ಹೊಸದಿಗಂತ ವರದಿ,ಕಲಬುರಗಿ:
ಸ್ವಾತಂತ್ರ್ಯದ ಶತಮಾನೋತ್ಸವದ ಸಮದರ್ಬದಲ್ಲಿ 2050 ವೇಳೆಗೆ ಕಲಬುರಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಠಿಕೋನದ ವಿಜನ್-2050 ಡಾಕ್ಯೂಮೆಂಟ್ ಸಿದ್ಧಪಡಿಸಲು ಜಿಲ್ಲೆಯ ಜನಪ್ರತಿನಿಧಿಗಳು ಸಹಕಾರ ನೀಡಬೇಕೆಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಮುರುಗೇಶ ನಿರಾಣಿ ಹೇಳಿದರು.
ಶನಿವಾರ ಇಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ(ಕೆ.ಡಿ.ಪಿ.) ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ತೋಟಗಾರಿಕೆ ಇಲಾಖೆಯ ಚರ್ಚೆ ವೇಳೆಯಲ್ಲಿ ಮಾತನಾಡಿದ ಅವರು, ಕೃಷಿ, ತೋಗಾರಿಕೆ, ಶಿಕ್ಷಣ, ನೀರಾವರಿ, ಸಾರಿಗೆ, ಮೂಲಸೌಕರ್ಯ, ತಂತ್ರಜ್ಞಾನ, ಕೈಗಾರಿಕೆ ಹೀಗೆ ಪ್ರತಿಯೊಂದು ಕ್ಷೇತದ ಸಮಗ್ರ ಅಭಿವೃದ್ಧಿಗೆ ನೀಲಿ ನಕ್ಷೆ ತಯ್ಯಾರಿಸುವುದು ತುಂಬಾ ಮುಖ್ಯವಾಗಿದೆ. ಇದರ ಡಿ.ಪಿ.ಆರ್. ತಯ್ಯಾರಿಕೆಗೆ ಕೆ.ಕೆ.ಆರ್.ಡಿ.ಬಿ. ಮಂಡಳಿಯಲ್ಲಿ 10 ಕೋಟಿ ರೂ. ಮೀಸಲಿಟ್ಟಿದೆ ಎಂದರು.
ಶಾಲೆ ಅನುಮತಿಗೆ ದುಡ್ಡು, ಶಾಸಕ ತೇಲ್ಕೂರ ಗರಂ:
ಹಳ್ಳಿಯಲ್ಲಿ ಶಾಲೆ ನಡೆಸುವುದೇ ತುಂಬಾ ಕಷ್ಟಕರವಾಗಿದೆ. ಇಂತಹ ಸಂದರ್ಭದಲ್ಲಿ ಸೇಡಂ ಮತ್ತು ಚಿಮಚೋಳಿ ತಾಲೂಕಿನಲ್ಲಿ ಶಾಲಾ ನವೀಕರಣ/ ಅನುಮತಿಗೆ ಶಿಕ್ಷಣ ಇಲಾಖೆಯವರು ಮತ್ತು ಮಕ್ಕಳ ಭದ್ರತೆ ದೃಷ್ಠಿಯಿಂದ ಪರವಾನಿಗೆ ನೀಡಲು ಅಗ್ನಿಶಾಮಕ ಇಲಾಖೆಯವರು ಹಣ ಕೇಳುತ್ತಿದ್ದಾರೆ ಎಂದು ಅಧಿಕಾರಿಗಳ ಮೇಲೆ ಅಸಮಾಧಾನ ವ್ಯಕ್ತಪಡಿಸಿದ ಕೆ.ಕೆ.ಆರ್.ಟಿ.ಸಿ. ಮತ್ತು ಕಲಬುರಗಿ-ಯಾದಗಿರಿ ಡಿ.ಸಿ.ಸಿ. ಬ್ಯಾಂಕಿನ ಅಧ್ಯಕ್ಷರು ಹಾಗೂ ಸೇಡಂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಅವರು, ದುಡ್ಡು ಕೇಳಿದ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಇನ್ನು ಶಾಸಕರು, ಸಚಿವರು ಮತ್ತು ಸರ್ಕಾರದ ಕುರಿತು ಯಾವುದೇ ಅಧಿಕಾರಿ-ಸಿಬ್ಬಂದಿ ಹಗುರವಾಗಿ ಮಾತನಾಡಬಾರದು ಎಂದು ಎಚ್ಚರಿಕೆ ನೀಡಿದರು. ಇದಕ್ಕೆ ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಎಂ.ಎಲ್.ಸಿ. ಶಶೀಲ ಜಿ. ನಮೋಶಿ ಸಹ ಧ್ವನಿಗೂಡಿಸಿ ಜನಪ್ರತಿನಿಧಿಗಳ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಸಹಿಸುವುದಿಲ್ಲ ಎಂದರು.