ನರಹಂತಕ ವ್ಯಾಘ್ರನನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲಲು ಒತ್ತಾಯ !

ಹೊಸದಿಗಂತ ವರದಿ ಮಡಿಕೇರಿ :

ಕೊಡಗು ಜಿಲ್ಲೆಯ ಕುಟ್ಟ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಯೊಳಗೆ ಇಬ್ಬರನ್ನು ಬಲಿ ತೆಗೆದುಕೊಂಡ ನರಹಂತಕ ಹುಲಿಗೆ ಕಂಡಲ್ಲಿ ಗುಂಡಿಕ್ಕಿ ಕೊಲ್ಲಲು ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆ ಕೂಡಲೇ ಅನುಮತಿ ನೀಡಬೇಕೆಂದು ಅಖಿಲ ಕೊಡವ ಸಮಾಜ ಯೂತ್ ವಿಂಗ್ ಒತ್ತಾಯಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಖಿಲ ಕೊಡವ ಸಮಾಜದ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಅವರು, ನರಹಂತಕ ಹುಲಿಯನ್ನು ಹಿಡಿದು ಮತ್ತೊಂದು ಜಾಗಕ್ಕೆ ಸ್ಥಳಾಂತರ ಮಾಡಿ ನಂತರ ಅಲ್ಲಿಯೂ ಮತ್ತೊಂದು ಅವಘಡ ನಡೆಯುವುದಕ್ಕಿಂತ ಸರಕಾರ ಹಾಗೂ ಸಂಬಂಧಪಟ್ಟ ಇಲಾಖೆ ಈ ಹುಲಿಯನ್ನು ಗುಂಡಿಕ್ಕಿ ಕೊಲ್ಲಲು ಆದೇಶ ನೀಡಬೇಕಿದೆ. ಇಲ್ಲವೇ ಈ ಕೂಡಲೇ ಕಾರ್ಯಾಚರಣೆ ಮೂಲಕ ಸೆರೆಹಿಡಿದು ಬೇರೆ ಜಾಗಕ್ಕೆ ಸ್ಥಳಾಂತರ ಮಾಡದೆ, ಮೃಗಾಲಯದಲ್ಲಿಯೇ ಕೂಡಿಡಬೇಕಿದೆ ಎಂದು ಒತ್ತಾಯಿಸಿದ್ದಾರೆ.

ಒಮ್ಮೆ ಮನುಷ್ಯರ ರಕ್ತದ ರುಚಿ ನೋಡಿರುವ ವ್ಯಾಘ್ರ ಮತ್ತೊಮ್ಮೆ ಮನುಷ್ಯರ ಮೇಲೆಯೇ ದಾಳಿ ಮಾಡುತ್ತದೆ ಎನ್ನುವುದಕ್ಕೆ ಸ್ಪಷ್ಟ ಉದಾಹರಣೆ ಕುಟ್ಟ ಸಮೀಪದ ಕೆ.ಬಾಡಗ ವ್ಯಾಪ್ತಿಯ ಚೂರಿಕಾಡುವಿನಲ್ಲಿ ನಡೆದ ಮತ್ತೊಂದು ದುರ್ಘಟನೆ ಸಾಕ್ಷಿಯಾಗಿದೆ. ಈ ಕೂಡಲೇ ಹುಲಿಯನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲಲು ಆದೇಶ ನೀಡಿದರೆ ಗ್ರಾಮಸ್ಥರು ಕೂಡಾ ಇಲಾಖೆಗೆ ಸಾಥ್ ನೀಡುತ್ತಾರೆ. ಕಾನೂನಿಗೆ ಬೆಲೆ ಕೊಡುವ ಮಂದಿ ಕೊಡಗು ಜಿಲ್ಲೆಯವರಾಗಿರುವ ಕಾರಣ ವನ್ಯಮೃಗಗಳ ಕಾಟವನ್ನು ಈಗಲೂ ಸಹಿಸಿಕೊಂಡಿದ್ದಾರೆ ಎಂದು ಪ್ರವೀಣ್ ಹೇಳಿದ್ದಾರೆ.

