Tuesday, March 28, 2023

Latest Posts

ಮೋದಿ ವಿರುದ್ಧ ಸುಳ್ಳು ಆರೋಪ ಮಾಡುವವರ ಮೇಲೆ ಜನರು ನಂಬಿಕೆ ಇಟ್ಟಿಲ್ಲ: ಸಂಸತ್ತಿನಲ್ಲಿ ಪ್ರಧಾನಿ ಭಾಷಣ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭೆಯಲ್ಲಿ (Lok Sabha) ಇಂದು ಪ್ರತಿಪಕ್ಷಗಳ ಗದ್ದಲದ ನಡುವೆಯೇ ಪ್ರಧಾನಿ ನರೇಂದ್ರ ಮೋದಿ (Narendra Modi), ರಾಷ್ಟ್ರಪತಿಯವರ ಭಾಷಣಕ್ಕೆ ಅಭಿವಂದನೆ ಮಾಡಿದರು.

ರಾಷ್ಟ್ರಪತಿಗೆ ಅಭಿನಂದನೆ ಸಲ್ಲಿಸುತ್ತೇನೆ. ರಾಷ್ಟ್ರಪತಿ ಆದಿವಾಸಿ ಸಮುದಾಯದಗೌರವವನ್ನು ಹೆಚ್ಚಿಸಿದ್ದಾರೆ. ಸ್ವಾತಂತ್ರ್ಯದ ಬಳಿಕ 75ನೇ ವರ್ಷದಲ್ಲಿ ಇದೀಗ ಆದಿವಾಸಿ ಸಮುದಾಯದ ಆತ್ಮವಿಶ್ವಾಸ ಹೆಚ್ಚಾಗಿದೆ. ಇದಕ್ಕೆ ನಾನು ರಾಷ್ಟ್ರಪತಿಗಳಿಗೆ ಆಭಾರಿಯಾಗಿದ್ದೇನೆ. ರಾಷ್ಟ್ರಪತಿ ನಮ್ಮೆಲ್ಲರಿಗೂ ಸ್ಪೂರ್ತಿ ಹಾಗೂ ಮಾದರಿಯಾಗಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ರಾಷ್ಟ್ರಪತಿ ಭಾಷಣದ ಮೇಲೆ ಸದಸ್ಯರು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಅವರೆಲ್ಲರ ಮಾತುಗಳನ್ನು ಗೌರವದಿಂದ ಕೇಳಿಸಿದ್ದೇನೆ. ಕೆಲವು ಮಾತುಗಳನ್ನು ಅರ್ಥೈಸಲು ಪ್ರಯತ್ನಿಸಿದ್ದೇನೆ. ಕೆಲವರು ತಾಳ್ಮೆ, ಯೋಗ್ಯೆತೆ ಸೇರಿದಂತೆ ಹಲುವು ಮಾತುಗಳನ್ನು ಆಡಿದ್ದಾರೆ. ಈ ಸಂದರ್ಭದಲ್ಲಿ ನಾನು ಎಲ್ಲಾ ಸಂಸದ ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಒಂದು ಭಾಷಣದ ನಂತರ ಇಡೀ ಪರಿಸರ ವ್ಯವಸ್ಥೆಯು ಹೇಗೆ ಝೇಂಕರಿಸುತ್ತದೆ ಎಂಬುದನ್ನು ನಾನು ನಿನ್ನೆ ನೋಡಿದೆ. ಕೆಲವರು ತುಂಬಾ ಉತ್ಸುಕರಾಗಿದ್ದರು, ಬಹುಶಃ ಅವರು ಚೆನ್ನಾಗಿ ನಿದ್ದೆ ಮಾಡಿರಬಹುದು. ಹೀಗಾಗಿ ಇಂದು ಎದ್ದೇಳುವಾಗ ವಿಳಂಬವಾಗಿದೆ ಎನಿಸುತ್ತದೆ. ಇನ್ನು ಒಬ್ಬ ಹಿರಿಯ ನಾಯಕ ರಾಷ್ಟ್ರಪತಿಗೂ ಅವಮಾನ ಮಾಡಿದ್ದಾರೆ. ಆದ್ರೆ ರಾಷ್ಟ್ರಪತಿಯವರ ಮಾತುಗಳನ್ನು ಯಾರೂ ಟೀಕಿಸಲಿಲ್ಲ ಎಂದು ನೋಡಿ ತುಂಬಾ ಸಂತೋಷವಾಗಿದೆ ಎಂದರು.

