Friday, October 7, 2022

Latest Posts

ಏನೇ ಬ್ಲ್ಯಾಕ್ ಮ್ಯಾಜಿಕ್ ಮಾಡಿದ್ರೂ ಜನತೆ ನಂಬಲಾರರು: ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತವನ್ನು ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಿಸಬೇಕೆಂಬ ಮಹತ್ವಾಕಾಂಕ್ಷಿ ಪ್ರಯತ್ನದ ಭಾಗವಾಗಿ ಹರ್ಯಾಣದ ಪಾಣಿಪತ್‌ನಲ್ಲಿ 909 ಕೋ.ರೂ. ವೆಚ್ಚದಲ್ಲಿ 35 ಎಕರೆ ಪ್ರದೇಶದಲ್ಲಿ ೨ನೇ ತಲೆಮಾರಿನ (6ಜಿ) ಎಥೆನಾಲ್ ಘಟಕವನ್ನ ಪ್ರಧಾನಿ ನರೇಂದ್ರ ಮೋದಿ ವಿಶ್ವ ಜೈವಿಕ ಇಂಧನ ದಿನವಾದ ಆ.10ರಂದು ರಾಷ್ಟ್ರಕ್ಕೆ ಸಮರ್ಪಿಸಿದರು.
ವಿಶಿಷ್ಟ ಸ್ಥಾವರ
ಪಾಣಿಪತ್ ರಿಫೈನರಿ ಸಮೀಪದಲ್ಲೇ ಇಂಡಿಯನ್ ಆಯಿಲ್ ಕಾರ್ಪೊರೇಶನ್ (ಐಒಸಿಎಲ್)ನಿರ್ಮಿಸಿರುವ ಈ ಘಟಕ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದು, ‘ತ್ಯಾಜ್ಯವನ್ನು ಸಂಪತ್ತು ’ಆಗಿ ಪರಿವರ್ತಿಸುವ ಭಾರತದ ಮಹತ್ತರ ಯೋಜನೆಯಾಗಿದೆ.ವಾರ್ಷಿಕವಾಗಿ 6 ಲಕ್ಷ ಟನ್ ಬೈ ಹುಲ್ಲು ಬಳಸಿ ೩ಕೋಟಿ ಲೀಟರ್ ಎಥೆನಾಲ್‌ನ್ನು ಪಡೆಯುವ ಬೃಹತ್ ಯೋಜನೆ ಇದಾಗಿದೆ.ಇದರಿಂದ ರೈತರಿಗೆ ಹೆಚ್ಚುವರಿ ಆದಾಯ ಗಳಿಕೆಗೆ ಅವಕಾಶವಾದಂತಾಗಿದೆ.ಇಲ್ಲಿ ಸ್ಥಾವರ ಕಾರ್ಯಾಚರಣೆಯಲ್ಲಿ ಉದ್ಯೋಗ , ಪರೋಕ್ಷ ಉದ್ಯೋಗ ಸೇರಿದಂತೆ ಸಾವಿರಾರು ಮಂದಿಗೆ ಉದ್ಯೋಗ ಲಭಿಸಲೂ ನೆರವಾಗಲಿದೆ.
ಇದೇ ರೀತಿ ಕಬ್ಬಿನಿಂದಲೂ ಎಥೆನಾಲ್ ಉತ್ಪಾದಿಸುವ ನಿಟ್ಟಿನಲ್ಲಿ ದೇಶದಲ್ಲಿ ಪ್ರಯತ್ನಗಳು ಆರಂಭವಾಗಿರುವುದಿಲ್ಲಿ ಉಲ್ಲೇಖನೀಯ.ಅಲ್ಲದೆ ಹುಲ್ಲನ್ನು ಸುಟ್ಟು ವಾತಾವರಣಕ್ಕೆ ಇಂಗಾಲವನ್ನು ಬಿಟ್ಟು ಭಾರೀ ಪ್ರಮಾಣದಲ್ಲಿ ಮಾಲಿನ್ಯ ಉಂಟು ಮಾಡುವುದೂ ನಿಂತು ಗ್ರೀನ್‌ಹೌಸ್ ಗ್ಯಾಸ್ ಪ್ರಮಾಣ ಇಳಿಕೆಗೆ ನೆರವಾಗಲಿದೆ.ಈ ಯೋಜನೆಯಿಂದ ವಾರ್ಷಿಕ ೩ಲಕ್ಷ ಟನ್ ಕಾರ್ಬನ್ ಡಯಾಕ್ಸೈಡ್‌ಗೆ ಸಮಾನವಾದ ಮಾಲಿನ್ಯ ವಾತಾವರಣಕ್ಕೆ ಸೇರುವುದು ತಡೆಯಲ್ಪಡಲಿದೆ.ಅರ್ಥಾತ್ 63 ಸಾವಿರ ಕಾರುಗಳು ವಾರ್ಷಿಕವಾಗಿ ದೇಶದ ರಸ್ತೆಗಳಲ್ಲಿ ಉಗುಳುವ ಇಂಗಾಲಕ್ಕೆ ಇದು ಸಮವಾಗಿರುತ್ತದೆ ಎಂಬುದಾಗಿ ಹೇಳಲಾಗಿದೆ.
