ಹೊಸದಿಗಂತ ಡಿಜಿಟಲ್ ಡೆಸ್ಕ್:
ಫೆಂಗಲ್ ಚಂಡಮಾರುತ ಪ್ರಭಾವ ಕರಾವಳಿ ಜಿಲ್ಲೆಗಳನ್ನು ಅಕ್ಣರಶಃ ಕಂಗಾಲಾಗಿಸಿದ್ದು, ಮಂಗಳವಾರ ನಸುಕಿನಿಂದಲೇ ಎಲ್ಲೆಡೆ ಧಾರಾಕಾರ ಮಳೆಯಾಗುತ್ತಿದೆ.
ಕಡಲತೀರದ ಪಟ್ಟಣ ಮಂಗಳೂರು ಜಡಿಮಳೆಗೆ ಹೈರಾಣಾಗಿದ್ದು, ಅಲ್ಲಲ್ಲಿ ಸಂಕಷ್ಟದ ‘ಸುರಿಮಳೆ’ ಕಂಡುಬಂದಿದೆ. ಉಳ್ಳಾಲ, ಬಂಟ್ವಾಳ ಸಹಿತ ಹಲವೆಡೆ ತಗ್ಗುಪ್ರದೇಶಗಳಲ್ಲಿ ಮಳೆ ನೀರು ಸಂಕಷ್ಟ ತಂದಿಟ್ಟಿದೆ.
ಮಂಗಳೂರು ಬೆಂಗಳೂರು ರಾಷ್ಟ್ರಿಯ ಹೆದ್ದಾರಿಯಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು, ಮಳೆ ಸಂಚಾರವನ್ನು ಇನ್ನಷ್ಟು ಬಿಗಡಾಯಿಸಿದೆ. ಕಾಸರಗೋಡು ಹೆದ್ದಾರಿಯಲ್ಲೂ ಹಲವು ಅಧ್ವಾನಗಳು ಸೃಷ್ಟಿಯಾಗಿದೆ.
ಕಡಲಿನ ಆರ್ಭಟ ಕೂಡಾ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕರಾವಳಿ ಭಾಗದ ಮೀನುಗಾರರಿಗೆ ಕಡಲಿಗಿಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಇನ್ನು ಪ್ರವಾಸಿಗರು, ಕಡಲತೀರದ ಜನತೆಯ ಮೇಲೂ ಕೂಡಾ ರಕ್ಷಣಾ ಸಿಬ್ಬಂದಿಗಳು ಹದ್ದಿನಕಣ್ಣಿರಿಸಿದ್ದಾರೆ.
ಉಡುಪಿ, ಕಾಸರಗೋಡು ಭಾಗದಲ್ಲಿಯೂ ಮಳೆಯ ಆರ್ಭಟ ಜೋರಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ.