ಹೊಸದಿಗಂತ ವರದಿ ವಿಜಯನಗರ:
ಸರ್ಕಾರಿ ಕಚೇರಿಗಳಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಕೆಯಾಗುವ ಅರ್ಜಿಗಳನ್ನು ಅಧಿಕಾರಿಗಳು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡಬೇಕು. ಈ ವಿಷಯದಲ್ಲಿ ವಿಳಂಬ, ನಿರ್ಲಕ್ಷ್ಯ ತೋರಿದರೆ ದಂಡ ಮತ್ತು ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಮಾಹಿತಿ ಹಕ್ಕು ಆಯೋಗದ ಕಲಬುರಗಿ ಪೀಠದ ಆಯುಕ್ತ ಬಿ. ವೆಂಕಟ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.
ಹೊಸಪೇಟೆಯ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ಜಿಲ್ಲೆಯ ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಆಯೋಜಿಸಿದ್ದ ‘ಮಾಹಿತಿ ಹಕ್ಕು ಕಾಯ್ದೆ ತರಬೇತಿ ಕಾರ್ಯಾಗಾರ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮ ಪಂಚಾಯಿತಿಗಳಲ್ಲೇ ಹೆಚ್ಚು ಬಾಕಿ ಅರ್ಜಿಗಳು
ಕಲ್ಯಾಣ ಕರ್ನಾಟಕದ ರಾಯಚೂರು, ಯಾದಗಿರಿ ಹೊರತಾಗಿ ಐದು ಜಿಲ್ಲೆಗಳಲ್ಲಿ ಮಾಹಿತಿ ಹಕ್ಕು ಕಾಯ್ದೆ ಕುರಿತು ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ಸದ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅರ್ಜಿಗಳು ಬಾಕಿ ಉಳಿದಿದ್ದು, ಅಧಿಕಾರಿಗಳು ಸಕಾಲಕ್ಕೆ ಮಾಹಿತಿ ನೀಡಲು ಮುಂದಾಗಬೇಕು ಎಂದರು.
ಮಾಹಿತಿ ನೀಡಲು ವಿಳಂಬ ಮಾಡಿದರೆ ಆಯೋಗಕ್ಕೆ 20 ಸಾವಿರ ರೂ. ವರೆಗೆ ದಂಡ ವಿಧಿಸುವ, ಸಮನ್ಸ್ ಜಾರಿಗೊಳಿಸಿ ಆಯೋಗದ ಎದುರು ಹಾಜರುಪಡಿಸುವ ಹಾಗೂ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡುವ ಅಧಿಕಾರವಿದೆ. ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಮಾಹಿತಿ ಹಕ್ಕು ಆಯೋಗದ ಫಲಕ ಪ್ರದರ್ಶಿಸುವುದು ಶಾಸನಬದ್ಧ ನಿಯಮವಾಗಿದ್ದು, ಈ ಬಗ್ಗೆ ಮುಖ್ಯ ಕಾರ್ಯದರ್ಶಿಗಳ ಸುತ್ತೋಲೆ ಇದ್ದರೂ ಎಷ್ಟು ಇಲಾಖೆಗಳು ಇದನ್ನು ಪಾಲಿಸುತ್ತಿವೆ ಎಂದು ಅಧಿಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಬೆಂಗಳೂರು ಪೀಠದ ಆಯುಕ್ತ ಬದ್ರುದ್ದೀನ್ ಮಾತನಾಡಿ, ಅಧಿಕಾರಿಗಳು ಮಾತೃಸ್ಥಾನದ ಭಾವನೆಯೊಂದಿಗೆ ಕೆಲಸ ಮಾಡಬೇಕು. ಕಠಿಣ ಸಂದರ್ಭಗಳಲ್ಲಿ ಹಗಲಿರುಳು ಯುದ್ಧೋಪಾದಿಯಲ್ಲಿ ಕೆಲಸ ಮಾಡುವ ಅಧಿಕಾರಿಗಳು, ಸರಳವಾದ ಆರ್‌ಟಿಐ ಅರ್ಜಿಯನ್ನು ವಿಲೇವಾರಿ ಮಾಡಲು ಅನಗತ್ಯವಾಗಿ ಗಾಬರಿ ಪಡಬೇಕಾಗಿಲ್ಲ. ನಿಯಮಾವಳಿಗಳ ಪ್ರಕಾರ ನಿಗದಿತ ೩೦ ದಿನಗಳಲ್ಲಿ ಅರ್ಜಿಯನ್ನು ವಿಲೇವಾರಿ ಮಾಡಬೇಕು, ತಪ್ಪಿದಲ್ಲಿ ಸಂಬಂಧಪಟ್ಟ ಅಧಿಕಾರಿಗೆ 1 ಲಕ್ಷ ರೂ. ವರೆಗೆ ದಂಡ ಬೀಳುವ ಸಾಧ್ಯತೆಯಿರುತ್ತದೆ ಎಂದರು.
ಇದನ್ನೂ ಓದಿ:
ಅಲ್ಲದೆ, ಕೇಳಲಾದ ಮಾಹಿತಿ ಈಗಾಗಲೇ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದರೆ ಆ ವಿಷಯವನ್ನು ಅರ್ಜಿದಾರರಿಗೆ ತಿಳಿಸಬೇಕು. ಒಂದು ವೇಳೆ ದೃಢೀಕೃತ ಪ್ರತಿ ಬೇಕಿದ್ದಲ್ಲಿ ಮಾತ್ರ ಪ್ರತಿ ಪುಟಕ್ಕೆ 2 ರೂ. ಗಳಂತೆ ಶುಲ್ಕ ಪಡೆದು ಮಾಹಿತಿ ನೀಡಬಹುದು ಎಂದು ಸ್ಪಷ್ಟಪಡಿಸಿದರು.
ಬೆಂಗಳೂರು ಪೀಠದ ಆಯುಕ್ತ ಡಾ. ಹರೀಶ್ ಕುಮಾರ್ ಮಾತನಾಡಿ, ಇತರ ಇಲಾಖೆಗಳಿಗೆ ಹೋಲಿಸಿದರೆ ಪೊಲೀಸ್ ಠಾಣೆಗಳಲ್ಲಿ ನಡೆಯುವ ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಆರ್‌ಟಿಐ ಕಾಯ್ದೆಯಡಿ ಸಿಸಿಟಿವಿ ಫೂಟೇಜ್‌ಗಳನ್ನು ಕೇಳಿದರೆ ಅದನ್ನು ಒದಗಿಸುವುದು ಕಡ್ಡಾಯವಾಗಿದ್ದು, ಠಾಣೆಗಳಲ್ಲಿ ಕನಿಷ್ಠ ಒಂದು ವರ್ಷದವರೆಗೆ ಸಿಸಿಟಿವಿ ಫೂಟೇಜ್‌ಗಳನ್ನು ಸಂಗ್ರಹಿಸಿಡಬೇಕು ಎಂದು ಸೂಚಿಸಿದರು.
ಆರ್‌ಟಿಐ ಅರ್ಜಿದಾರರೊಂದಿಗೆ ಅನಧಿಕೃತ ಸಂಪರ್ಕ ಬೇಡ
ಆರ್‌ಟಿಐ ಅರ್ಜಿಗಳಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಹಿಂಬಾಗಿಲ ಸಂವಾದ ಅಥವಾ ಫೋನ್ ವ್ಯವಹಾರಗಳು ನಡೆಯಬಾರದು. ಅರ್ಜಿದಾರರು ಅಧಿಕಾರಿಗೆ ಫೋನ್ ಮಾಡುವುದು ಅಥವಾ ಅಧಿಕಾರಿಗಳು ಅರ್ಜಿದಾರರನ್ನು ಕರೆಯಿಸಿ ಮಾತನಾಡುವುದು ಸರಿಯಲ್ಲ, ಏನೇ ಇದ್ದರೂ ಪ್ರಕ್ರಿಯೆಯು ಅಧಿಕೃತ ಪತ್ರವ್ಯವಹಾರಕ್ಕೆ ಮಾತ್ರ ಸೀಮಿತವಾಗಿರಬೇಕು ಎಂದು ಅವರು ತಿಳಿಸಿದರು.
ಕಾರ್ಯಾಗಾರದ ವೇದಿಕೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ಎಸ್., ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಮತ್ತು ಅಪರ ಜಿಲ್ಲಾಧಿಕಾರಿ ಪಿ.ಎನ್. ಲೋಕೇಶ್ ಉಪಸ್ಥಿತರಿದ್ದರು.



