ಹೊಸದಿಗಂತ ಡಿಜಿಟಲ್ ಡೆಸ್ಕ್:
ವ್ಯಕ್ತಿಯೊಬ್ಬ ಎಸ್‌ಎಸ್‌ಎಲ್‌ಸಿ ಓದು ಮುಗಿಸಿದ್ದ ವಿದ್ಯಾರ್ಥಿನಿಯ ತಲೆ ಕಡಿದು ಭೀಕರವಾಗಿ ಕೊಂದಿದ್ದ ಪ್ರಕರಣ ರಾಜ್ಯದ ಜನತೆಯನ್ನು ಬೆಚ್ಚಿಬೀಳಿಸುವಂತೆ ಮಾಡಿತ್ತು. ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿ ಗ್ರಾಮದಲ್ಲಿ ನಡೆದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಕೊಲೆ ಪ್ರಕರಣದ ಆರೋಪಿ ಪ್ರಕಾಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಜೊತೆ 34 ವರ್ಷದ ಪ್ರಕಾಶ್ ನಿಶ್ಚಿತಾರ್ಥ ನಿಶ್ಚಯವಾಗಿತ್ತು. ಆದರೆ ಹುಡುಗಿ ಮೈನರ್ ಎನ್ನುವ ಕಾರಣಕ್ಕೆ ಮದುವೆಗಾಗಿ ಕಾಯುವಂತೆ ಹೇಳಲಾಗಿತ್ತು. ಇದರಿಂದ ಸಿಟ್ಟಾದ ಪ್ರಕಾಶ್ ಹುಡುಗಿಯ ಮನೆಗೆ ಬಂದು ಆಕೆಯ ತಂದೆಯ ಜೊತೆ ಜಗಳ ಆಡಿ, ತಾಯಿಯ ಕೈ ಕಡಿದು ಆಕೆಯನ್ನು ಎಳೆದುಕೊಂಡು ಹೋಗಿದ್ದ. ನಂತರ ಮನೆಯಿಂದ ಸ್ವಲ್ಪ ದೂರದಲ್ಲಿ ಆಕೆಯ ರುಂಡವನ್ನು ಕತ್ತರಿಸಿದ್ದ.
ಪೊಲೀಸರು ಹಲವು ತಂಡಗಳನ್ನು ಮಾಡಿ ಶೋಧ ಕಾರ್ಯ ನಡೆಸುತ್ತಿದ್ದರು. ಸದ್ಯ ಸೋಮವಾರಪೇಟೆ ತಾಲೂಕಿನ ಗ್ರಾಮವೊಂದರಲ್ಲಿ ಅಡಗಿದ್ದ ಆರೋಪಿ ಪ್ರಕಾಶ್‌ನನ್ನು ಸೋಮವಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಮಡಿಕೇರಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾಹಿತಿ ನೀಡಿದ್ದಾರೆ.