ಶೇ. 40 ಕಮಿಷನ್ ಆರೋಪ: ಕಾಂಗ್ರೆಸ್ ವಿರುದ್ಧ ಲೋಕಾಯುಕ್ತದ ಮೆಟ್ಟಿಲು ಹತ್ತಿದ ಬಿಜೆಪಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಆಧಾರರಹಿತವಾಗಿ ಬಿಜೆಪಿ ಸರ್ಕಾರದ ವಿರುದ್ಧ ಶೇ. 40 ಕಮಿಷನ್ ಆರೋಪ ಮಾಡಿರುವ ಕಾಂಗ್ರೆಸ್ ವಿರುದ್ಧ ಸೋಮವಾರ ಭಾರತೀಯ ಜನತಾ ಪಕ್ಷವು ಲೋಕಾಯುಕ್ತದಲ್ಲಿ ದೂರು ದಾಖಲಿಸಿದೆ.
“ಯಾವುದೇ ದಾಖಲೆಗಳಿಲ್ಲದೆ ಪೋಸ್ಟರ್ ಮಾಡಿ, ಚುನಾವಣೆ ಸಂದರ್ಭದಲ್ಲಿ ಅಪಪ್ರಚಾರ ಮಾಡಲು ಹೊರಟಿದ್ದಾರೆ. ಅದನ್ನು ಗಮನಿಸಿ ಬಿಜೆಪಿ ವತಿಯಿಂದ ನಾವು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧವಾಗಿ ಲೋಕಾಯುಕ್ತದಲ್ಲಿ ಇವತ್ತು ದೂರು ದಾಖಲಿಸಿದ್ದೇವೆ” ಎಂದು ಬಿಜೆಪಿ ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು.
ಲೋಕಾಯುಕ್ತ ಕಚೇರಿ ಬಳಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಮ್ಮ ದೂರಿಗೆ ಪುರಾವೆ ಇದೆ. ಅವರ ಆಪಾದನೆಗೆ ಪುರಾವೆ ಇಲ್ಲ. ನಮ್ಮ ಮೇಲೆ ದಾಖಲೆ ಇಲ್ಲದೆ ಅಪಪ್ರಚಾರ ಮಾಡಿದ್ದಾರೆ. ಇವತ್ತಿಗೂ ದಾಖಲೆ ಕೊಡಲು ಅವರಿಗೆ ಸಾಧ್ಯವಾಗಿಲ್ಲ ಎಂದು ಆಕ್ಷೇಪಿಸಿದರು.
ಈ ದೂರನ್ನು ಮಾನ್ಯ ಲೋಕಾಯುಕ್ತರು ಅಂಗೀಕರಿಸಿದ್ದಾರೆ. ಏನಾದರೂ ಹೆಚ್ಚಿನ ದಾಖಲೆ ಬೇಕಿದ್ದರೆ ದೂರವಾಣಿ ಕರೆ ಮಾಡಿ ಕರೆಸಿಕೊಂಡು ಪಡಕೊಳ್ಳುವುದಾಗಿ ತಿಳಿಸಿದ್ದಾರೆ. ದಾಖಲೆ ಸಾಕಿದ್ದರೆ ನೇರವಾಗಿ ಸಿದ್ದರಾಮಯ್ಯರಿಗೆ ನೋಟಿಸ್ ಜಾರಿ ಮಾಡುವುದಾಗಿ ಹೇಳಿದ್ದಾರೆ ಎಂದು ವಿವರಿಸಿದರು.
ದೂರಿನ ಜೊತೆಗೇ 2013-14ರಲ್ಲಿ ನಡೆದ ಟೆಂಡರ್ ಶೂರ್ ಸಂಬಂಧಿಸಿದ ಹಲವು ಕಾಮಗಾರಿಗಳಲ್ಲಿ ಟೆಂಡರ್ ಇಟ್ಟಿದ್ದ ಹಣಕ್ಕಿಂತ 53.86 ಶೇಕಡಾ ಹೆಚ್ಚುವರಿ ಹಣ ಬಿಡುಗಡೆ ಮಾಡಿದ 10-12 ದಾಖಲೆಗಳನ್ನು ಕೊಟ್ಟಿದ್ದೇವೆ. ನಮ್ಮ ಕಾಲದಲ್ಲಿ ಅಂಥದ್ದು ನಡೆದಿಲ್ಲ. ಇವತ್ತಿನವರೆಗೆ ಕಾಂಗ್ರೆಸ್ಸಿನವರು ತಮ್ಮ ಆಪಾದನೆಗೆ ಯಾವುದೇ ದಾಖಲೆ ನೀಡಿಲ್ಲ. ಬೀದಿಯಲ್ಲಿ ಅವರು ಆರೋಪಿಸುತ್ತಾರೆ. ಇದೇ ಕಾರಣಕ್ಕೆ ಒಂದೇ ಒಂದು ದೂರು ಕೊಡಲು ಅವರಿಗೆ ಸಾಧ್ಯವಾಗಿಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!