ಉಚಿತ ಸಂಸ್ಕೃತಿಯಿಂದ ದೇಶ ಸ್ವಾವಲಂಬಿಯಾಗದು
ತಮ್ಮ ಸ್ವಾರ್ಥಕ್ಕಾಗಿ ಉಚಿತ ಕೊಡುಗೆ ಘೋಷಿಸುವ ರಾಜಕೀಯದ ಬಗ್ಗೆ ಮಾತನಾಡಿದ ನರೇಂದ್ರ ಮೋದಿ, ರಾಜಕೀಯದಲ್ಲಿ ಸ್ವಾರ್ಥ ಇದ್ದರೆ ಯಾರು ಬೇಕಾದರೂ ಬಂದು ಉಚಿತವಾಗಿ ಪೆಟ್ರೋಲ್, ಡೀಸೆಲ್ ಕೊಡುತ್ತೇವೆ ಎಂದು ಘೋಷಣೆ ಮಾಡಬಹುದು. ಆದರೆ ಇಂತಹ ಕ್ರಮಗಳು ನಮ್ಮ ಮಕ್ಕಳಿಂದ ಅವರ ಹಕ್ಕುಗಳನ್ನ ಕಸಿದುಕೊಳ್ಳುತ್ತವೆ. ದೇಶವು ಸ್ವಾವಲಂಬಿಯಾಗುವುದನ್ನ ತಡೆಯುತ್ತದೆ. ಇಂತಹ ಸ್ವಾರ್ಥ ನೀತಿಗಳಿಂದ ದೇಶದ ಪ್ರಾಮಾಣಿಕ ತೆರಿಗೆದಾರನ ಹೊರೆಯೂ ಹೆಚ್ಚಾಗುತ್ತದೆ. ಆದ್ದರಿಂದ ಇಂತಹ ನೀತಿ ಸರಿಯಲ್ಲ ಎಂದರು.
ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಇಂತಹ ಘೋಷಣೆಗಳನ್ನ ಮಾಡುವವರು ಎಂದಿಗೂ ಹೊಸ ತಂತ್ರಜ್ಞಾನದಲ್ಲಿ ಹೂಡಿಕೆ ಮಾಡುವುದಿಲ್ಲ. ಅವರು ರೈತರಿಗೆ ಸುಳ್ಳು ಭರವಸೆಗಳನ್ನು ನೀಡುತ್ತಾರೆ, ಆದರೆ ರೈತರ ಆದಾಯವನ್ನ ಹೆಚ್ಚಿಸಲು ಮತ್ತು ಸ್ವಾವಲಂಬಿಯಾಗಿಸುವ ನಿಟ್ಟಿನಲ್ಲಿ ಎಥೆನಾಲ್‌ನಂತಹ ಘಟಕಗಳನ್ನು ಎಂದಿಗೂ ಸ್ಥಾಪಿಸಲು ಮುಂದಾಗಲಾರರು ಎಂಬುದಾಗಿ ಮೋದಿಯವರು ಜನತೆಯ ಗಮನ ಸೆಳೆದರು.
