಚ್ಚು ಕಾಲ ಸರತಿ ಸಾಲಿನಲ್ಲಿ ನಿಂತು ಮತಚಲಾಯಿಸಬೇಕಾಯಿತು. ಈ ಮತಕೇಂದ್ರದಲ್ಲಿ ಅಧಿಕಾರಿಗಳ ವಿಳಂಬ ನೀತಿಯಿಂದ ಜನತೆ ಕಿರಿಕಿರಿ ಅನುಭವಿಸುವಂತಾಯಿತು. ಮತಗಟ್ಟೆಗೆ ಬಂದ ಒಬ್ಬ ಮತದಾರ ಕುಸಿದುಬಿದ್ದು ಮೂರ್ಚೆ ಹೋದ ಘಟನೆಯೂ ನಡೆಯಿತು.
ಅಭ್ಯರ್ಥಿಗೇ ಮತವಿಲ್ಲ..!
ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಎಸ್ಡಿಪಿಐ ಅಭ್ಯರ್ಥಿಯಾಗಿ ಬಹು ಚರ್ಚಿತ ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿ ಸ್ಪರ್ಧೆಯು ಹಲವರ ಅಸಮಾಧಾನಕ್ಕೆ ಕಾರಣವಾಗಿತ್ತು. ಸ್ವತ: ಅಭ್ಯರ್ಥಿಯು ಜೈಲಿನಿಂದಲೇ ಬೆಂಬಲಿಗರ ಮೂಲಕ ಅಭ್ಯರ್ಥಿತನಕ್ಕೆ ನಾಮಪತ್ರ ಸಲ್ಲಿಸಿದ್ದ. ಆದರೆ ಸ್ವತ: ಅಭ್ಯರ್ಥಿಯೇ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ ಎಂಬ ಮಾಹಿತಿ ಬೆಳಕಿಗೆ ಬಂದಿದೆ.
ಮತದಾನ ಕೇಂದ್ರದಲ್ಲೂ ಕೇಸರಿ
ಈ ಬಾರಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಬಿಜೆಪಿ ಬಂಡಾಯ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರೂ ಹಿಂದುತ್ವದ ಆಧಾರದಲ್ಲಿ ಸ್ಪರ್ಧೆಗೆ ಇಳಿದು ಸದ್ದು ಮಾಡಿದ್ದಾರೆ. ಈ ಕಾರಣದಿಂದ ಮತದಾನ ಕೇಂದ್ರ ಹೊರಭಾರಭಾಗದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಕಾರ್ಯಕರ್ತರು ಬಿಜೆಪಿ ಧ್ವಜದ ಕೇಸರಿ ಶಾಲಿನಲ್ಲಿ ಕಾಣಿಸಿಕೊಂಡರೆ ಪುತ್ತಿಲ ಪರ ಕಾರ್ಯಕರ್ತರು ಕೇಸರಿ ಶಾಲಿನೊಂದಿಗೆ ವಿವಿಧ ಮತದಾನದ ಕೇಂದ್ರಗಳಲ್ಲಿ ಕಾಣಿಸಿಕೊಂಡು ಗಮನ ಸೆಳೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!