ಒಳ್ಳೆಯ ಕಾರ್ಯಗಳಿಗೆ ಅಡ್ಡಿಪಡಿಸುವ ಜನರಿಗೆ ಕಿಮ್ಮತ್ತು ಕೊಡಬೇಕಿಲ್ಲ: ಬಿ.ವೈ.ವಿಜಯೇಂದ್ರ

ಹೊಸದಿಗಂತ ವರದಿ, ಚಿತ್ರದುರ್ಗ :

ಯಾರು ಒಳ್ಳೆಯ ಕೆಲಸಗಳನ್ನು ಮಾಡಲು ತುಡಿಯುತ್ತಾರೋ ಅವರಿಗೆ ಅಡ್ಡಿಪಡಿಸುವ ಜನರು ಇಂದು ಹೆಚ್ಚಾಗಿದ್ದಾರೆ. ಇಂತವರಿಗೆ ಕಿಮ್ಮತ್ತು ಕೊಡುವ ಅವಶ್ಯಕತೆ ಇಲ್ಲ ಎಂದು ಶಿಕಾರಿಪುರದ ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಸಿರಿಗೆರೆಯಲ್ಲಿ ನಡೆಯುತ್ತಿರುವ ಲಿಂ.ಶಿವಕುಮಾರ ಶ್ರೀಗಳ ೩೨ನೇ ಶ್ರದ್ಧಾಜಂಲಿ ಸಮಾರಂಭದ ನಾಲ್ಕನೇ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದು ರಾಜಕೀಯವಾಗಿ, ಧಾರ್ಮಿಕವಾಗಿ, ಸಾಮಾಜಿಕವಾಗಿ ಸಮಸ್ಯೆಗಳು ಉಲ್ಭಣವಾಗುತ್ತಿವೆ. ಒಂದು ದೇಶ ಒಂದು ಚುನಾವಣೆಗೆ ಸಂಬಂಧಿಸಿದಂತೆ ಶ್ರೀಗಳು ತಮ್ಮ ಅಂಕಣದಲ್ಲಿ ಸಮ್ಮತಿಸಿದ್ದಾರೆ. ಸಿರಿಗೆರೆ ಮಠ ಒಂದು ತಪೋವನ. ಹಸಿದವರ ಪಾಲಿಗೆ ದಾಸೋಹದ ಮಹಿಮೆ ತಿಳಿಸಿ ಲಕ್ಷಾಂತರ ಮಕ್ಕಳಿಗೆ ಜ್ಞಾನದ ಬೆಳಕನ್ನು ಬೆಳಗಿಸಿದವರು ಶಿವಕುಮಾರ ಶ್ರೀಗಳವರು. ದೇಶದ ಭವಿಷ್ಯ ಅಡಗಿರುವುದು ಯುವ ಸಮುದಾಯದ ಮೇಲೆ. ಯುವಕರು ಸ್ವಾರ್ಥಿಗಳಾಗದೆ ತಂದೆ-ತಾಯಿಗಳಿಗೆ ಬೆಲೆ ನೀಡಿ ಸಾಧನೆಯ ಕಡೆಗೆ ಮುಖ ಮಾಡಿ ಎಂದು ಕರೆ ನೀಡಿದರು.

