ಪೆರಾಜೆ ಗ್ರಾ. ಪಂ. ಉಪ ಚುನಾವಣೆ : ಬಿಜೆಪಿ ಬೆಂಬಲಿತ ಅಭ್ಯರ್ಥಿಗೆ ಜಯ

ಹೊಸದಿಗಂತ ವರದಿ ಮಡಿಕೇರಿ:

ಪೆರಾಜೆ ಗ್ರಾಮ ಪಂಚಾಯತ್‌ನ ಒಂದು ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಪ್ರವೀಣ್ ಮಜಿಕೋಡಿ ಜಯಗಳಿಸಿದ್ದಾರೆ. ಮಡಿಕೇರಿಯ ತಾಲೂಕು ಕಚೇರಿಯಲ್ಲಿ ನಡೆದ ಮತ ಎಣಿಕೆಯ ಸಂದರ್ಭ ಪ್ರವೀಣ್ ಅವರು ತಮ್ಮ ಸಮೀಪದ‌ ಪ್ರತಿಸ್ಪರ್ಧಿ ತುಳಸಿ ಗಾಂಧಿ ಪ್ರಸಾದ್ ಅವರನ್ನು 63 ಮತಗಳ ಅಂತರದಿಂದ ಪರಾಭವಗೊಳಿಸಿ ವಿಜಯಮಾಲೆ ಧರಿಸಿದರು.

ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಗಾಂಧಿಪ್ರಸಾದ್ ಅವರ ಅಕಾಲಿಕ ನಿಧನದಿಂದ ಈ ಸ್ಥಾನ ತೆರವಾಗಿತ್ತು. ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗಾಂಧಿಪ್ರಸಾದ್ ಅವರ ಪತ್ನಿ ತುಳಸಿ ಸ್ಪರ್ಧಿಸಿದ್ದು ಇವರಿಗೆ ಕಾಂಗ್ರೆಸ್ ಬೆಂಬಲ ನೀಡಿತ್ತು. ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಪ್ರವೀಣ್ ಮಜಿಕೋಡಿ ಹಾಗೂ ಪಕ್ಷೇತರರಾಗಿ ಜಯಪ್ರಕಾಶ್ ಹೊದ್ದೆಟ್ಟಿ ಕಣದಲ್ಲಿದ್ದರು.

ಪ್ರವೀಣ್ 296 ಮತ ಪಡೆದು ಜಯಗಳಿಸಿದರೆ, ತುಳಸಿಯವರಿಗೆ 239 ಮತ ಲಭಿಸಿತ್ತು. ಜಯಪ್ರಕಾಶ್ ಹೊದ್ದೆಟ್ಟಿಯವರಿಗೆ 17 ಮತ ದೊರಕಿತು. ವಿಜೇತ ಅಭ್ಯರ್ಥಿಯನ್ನು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅಭಿನಂದಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!