ಇಂದು ಹುಲಿ ಮನುಷ್ಯನನ್ನು ಕೊಂದಿದೆ, ಇಲ್ಲವೆಂದರೆ ಹುಲಿಯನ್ನೇ ಬೇಟೆಯಾಡುವ ತಾಕತ್ತು ಈಗಲೂ ಈ ಭಾಗದ ಜನರಿಗೆ ಇದೆ. ಈ ಹಿಂದೆ ಹುಲಿಯನ್ನು ಕೊಂದು ಅದರೊಂದಿಗೆ ಮದುವೆ ಮಾಡಿಕೊಂಡ ಕೊಡವರಿಗೆ ಈ ಹುಲಿ ದೊಡ್ಡದೇನು ಅಲ್ಲ. ಇಲಾಖೆಗೆ ಸಾಧ್ಯವಾಗದಿದ್ದರೆ ಸ್ಥಳೀಯರಿಗೆ ಅನುಮತಿ ನೀಡಿ 24 ಗಂಟೆಯೊಳಗೆ ಅದೇ ನರಭಕ್ಷಕ ಹುಲಿ ಇಲಾಖೆಯ ಅಂಗಳದಲ್ಲಿರುತ್ತದೆ ಎಂದು ಅವರು ಕಿಡಿಕಾರಿದ್ದಾರೆ.

ಈಗಾಗಲೇ ಅರಣ್ಯದ ಗಡಿಭಾಗದ ಗುರುತಿಗೆ ಕಲ್ಲುಗಳನ್ನು ಹಾಕುವ ನೆಪದಲ್ಲಿ ಈ ಭಾಗದ ರಸ್ತೆಗಳನ್ನು ಸೇರಿಸಿ ಬೆಳೆಗಾರರ ತೋಟದಂಚಿಗೆ ಗಡಿ ಗುರುತಿನ ಕಲ್ಲುಗಳನ್ನು ಅರಣ್ಯ ಇಲಾಖೆ ಹಾಕಿದೆ. ಅರಣ್ಯದ ಗಡಿ ಗುರುತಿಸುವ ಇಲಾಖೆಗೆ ಕಾಡಿನೊಳಗಿರುವ ವನ್ಯ ಮೃಗಗಳು, ಆ ಗಡಿದಾಟಿ ರೈತರ ಜಮೀನಿಗೆ ಬಾರದಂತೆ ತಡೆಯಲು ಯೋಜನೆ ರೂಪಿಸಬಹುದಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.

ಇದೀಗ ಅಕಾಲಿಕ ಮಳೆಯ ಕಾರಣ ಮತ್ತೆ ಕಾಫಿ ಕೆಲಸ ತಡವಾಗಿ ಆರಂಭವಾಗಿದೆ ಹಾಗೂ ಹಲವಾರು ತೋಟದ ಮಾಲಿಕರು ನೀರು ಹಾಯಿಸಲು ಆರಂಭಿಸಿದ್ದಾರೆ. ವರ್ಷದ ಬದುಕನ್ನು ಕಟ್ಟಿಕೊಳ್ಳುವ ಸಮಯದಲ್ಲಿ ಪ್ರತಿವರ್ಷವೂ ರೈತರಿಗೆ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಿದೆ. ಕಳೆದ ಬಾರಿಯೂ ಬೆಳ್ಳೂರು, ಶ್ರೀಮಂಗಲ ವ್ಯಾಪ್ತಿಯಲ್ಲಿ ವ್ಯಾಘ್ರನ ಅಟ್ಟಹಾಸಕ್ಕೆ ಬೆಳೆಗಾರರು ತತ್ತರಿಸಿದ್ದರು. ಇದೀಗ ಕುಟ್ಟ ಭಾಗದಲ್ಲಿ ಈ ನರಹಂತಕ ವ್ಯಾಘ್ರನ ಉಪಟಳದಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಕಾರ್ಮಿಕರು ಭಯಭೀತರಾಗಿ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ಕಾರ್ಮಿಕರ ಸಮಸ್ಯೆಯಿಂದ ಬೆಳೆಗಾರ ಕಂಗಾಲಾಗಿದ್ದು, ಕೂಡಲೇ ಈ ನರಹಂತಕ ಹುಲಿಯನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲಲು ಆದೇಶ ನೀಡಬೇಕಿದೆ. ಇದಕ್ಕೆ ಇನ್ನಷ್ಟು ಸಮಯ ಹಿಡಿದರೆ ರೈತರು ಹಾಗೂ ಸಾರ್ವಜನಿಕರು ರಸ್ತೆಗೆ ಇಳಿದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಅಖಿಲ ಕೊಡವ ಸಮಾಜದ‌ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಎಚ್ಚರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!