ಬ್ಲ್ಯಾಕ್ ಮ್ಯಾಜಿಕ್ ಜನತೆ ನಂಬಲಾರರು:ಕೈಗೆ ಮೋದಿ
ಕಾಂಗ್ರೆಸ್ ನಾಯಕರು ಎಷ್ಟೇ “ಬ್ಲ್ಯಾಕ್ ಮ್ಯಾಜಿಕ್” ಅಥವಾ ಮಾಟಮಂತ್ರದಂತಹ ತಂತ್ರ ನಡೆಸಿದರೂ ದೇಶದ ಜನತೆಯ ವಿಶ್ವಾಸ ಗಳಿಸಲು ಸಾಧ್ಯವಿಲ್ಲ.ಕೆಲವರು ಈಗ “ಬ್ಲ್ಯಾಕ್ ಮ್ಯಾಜಿಕ್”ಗೆ ಮೊರೆಹೋಗಿದ್ದಾರೆ. ಈ ಮೂಲಕ ದೇಶದಲ್ಲಿ ಋಣಾತ್ಮಕತೆ ಮತ್ತು ಹತಾಶೆಯನ್ನು ಹರಡಲು ಯತ್ನಿಸುತ್ತಿದ್ದಾರೆ.“ಬ್ಲ್ಯಾಕ್ ಮ್ಯಾಜಿಕ್”ಪ್ರಚಾರ ತಂತ್ರವನ್ನು ನಾವು ಆ.5 ರಂದು ಕಂಡಿದ್ದೇವೆ ಎಂದು ಹೇಳುವ ಮೂಲಕ , ಆ.5 ರಂದು ಕಪ್ಪು ಬಟ್ಟೆ (ಕಾಂಗ್ರೆಸ್ ನಾಯಕರು ಕಪ್ಪು ಕುರ್ತಾ, ಷರ್ಟ್ , ಕಪ್ಪು ಶಾಲು, ತಲೆಗೆ ಕಪ್ಪು ಶಿರೋವಸ್ತ್ರ ಹಾಗೂ ಸೋನಿಯಾ , ಪ್ರಿಯಾಂಕ ಮತ್ತಿತರ ಮಹಿಳಾ ನಾಯಕರು ಕೂಡ ಕಪ್ಪು ಬಟ್ಟೆ ಧರಿಸಿ ಬಂದಿದ್ದರು)ಧರಿಸಿ ಇದೇ ಮೊದಲ ಬಾರಿಗೆ ನಡೆಸಿದ ಪ್ರತಿಭಟನೆಯ ಹಿನ್ನೆಲೆಯನ್ನು ಉಲ್ಲೇಖಿಸಿ ತರಾಟೆಗೆತ್ತಿಕೊಂಡರು.
ಆ.5 ರಂದು ನಡೆದ ಬ್ಲ್ಯಾಕ್ ಮ್ಯಾಜಿಕ್ ತಂತ್ರವನ್ನು ನಾವು ನೋಡಿದ್ದೇವೆ. ಕಪ್ಪು ಬಟ್ಟೆ ಧರಿಸಿದರೆ ತಮ್ಮ ತಪ್ಪುಗಳಿಂದ ಪಾರಾಗಬಹುದು ಎಂದು ಅವರು ಭಾವಿಸುತ್ತಾರೆ. ಆದರೆ ಅವರು ಎಷ್ಟೇ ಅಬ್ಬರಿಸಿದರೂ, ಎಷ್ಟೇ ಬ್ಲ್ಯಾಕ್ ಮ್ಯಾಜಿಕ್ ಮಾಡಿದರೂ,ಜನತೆ ತಮ್ಮನ್ನು ನಂಬುವುದಿಲ್ಲ ಎಂಬುದು ಅವರಿಗೆ ತಿಳಿದಿಲ್ಲ ಎಂದು ಮೋದಿಯವರು ಮಾರ್ಮಿಕವಾಗಿ ಹೇಳಿದರು. ಆ.5 ರಂದು ಕಾಂಗ್ರೆಸ್ ಬೆಲೆ ಏರಿಕೆ ವಿರೋಧಿಸುವ ಹೆಸರಿನಲ್ಲಿ ಇದೇ ಮೊದಲ ಬಾರಿಗೆ ಕಪ್ಪು ಬಟ್ಟೆ ಧರಿಸಿ ದಿಲ್ಲಿಯಲ್ಲಿ ನಡೆಸಿದ ಪ್ರತಿಭಟನೆ ಹಿಂದಿನ ಹಿನ್ನೆಲೆ ಬಗ್ಗೆ ಈಗ ದೇಶದಲ್ಲಿ ಚರ್ಚೆ ನಡೆಯುತ್ತಿರುವಾಗಲೇ ಪ್ರಧಾನಿ ಹೇಳಿಕೆ ಗಮನ ಸೆಳೆದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!