October 10, 2026
Saturday, October 10, 2026
spot_img

ಬಾಕ್ಸ್ ಆಫೀಸ್‌ನಲ್ಲಿ ‘ಪೆದ್ದಿ’ ಪೈಲ್ವಾನ್ ಆರ್ಭಟ: ಅಮೆರಿಕದಲ್ಲಿ ಸೃಷ್ಟಿಯಾಯ್ತು ಹೊಸ ಇತಿಹಾಸ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತು ಜಾನ್ಹವಿ ಕಪೂರ್ ಅಭಿನಯದ, ಬಹುನಿರೀಕ್ಷಿತ ‘ಪೆದ್ದಿ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಹಲವು ಕಾರಣಗಳಿಂದ ಮುಂದೂಡಿಕೆಯಾಗಿದ್ದ ಈ ಸಿನಿಮಾ ಕೊನೆಗೂ ಜೂನ್ 4 ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಗೆ ಬರಲಿದೆ. ವಿಶೇಷವೆಂದರೆ, ಸಿನಿಮಾ ಬಿಡುಗಡೆಗೂ ಮುನ್ನವೇ ವಿದೇಶಿ ಮಾರುಕಟ್ಟೆಯಲ್ಲಿ ಹೊಸ ದಾಖಲೆಗಳನ್ನು ಬರೆಯಲು ಶುರು ಮಾಡಿದೆ.

‘ಪೆದ್ದಿ’ ಚಿತ್ರತಂಡ ಅಮೆರಿಕ ಮತ್ತು ಉತ್ತರ ಅಮೆರಿಕ ಮಾರುಕಟ್ಟೆಯ ಮೇಲೆ ಹೆಚ್ಚಿನ ಗಮನಹರಿಸಿದ್ದು, ಅಲ್ಲಿ ಈಗಾಗಲೇ ಮುಂಗಡ ಬುಕಿಂಗ್ ಪ್ರಾರಂಭವಾಗಿದೆ. ಬುಕಿಂಗ್ ಶುರುವಾದ ಕೇವಲ 24 ಗಂಟೆಗಳಲ್ಲಿ ಸುಮಾರು 1 ಕೋಟಿ ರೂಪಾಯಿಗೂ ಹೆಚ್ಚಿನ ಮೌಲ್ಯದ ಟಿಕೆಟ್‌ಗಳು ಮಾರಾಟವಾಗಿವೆ. ಈ ಮೂಲಕ ರಾಮ್ ಚರಣ್ ತಮ್ಮ ಚಿಕ್ಕಪ್ಪ ಪವನ್ ಕಲ್ಯಾಣ್ ಅವರ ‘ಓಜಿ’ ಸಿನಿಮಾ ಹೆಸರಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ. ಈ ಹಿಂದೆ ‘ಓಜಿ’ ಸಿನಿಮಾ ಮೊದಲ ದಿನ 75 ಲಕ್ಷ ರೂಪಾಯಿ ಮುಂಗಡ ಬುಕಿಂಗ್ ಕಂಡು ದಾಖಲೆ ನಿರ್ಮಿಸಿತ್ತು.

ಗ್ರಾಮೀಣ ಕ್ರೀಡೆಯ ಹಿನ್ನೆಲೆ ಹೊಂದಿರುವ ಈ ಚಿತ್ರದಲ್ಲಿ ರಾಮ್ ಚರಣ್ ದ್ವಿಪಾತ್ರದ ಛಾಯೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಪೋಸ್ಟರ್‌ಗಳಲ್ಲಿ ಕ್ರಿಕೆಟರ್ ಆಗಿ ಕಾಣಿಸಿಕೊಂಡಿದ್ದ ಚರಣ್, ಇತ್ತೀಚಿನ ಟೀಸರ್‌ನಲ್ಲಿ ‘ಪೆದ್ದಿ ಪೈಲ್ವಾನ್’ ಆಗಿ ಅಖಾಡಕ್ಕಿಳಿದಿದ್ದಾರೆ. ಕುಸ್ತಿ ಪಟುವಿನ ಪಾತ್ರಕ್ಕಾಗಿ ರಾಮ್ ಚರಣ್ ಕಠಿಣ ದೈಹಿಕ ಕಸರತ್ತು ನಡೆಸಿದ್ದು, ಅವರ ಟ್ರಾನ್ಸ್‌ಫರ್ಮೇಷನ್ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಈ ಹಿಂದೆ ‘ರಂಗಸ್ಥಳಂ’ ಅಂತಹ ಹಳ್ಳಿ ಕಥೆಯಲ್ಲಿ ನಟಿಸಿ ಹಿಟ್ ನೀಡಿದ್ದ ಚರಣ್, ಈಗ ‘ಪೆದ್ದಿ’ ಮೂಲಕ ಮತ್ತೊಂದು ಬ್ಲಾಕ್ ಬಸ್ಟರ್ ನಿರೀಕ್ಷೆಯಲ್ಲಿದ್ದಾರೆ.

ಬುಚ್ಚಿಬಾಬು ಸನಾ ನಿರ್ದೇಶನದ ಈ ಚಿತ್ರದಲ್ಲಿ ಸ್ಯಾಂಡಲ್‌ವುಡ್ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರು ರಾಮ್ ಚರಣ್ ಅವರ ಗುರುವಿನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಕನ್ನಡಿಗರಿಗೂ ವಿಶೇಷ ಸಂಭ್ರಮ ತಂದಿದೆ. ಜಾನ್ಹವಿ ಕಪೂರ್ ನಾಯಕಿಯಾಗಿ ನಟಿಸಿದ್ದು, ಎ.ಆರ್. ರೆಹಮಾನ್ ಅವರ ಸಂಗೀತ ಈ ಚಿತ್ರಕ್ಕಿದೆ. ಮೈತ್ರಿ ಮೂವಿ ಮೇಕರ್ಸ್ ಮತ್ತು ವೃದ್ಧಿ ಸಿನಿಮಾಸ್ ಜಂಟಿಯಾಗಿ ಈ ಬಿಗ್ ಬಜೆಟ್ ಚಿತ್ರವನ್ನು ನಿರ್ಮಿಸಿವೆ.

ಸಿನಿಮಾದ ಪ್ರಚಾರ ಕಾರ್ಯಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಆರಂಭವಾಗದಿದ್ದರೂ, ಮುಂಗಡ ಬುಕಿಂಗ್‌ನಲ್ಲಿ ಕಾಣಿಸುತ್ತಿರುವ ಈ ವೇಗ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸುವ ಮುನ್ಸೂಚನೆ ನೀಡುತ್ತಿದೆ.

Must Read