ಸುದೀಪ್‍ಗೆ ಅವಮಾನ ಮಾಡಿದ ವಿಪಕ್ಷಗಳಿಗೆ ಜನರೇ ತಕ್ಕ ಉತ್ತರ ನೀಡ್ತಾರೆ-ಗೌರವ್ ಭಾಟಿಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕನ್ನಡಿಗರ ನೆಚ್ಚಿನ ನಟ ಕಿಚ್ಚ ಸುದೀಪ್ ಅವರ ನಿಲುವನ್ನು ಪ್ರಶ್ನಿಸುವ ಮತ್ತು ಅವರನ್ನು ಅವಮಾನಿಸುವ ಮೂಲಕ ಕನ್ನಡಿಗರಿಗೆ ಅವಮಾನ ಮಾಡಿದ ಕಾಂಗ್ರೆಸ್- ಜೆಡಿಎಸ್ ಪಕ್ಷಕ್ಕೆ ಪ್ರಜ್ಞಾವಂತ ಜನತೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯ ಅವರು ವಿಶ್ವಾಸದಿಂದ ನುಡಿದರು.

ಮಲ್ಲೇಶ್ವರದ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಪಕ್ಷದ ಮುಖಂಡರು ತಮ್ಮ ಮೂಗಿನ ನೇರಕ್ಕೆ ಮಾತನಾಡುತ್ತಾರೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ತಮಗೆ ಬೇಕಾದಂತೆ ವಿಶ್ಲೇಷಿಸಿ ಬಳಸುತ್ತಾರೆ ಎಂದು ಟೀಕಿಸಿದರು.

ಸುದೀಪ್ ಪ್ರಜಾಸತ್ತೆಯ ಸ್ವಾತಂತ್ರ್ಯದ ಆಧಾರದಲ್ಲಿ ಬಸವರಾಜ ಬೊಮ್ಮಾಯಿ ಅವರನ್ನು ಮತ್ತು ಬಿಜೆಪಿ ಬೆಂಬಲಿಸುವ ನಿರ್ಣಯ ತೆಗೆದುಕೊಂಡಿದ್ದಾರೆ. ಆದರೆ, ಇವೆರಡು ಪಕ್ಷಗಳು ಕಿಚ್ಚ ಸುದೀಪ್ ವಿರುದ್ಧ ಟೀಕೆ ಮಾಡುತ್ತಿವೆ. ವಿವಿಧ ಏಜೆನ್ಸಿಗಳಿಂದ ತನಿಖೆ ತಪ್ಪಿಸಿಕೊಳ್ಳಲು ಹೀಗೆ ಮಾಡಿದ್ದಾಗಿ ಟೀಕಿಸುತ್ತಿವೆ ಎಂದು ಆಕ್ಷೇಪಿಸಿದರು.

ಭಾರತ್ ಜೋಡೋ ಹೆಸರಿನ ಭಾರತ್ ತೋಡೋ ಯಾತ್ರೆ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಜೊತೆ ದೇಶದ್ರೋಹಿಗಳು, ತುಕ್ಡೇ ತುಕ್ಡೇ ಗ್ಯಾಂಗಿನವರು ಹೆಜ್ಜೆ ಹಾಕಿದ್ದರು. ರಾಹುಲ್ ಗಾಂಧಿಯವರಿಗೆ ಜನಪ್ರಿಯತೆ ಇಲ್ಲದ ಕಾರಣ ಸ್ವರಾ ಭಾಸ್ಕರ್ ಅವರಂಥವರು ಬೇಕಾಯಿತೇ ಎಂದು ಪ್ರಶ್ನಸಿದರು. ದೇಶದ ವಿರುದ್ಧ ಘೋಷಣೆ ಕೂಗುವವರು ಅವರಿಗೆ ಬೇಕಾಯಿತು ಎಂದು ಕಿಡಿ ಕಾರಿದರು.

ಕಾಂಗ್ರೆಸ್- ಜೆಡಿಎಸ್‍ನದು ಅನಾರೋಗ್ಯದ ಮನಸ್ಥಿತಿ, ಬೂಟಾಟಿಕೆ ಎಂದು ಟೀಕಿಸಿದರು. ಕಿಚ್ಚ ಸುದೀಪ್ ಪರಿಶ್ರಮದಿಂದ ಸ್ವತಃ ಜನರ ನಡುವೆ ಬೆಳೆದು ಅಪಾರ ಜನಪ್ರಿಯತೆ ಗಳಿಸಿದವರು. ರಾಹುಲ್ ಗಾಂಧಿಯಂತೆ ಕುಟುಂಬದ ಆಧಾರದಲ್ಲಿ ಬಂದವರಲ್ಲ. ಈ ಬುಡಕಟ್ಟು ಸಮಾಜದವರನ್ನು ಟೀಕಿಸುತ್ತಿದ್ದಾರೆ. ಇದು ಕನ್ನಡಿಗರಿಗೆ ಮಾಡಿದ ಅವಮಾನವಲ್ಲವೇ? ಎಂದು ಪ್ರಶ್ನಿಸಿದರು.

ರಾಹುಲ್ ಗಾಂಧಿ ವಿದೇಶದಲ್ಲಿ ಭಾರತದ ಪ್ರಜಾಪ್ರಭುತ್ವದ ವಿರುದ್ಧ ಮಾತನಾಡಿದರೆ ಅದು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಕಾಂಗ್ರೆಸ್ ಹೇಳುತ್ತದೆ. ಆದರೆ, ಕಿಚ್ಚ ಸುದೀಪ್ ಅವರಂಥ ಸಿನಿತಾರೆ ತಮ್ಮ ಬೆಂಬಲವನ್ನು ಯಾರಿಗೆ ಕೊಡಬೇಕೆಂದು ಆಯ್ಕೆ ಮಾಡುವುದು ಅಭಿವ್ಯಕ್ತಿ ಸ್ವಾತಂತ್ರ್ಯ ಅಲ್ಲವೇ?. ಬಿಜೆಪಿಗೆ ಸುದೀಪ್ ಅವರ ಬೆಂಬಲದಿಂದ ಕಾಂಗ್ರೆಸ್ -ಜೆಡಿಎಸ್ ಇನ್ನಷ್ಟು ದುರ್ಬಲವಾಗುವ ಆತಂಕ ಅವೆರಡು ಪಕ್ಷದವರಲ್ಲಿದೆ.

ಈ ಚುನಾವಣಾ ಸಮರ ರಾಷ್ಟ್ರಹಿತ ವಿಚಾರಧಾರೆಯ ಆಧಾರದಲ್ಲಿ ಮುಂದುವರಿಯಲಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!