ಇದೇ ವೇಳೆ ರಾಷ್ಟ್ರಪತಿ ಭಾಷಣವನ್ನು ಉಲ್ಲೇಖಿಸಿದ ಮೋದಿ, ಭ್ರಷ್ಟಾಚಾರ ಸೇರಿದಂತೆ ಹಲವು ಸಮಸ್ಯಗಳಿಂದ ಭಾರತೀಯರು ಮುಕ್ತಿ ಬಯಸಿದ್ದರು. ಅದು ಈಗ ಸಾಧ್ಯವಾಗುತ್ತಿದೆ ಎಂದು ದ್ರೌಪದಿ ಮುರ್ಮು ಭಾಷಣವನ್ನು ಮೋದಿ ಸದನದಲ್ಲಿ ಉಲ್ಲೇಖಿಸಿದ್ದಾರೆ. ಈ ಮಾತುಗಳನ್ನು ಇಡೀ ಸದನ ಒಪ್ಪಿಕೊಂಡಿದೆ. ಇದಕ್ಕಿಂತ ಗೌರವ ಇನ್ನೇನಿದೆ ಎಂದು ಮೋದಿ ಹೇಳಿದ್ದಾರೆ.

ಇದೇ ವೇಳೆ ಶಿಕಾರಿ ಹೋದ ಇಬ್ಬರು ಯುವಕರ ಕತೆಯನ್ನು ವಿವರಿಸಿದ ಮೋದಿ, ಬಂದೂಕು, ಇತರ ಸಲಕರಣೆಯೊಂದಿಗೆ ಕಾಡಿಗೆ ಇಬ್ಬರು ಯುವಕರು ಶಿಕಾರಿ ಹೋದರು. ಕಾಡಿನಲ್ಲಿ ವಾಹನ ನಿಲ್ಲಿಸಿ ಸಲಕರಣೆಗಳನ್ನು ಇಳಿಸುತ್ತಿದ್ದರು. ಈ ವೇಳೆ ಕಾಡುಪ್ರಾಣಿ ಮುಂದೇ ಪ್ರತ್ಯಕ್ಷವಾಗಿತ್ತು. ಈ ವೇಳೆ ಬಂದೂಕನ್ನೂ ಇನ್ನೂ ವಾಹನದಿಂದ ಇಳಿಸಿರಲಿಲ್ಲ. ತಕ್ಷಣ ಶಿಕಾರಿ ಹೋದ ಯುವ ತನ್ನ ಬಂದೂಕಿನ ಲೈಸೆನ್ಸ್ ತೋರಿಸಿದ. ಇದೇ ರೀತಿ ಕಾಂಗ್ರೆಸ್ ಬಳಿ ಉದ್ಯೋಗ ಕೇಳಿದರೆ ಕಾನೂನು ತೋರಿಸುತ್ತಿತ್ತು ಎಂದು ಮೋದಿ ಕಾಂಗ್ರೆಸ್ ಆಡಳಿತ ವೈಖರಿ ವಿವರಿಸಿದರು.

ಕೆಲ ದೇಶಗಳಲ್ಲಿ ಆಹಾರಕ್ಕೆ ಪರದಾಡುವ ಸ್ಥಿತಿ ಇದೆ. ನಮ್ಮ ನೆರೆಯ ದೇಶಗಳಲ್ಲೇ ಈ ಸ್ಥಿತಿ ಇದೆ. ಇದರ ನಡುವೆ ಭಾರತ ವಿಶ್ವದ 5ನೇ ಆರ್ಥಿಕತೆಯಾಗಿ ಬೆಳೆದು ನಿಂತಿದೆ. ಜಿ20 ಅಧ್ಯಕ್ಷತೆ ಕೂಡ ಭಾರತಕ್ಕೆ ಸಿಕ್ಕಿದೆ. ಇದು ದೇಶದ ಹಾಗೂ 140 ಕೋಟಿ ಭಾರತೀಯರಿಗೆ ಹೆಮ್ಮೆ ತರುವ ವಿಚಾರವಾಗಿದೆ. ಆದರೆ ಇದು ಕೂಡ ಕೆಲವರಿಗೆ ನೋವು ಹಾಗೂ ದುಃಖ ತರುತ್ತಿದೆ. ಇದು ಯಾರಿಗೆ ನೋವು ತರುತ್ತಿದೆ ಅನ್ನೋದನ್ನು ಆತ್ಮವಿಮರ್ಶೆ ಮಾಡಿಕೊಳ್ಳಿ ಎಂದು ಮೋದಿ ಹೇಳಿದ್ದಾರೆ.

