ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದೆರಡೇ ದಿನದ ಮಳೆಗೆ ಬೆಂಗಳೂರು ಜನ ಹೈರಾಣಾಗಿದ್ದಾರೆ. ನಗರದಲ್ಲಿ ಸಾಕಷ್ಟು ಅನಾಹುತಗಳು ಸಂಭವಿಸಿದ್ದು, ಮಳೆಗೆ ಮನೆಯ ಗೋಡೆ ಕುಸಿತ, ಮನೆಯೊಳಗೆ ನೀರು ಹಾಗೂ ರಸ್ತೆಯಲ್ಲಿ ಮರ ಬಿದ್ದು ಸಮಸ್ಯೆಗಳಾಗಿದೆ.
ಆರ್.ಆರ್. ನಗರ ಜ್ಞಾನಭಾರತಿ, ಏಪೋರ್ಟ್ ರಸ್ತೆ, ಸುಂಕದಕಟ್ಟೆ ಸೇರಿದಂತೆ ಹಲವೆಡೆ ರಸ್ತೆಗಳಲ್ಲಿ ಮಳೆ ನೀರು ತುಂಬಿ ಹರಿದಿದೆ. ಮಳೆಯ ಅಬ್ಬರಕ್ಕೆ ತಡರಾತ್ರಿ ನಗರ ವಾಸಿಗಳು ಹೈರಾಣಾಗಿದ್ದಾರೆ. ಅನ್ನಪೂರ್ಣೇಶ್ವರಿ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ನಿದ್ದೆಯಿಲ್ಲದೇ ಸ್ಥಳೀಯರು ರಾತ್ರಿಯೆಲ್ಲ ನೀರನ್ನು ಹೊರಹಾಕುವ ಕೆಲಸ ಮಾಡಿದ್ದಾರೆ. ಮನೆಯ ವಸ್ತುಗಳೆಲ್ಲ ಮಳೆಗೆ ಒದ್ದೆಯಾಗಿದ್ದು, ಎಲೆಕ್ಟ್ರಾನಿಕ್ ವಸ್ತುಗಳಿಗೆ ಸಮಸ್ಯೆಯಾಗಿದೆ.
ಇದರ ಜೊತೆಗೆ ಚಾಮರಾಜಪೇಟೆಯಲ್ಲೂ ಮನೆಗಳಿಗೆ ನೀರು ನುಗ್ಗಿ ಅವಾಂತರವಾಗಿದೆ. ಬಿನ್ನಿ ಮಿಲ್ ಬಳಿಯ ಖಾಸಗಿ ಅಪಾರ್ಟ್ಮೆಂಟ್ ನಿಂದ ಹರಿಯುವ ನೀರು, ಗೋಡೆಯಿಂದ ಸೋರಿ ರಾಯಪುರ ಅಕ್ಕಪಕ್ಕದಲ್ಲಿರುವ ಮನೆಗಳಿಗೆ ನುಗ್ಗಿ ಅವಾಂತರ ಉಂಟಾಗಿದೆ. ಇದರಿಂದ ರೊಚ್ಚಿಗೆದ್ದ ನಿವಾಸಿಗಳು ಅಪಾರ್ಟ್ಮೆಂಟ್ ಮುಂದೆ ಮಳೆಯಲ್ಲಿಯೇ ಕುಳಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆಯ ಮಳೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 70 ಮರಗಳು ನೆಲಕ್ಕುರುಳಿದ್ರೆ, 171 ಮರಗಳ ರೆಂಬೆ ಕೊಂಬೆಗಳು ಮುರಿದು ಬಿದ್ದಿದೆ.
ಇನ್ನೂ ನಾಗರಬಾವಿಯ ನೃಪತುಂಗ ನಗರದ 4ನೇ ಮುಖ್ಯ ರಸ್ತೆಯಲ್ಲಿ ಸಾಲು ಸಾಲಾಗಿ ಮರಗಳು ಬಿದ್ದಿದ್ದು, ಒಂದೇ ರಸ್ತೆಯ ಉದ್ದಕ್ಕೂ ಸುಮಾರು 10ಕ್ಕೂ ಅಧಿಕ ಮರಗಳು ನೆಲಕ್ಕಚ್ಚಿದೆ, ಪರಿಣಾಮ ಮರದ ಕೆಳಗೆ ಪಾರ್ಕ್ ಮಾಡಿದ್ದ ಕಾರುಗಳ ಗಾಜು ಪುಡಿ ಪುಡಿಯಾಗಿದೆ. ಇಡೀ ರಸ್ತೆಯಲ್ಲಿ ಮರದ ರೆಂಬೆಕೊಂಬೆಗಳು ಬಿದ್ದು ಇಂದು ಇಡೀ ದಿನ ಈ ರಸ್ತೆ ಸಂಚಾರ ಬಂದ್ ಆಗಿತ್ತು. ಆದಷ್ಟು ಬೇಗ ಮರಗಳನ್ನು ತೆರವು ಮಾಡುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಸ್ಥಳೀಯರು ಮನವಿ ಮಾಡಿದ್ದಾರೆ.