ಅಂತರಾಷ್ಟ್ರೀಯ ಕೃಷಿ ವಿಜ್ಞಾನಿ ಡಾ. ಎಸ್.ಎಲ್.ಕೃಷ್ಣಮೂರ್ತಿ ಮಾತನಾಡಿ, ರೈತರಿಗೋಸ್ಕರ ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ೧೬ ಭತ್ತದ ತಳಿಗಳನ್ನು ರೂಪಿಸಿದ್ದೇವೆ. ರೈತರು ಆಧುನಿಕ ಬೇಸಾಯ ಪದ್ಧತಿ ಬೆಳೆಸಿ ಹೆಚ್ಚು ಆದಾಯ ಬರುವ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು. ಮೊದಲು ೧೦೦ ಅಡಿಯ ಒಳಗೆ ಭೂಮಿಯಲ್ಲಿ ನೀರು ಸಿಗುತ್ತಿತ್ತು. ಆದರೆ ಮುಂದಿನ ದಿನಗಳಲ್ಲಿ ೧೦೦೦ ಅಡಿ ದಾಟಿದರೂ ನೀರು ಸಿಗದ ಸ್ಥಿತಿ ನಿರ್ಮಾಣವಾಗುತ್ತದೆ. ಹಾಗಾಗಿ ರೈತರು ಕಡಿಮೆ ನೀರಿನಲ್ಲಿ ಹೆಚ್ಚು ಬೆಳೆ ಬೆಳೆಯುವ ತಳಿಗಳನ್ನು ಬಳಸಬೇಕಿದೆ. ತರಳಬಾಳು ಕೆ.ವಿ.ಕೆ ಸಂಸ್ಥೆಯಿಂದ ಸಹ ಅನೇಕ ತಳಿಗಳು ಜಾರಿಯಲ್ಲಿವೆ ಎಂದರು.

ಹೊನ್ನಾಳಿ ಶಾಸಕ ಡಿ.ಜೆ.ಶಾಂತನಗೌಡ ಮಾತನಾಡಿ, ವಿಶ್ವದ ಭೂಪಟದಲ್ಲಿ ತಮ್ಮ ಕ್ರಾಂತಿಕಾರಿ ಆಡಳಿತದ ಮೂಲಕ ಸಿರಿಗೆರೆಯ ಮಠದ ಹೆಸರನ್ನು ಉತ್ತುಂಗಕ್ಕೆ ಏರುವಂತೆ ಮಾಡಿದವರು ಶಿವಕುಮಾರ ಶ್ರೀಗಳು. ಸಿರಿಗೆರೆ ಮಠಕ್ಕೆ ಮುಂದಿನ ಉತ್ತರಾಧಿಕಾರಿಯಾಗಿ ಉತ್ತಮ ವ್ಯಕ್ತಿ ಬರಲಿದ್ದಾರೆ. ಮಠದ ವಿರುದ್ಧ ಭೂಟಾಟಿಕೆ ಮಾಡದೇ ಮಠದ ಉನ್ನತಿಗೆ ಎಲ್ಲರೂ ಸಹಕರಿಸಿ ಎಂದರು.

ಬೆಂಗಳೂರು ಪಿ.ಈ.ಎಸ್ ವಿಶ್ವವಿದ್ಯಾನಿಲಯದ ಕುಲಪತಿ ಸೂರ್ಯಪ್ರಸಾದ್ ಮಾತನಾಡಿ ಗ್ರಾಮೀಣ ಮಕ್ಕಳು ಕೀಳರಿಮೆಯಿಂದ ಹೊರಗೆ ಬರಬೇಕು. ಗುರಿ ದೊಡ್ಡದಾಗಿದ್ದರೆ ಬದುಕು ದೊಡ್ಡದಾಗುತ್ತದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಸಾಧನೆ ವಿಶ್ವಕ್ಕೆ ಮಾದರಿಯಾಗಿದೆ ಎಂದು ಹೇಳಿದರು. ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ನಿವೃತ್ತ ಪ್ರಾಚಾರ್ಯ ನಾ. ಲೋಕೇಶ ಒಡೆಯರ್ ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಲಿಂ. ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ ಕೊಡುಗೆ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.

ವಿಧಾನ ಪರಿಷತ್ ಶಾಸಕ ಕೆ.ಎಸ್.ನವೀನ್, ಶ್ರೀಮತ್ ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ. ಚಿತ್ರದುರ್ಗ ರಕ್ಷಣಾಧಿಕಾರಿ ರಂಜಿತ್ ಕುಮಾರ್, ತರಳಬಾಳು ವಿದ್ಯಾಸಂಸ್ಥೆಯ ವಿಶೇಷಾಧಿಕಾರಿ ವೀರಣ್ಣ ಎಸ್. ಜತ್ತಿ ಸ್ವಾಗತಿಸಿದರು. ಟಿ.ಉಮೇಶ್ ಕಾರ್ಯಕ್ರಮ ನಿರೂಪಿಸಿದರು.

- Advertisement - Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!