ಕೊರೋನಾ ಸಮಯದಲ್ಲಿ ಅತೀ ದೊಡ್ಡ ರಾಷ್ಟ್ರಗಳು ಆರ್ಥಿಕ ಸಹಾಯ ಮಾಡಲು ಪರದಾಡಿತ್ತು. ಆದರೆ ಭಾರತ ಡಿಜಿಟಲ್ ಇಂಡಿಯಾದಿಂದ ಸುಲಭವಾಗಿ ಸಮಸ್ಯೆಯನ್ನು ನಿಭಾಯಿಸಿತು. ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಶಕ್ತವಾಗಿ ಮುನ್ನುಗ್ಗುತ್ತಿದೆ. ಕೆಲ ದೇಶಗಳು ಲಸಿಕೆಯ ಪ್ರಮಾಣ ಪತ್ರವನ್ನೂ ಇನ್ನೂ ನೀಡಲು ಸಾಧ್ಯವಾಗಿಲ್ಲ. ಆದರೆ ಭಾರತದಲ್ಲಿ ಮೊಬೈಲ್‌ನಲ್ಲಿ ಮರುಕ್ಷಣದಲ್ಲೇ ಲಸಿಕೆ ಪ್ರಮಾಣ ಪತ್ರ ಡೌನ್ಲೋಡ್ ಮಾಡಲು ಸಾಧ್ಯವಿದೆ ಎಂದರು.

ಭಾರತದಲ್ಲಿ ಇಂದು ರಾಜಕೀಯವಾಗಿ ಸ್ಥಿರ ಸರ್ಕಾರ ಇದೆ. ಇದರಿಂದ ಜನರಲ್ಲಿ ಭರವಸೆ ಹೆಚ್ಚಾಗಿದೆ. ಇದು ಪೂರ್ಣ ಬಹುಮತದೊಂದಿಗೆ ಆಡಳಿತ ನಡೆಸುವ ಸರ್ಕಾರವಾಗಿದೆ. ರಾಷ್ಟ್ರದ ಹಿತಕ್ಕಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸರ್ಕಾರವಾಗಿದೆ. ಕೊರೋನಾ ಸಮಯದಲ್ಲಿ ಮೇಡ್ ಇನ್ ಇಂಡಿಯಾ ಲಸಿಕೆ ಅಭಿವೃದ್ಧಿ ಪಡಿಸಲಾಗಿತ್ತು. ಭಾರತ ವಿಶ್ವದ ಅತೀ ದೊಡ್ಡ ಲಸಿಕಾಕರಣ ಅಭಿಯಾನ ನಡೆಸಲಾಗಿತ್ತು . ಇಷ್ಟೇ ಅಲ್ಲ ತನ್ನ ನಾಗರೀಕರಿಗೆ ಉಚಿತ ಲಸಿಕೆ ನೀಡಲಾಗಿದೆ. 150ಕ್ಕೂ ಹೆಚ್ಚು ದೇಶಗಳಿಗೆ ಈ ಸಂಕಷ್ಟದ ಸಮಯದಲ್ಲಿ ಲಸಿಕೆಯನ್ನು ರಫ್ತು ಮಾಡಲಾಗಿದೆ. ಜೊತೆಗೆ ಔಷಧಿಗಳನ್ನು ನೀಡಿದ್ದೇವೆ. ಇದು ವಿಶ್ವದ ಹಲವು ವೇದಿಕೆಗಳಲ್ಲಿ ಭಾರತಕ್ಕೆ ಗೌರವ ಸಿಗುತ್ತಿದೆ ಎಂದು ಮೋದಿ ಹೇಳಿದರು.

ಕಳೆದ 9 ವರ್ಷದಲ್ಲಿ ಭಾರತ ಅತೀ ದೊಡ್ಡ ಸ್ಟಾರ್ಟ್‌ಅಪ್ ದೇಶವಾಗಿ ಹೊರಹೊಮ್ಮಿಯಿದೆ. ಎಲ್ಲಾ ಸಣ್ಣ ಸಣ್ಣ ನಗರ ಹಾಗೂ ಪಟ್ಟಣಗಳಿಗೆ ಸ್ಟಾರ್ಟ್ ಅಪ್ ಸಿಸ್ಟಮ್ ತಲುಪಿದೆ. 108 ಯೂನಿಕಾರ್ನ್ ಕಂಪನಿ ತಲೆಎತ್ತಿದೆ. ಇಂದು ಭಾರತ ವಿಶ್ವದಲ್ಲಿ ಮೊಬೈಲ್ ಉತ್ಪಾದನೆಯಲ್ಲಿ ಎರಡನೇ ಅತೀ ದೊಡ್ಡ ರಾಷ್ಟ್ರವಾಗಿದೆ. ದೇಶಿಯ ವಿಮಾನಯಾನದಲ್ಲಿ ಭಾರತ ವಿಶ್ವದಲ್ಲೇ 3ನೇ ಸ್ಥಾನಕ್ಕೇರಿದೆ. ಇಂಧನ ಬಳಕೆಯಲ್ಲಿ ಭಾರತ ವಿಶ್ವದಲ್ಲಿ 3ನೇ ಸ್ಥಾನಕ್ಕೇರಿದೆ. ಪುನರ್‌ಬಳಕೆ ಸಂಪನ್ಮೂಲ ಬಳಕೆಯಲ್ಲಿ ಭಾರತ 5ನೇ ಸ್ಥಾನಕ್ಕೇರಿದೆ. ಶಿಕ್ಷಣ ಕ್ಷೇತ್ರದಲ್ಲಿ ಭಾರತ ಅಭಿವೃದ್ಧಿಯಾಗಿದೆ. ಇದೇ ಮೊದಲ ಬಾರಿಗೆ ಸ್ನಾತಕೋತ್ತರ ಪದವಿ ಪ್ರವೇಶ ಸಂಖ್ಯೆ ಹೆಚ್ಚಾಗಿದೆ. ವಿದ್ಯಾರ್ಥಿನಿಯರ ಶಿಕ್ಷಣ ಪ್ರಮಾಣ ಹೆಚ್ಚಾಗಿದೆ. ಒಲಿಂಪಿಂಕ್, ಕಾಮನ್‌ವೆಲ್ತ್ ಸೇರಿದಂತೆ ಕ್ರೀಡೆಗಳಲ್ಲಿ ಭಾರತೀಯರು ಉತ್ತಮ ಪ್ರದರ್ಶನ ನೀಡಿ ಭಾರತ ಕೀರ್ತಿ ಹೆಚ್ಚಿಸಿದ್ದಾರೆ. ದೇಶದ ಪ್ರತಿ ಕ್ಷೇತ್ರದಲ್ಲಿ ಆಶಾಭಾವನೆ ವ್ಯಕ್ತವಾಗುತ್ತಿದೆ ಎಂದು ಮೋದಿ ಹೇಳಿದರು.

