ಹೊಸದಿಗಂತ ವರದಿ, ಹುಬ್ಬಳ್ಳಿ:
ಕೇಂದ್ರ ಬಿಜೆಪಿ ಸರ್ಕಾರ ಜನರಿಗೆ ನೀಡಿದ ಭರವಸೆಗಳನ್ನು ಈಡೇರೆಸಿಲ್ಲ. ಆದ್ದರಿಂದ ರಾಜ್ಯದ ಜನರು ೨೦೨೪ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿಗೆ ಖಾಲಿ ಚೊಂಬು ನೀಡಲಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ವ್ಯಂಗ್ಯವಾಡಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಅಂದರೆ ಭಾರತೀಯ ಚೊಂಬು ಪಾರ್ಟಿಯಾಗಿದೆ. ಬಿಜೆಪಿ ಕರ್ನಾಟಕ್ಕೆ ನೀಡಿರುವುದು ಶೂನ್ಯ. ಬರ ಪರಿಹಾರ ನೀಡದೆ ಮಲತಾಯಿ ಧೋರಣೆ ಮಾಡಿದೆ. ತೆರಿಗೆ ಹಂಚಿಕೆ ನೀಡದೆ ಜನರಿಗೆ ಮೋಸ ಮಾಡುತ್ತಿದ್ದಾರೆ. ನಾವು ಭಿಕ್ಷೆ ಬೇಡುತ್ತಿಲ್ಲ. ಜನರು ತೆರಿಗೆ ಕಟ್ಟಿದ್ದಾರೆ. ಆದ್ದರಿಂದ ಕಾಂಗ್ರೆಸ್ ರಾಜ್ಯ ಸರ್ಕಾರ ಹಣ ವಾಪಾಸ್ ಕೇಳಿದೆ ಎಂದರು.
ಮೇಕೆದಾಟು, ಭದ್ರಯೋಜನೆ ಹಾಗೂ ಮಹದಾಯಿ ಯೋಜನೆಗೆ ಇನ್ನೂ ಅನುಮತಿ ಕೊಡಿಸಿಲ್ಲ. ಇನ್ನೂ ಚುನಾವಣೆ ಪೂರ್ವದಲ್ಲಿ ನೀಡಿದ್ದ ಯಾವುದೇ ಭರವಸೆ ಈಡೇರಿಸಿಲ್ಲ. ಸ್ವಾಮಿನಾಥ್ ವರದಿ, ಕಪ್ಪುಹಣ ತರುವುದು, ಯುವಕರಿಗೆ ಉದ್ಯೋಗ ಸೃಷ್ಟಿ, ರೈತರ ಸುಧಾರಣೆ ಮಾಡಿಲ್ಲ. ಅವರು ಮಾಡಿದ್ದು ಕೇವಲ ಜನರ ಭಾವನೆಗಳನ್ನು ಕೆರಳಿಸುವುದು, ಬ್ರಿಟಿಷರಂತೆ ಒಡೆದಾಳುವುದು. ಬಿಜೆಪಿ ಹೊಸ ಈಸ್ಟ್ ಇಂಡಿಯಾ ಕಂಪನಿಯಂತೆ ಎಂದು ಹರಿಹಾಯ್ದರು.