‘2004 ರಿಂದ 2014 ಹಗರಣಗಳ ದಶಕವಾಗಿತ್ತು. ನಮ್ಮಲ್ಲಿ ದೇಶದಲ್ಲಿ ತಂತ್ರಜ್ಞಾನ ವೇಗವಾಗಿ ಮುಂದುವರಿಯುತ್ತಿರುವಾಗ ಯುಪಿಎ ಸರ್ಕಾರ 2ಜಿ ಹಗರಣದಲ್ಲಿ ಮುಳುಗಿತ್ತು. 2010ರಲ್ಲಿ ಕಾಮನ್‌ವೆಲ್ತ್ ಗೇಮ್ಸ್ ಆಯೋಜಿಸಲಾಗಿತ್ತು. ಈ ವೇಳೆ ಕಾಂಗ್ರೆಸ್ CWG ಹಗರಣ ಮಾಡಿತು. ಚುನಾವಣೆಯಲ್ಲಿ ಸೋತರೆ ಇವಿಎಂ ಮೇಲೆ ಆರೋಪ, ಚುನಾವಣಾ ಆಯೋಗದ ಮೇಲೆ ಆರೋಪ ಮಾಡುತ್ತಾರೆ. ಭಾರತೀಯ ಸೇನೆ ಪರಾಕ್ರಮ ತೋರಿಸಿದರೆ ಅದನ್ನೂ ಪ್ರಶ್ನಿಸಿ ಆರೋಪದದ ಸುರಿಮಳೆ ಮಾಡುತ್ತದೆ. ಆರ್ಥಿಕ ಪ್ರಗತಿ ವರದಿ ಬಂದರೆ, ಆರ್‌ಬಿಐ ಸೇರಿದಂತೆ ಇತರ ಸಂಸ್ಥೆಗಳ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಚಾಟಿ ಬೀಸಿದರು.

ಆದ್ರೆ ಮೋದಿ ವಿರುದ್ಧ ಸುಳ್ಳು ಆರೋಪ ಮಾಡುವವರ ಮೇಲೆ ಜನರು ನಂಬಿಕೆ ಇಟ್ಟಿಲ್ಲ. 3 ಕೋಟಿಗೂ ಹೆಚ್ಚು ಮಂದಿಗೆ ಮನೆ ಸಿಕ್ಕಿದೆ. 80 ಕೋಟಿ ಹೆಚ್ಚು ಮಂದಿ ಉಚಿತ ಪಡಿತರ ಪಡೆದಿದ್ದಾರೆ. 9 ಕೋಟಿಗೂ ಹೆಚ್ಚು ಕುಟುಂಬಕ್ಕೆ ಗ್ಯಾಸ್ ಸಂಪರ್ಕ ಸಿಕ್ಕಿದೆ. 11 ಕೋಟಿಗೂ ಹೆಚ್ಚು ಕುಟುಂಬಕ್ಕೆ ಶೌಚಾಲಯ ಸಿಕ್ಕಿದೆ. ಈ ಕುಟುಂಬ ಈ ಜನರು ಮೋದಿ ವಿರುದ್ಧ ಸುಳ್ಳು ಆರೋಪಗಳನ್ನು ನಂಬುವುದಿಲ್ಲ ಎಂದು ತಿರುಗೇಟು ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!