ಭಾರತದ ಶೇ. 40ಕ್ಕಿಂತ ಅಧಿಕ ಜನರ ದೇಹದಲ್ಲಿದೆ ಟಿಬಿ ಸೋಂಕು

ಹೊಸದಿಗಂತ ಡಿಜಿಟಲ್ ಡೆಸ್ಕ್

ಹೊಸದಿಲ್ಲಿ: ವಿಶ್ವ ಕ್ಷಯ ರೋಗ ದಿನವಾದ ಇಂದು ಆಘಾತಕಾರಿ ಸಂಗತಿಯೊಂದನ್ನು ತಿಳಿಯಬೇಕಿದೆ. ಭಾರತದ ಜನಸಂಖ್ಯೆಯ ಶೇ. 40ಕ್ಕಿಂತ ಹೆಚ್ಚಿನ ಜನ ತಮ್ಮ ದೇಹದಲ್ಲಿ ಕ್ಷಯರೋಗದ ಸೋಂಕು ಹೊಂದಿದ್ದಾರೆ. ಆದಾಗ್ಯೂ 2030ರ ವೇಳೆಗೆ ಟಿಬಿ ಮುಕ್ತ ಜಗತ್ತು ನಿರ್ಮಿಸುವ ವಿಶ್ವ ಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸಲು ಭಾರತ ಸಹಿ ಮಾಡಿದ್ದು, ಇದನ್ನು ಭಾರತ 2025ರ ವೇಳೆಗೆ ಸಾಧಿಸುವ ಗುರಿ ಹಾಕಿಕೊಂಡಿದೆ. ಕ್ಷಯರೋಗ ಮೈಕೋಬ್ಯಾಕ್ಟೀರಿಯಮ್ ಟ್ಯುಬರ್ಕ್ಯುಲೋಸಿಸ್ ಎಂದು ಕರೆಯಲಾಗುವ ಬ್ಯಾಕ್ಟಿರಿಯಾದಿಂದ ಉಂಟಾಗುತ್ತದೆ. ಹೆಚ್ಚಾಗಿ ಇದು ಶ್ವಾಸಕೋಶದ ಮೇಲೆ ಪರಿಣಾಮ ಬೀರುತ್ತದೆ. ರೋಗವಿರುವ ವ್ಯಕ್ತಿ ಕೆಮ್ಮಿದಾಗ ಹೊರ ಹೊಮ್ಮುವ ಹನಿಗಳಿಂದ ಇದು ಹರಡುತ್ತದೆ. ಇದು ಸುಲಭವಾಗಿ ಹರಡುವ ರೋಗವಾಗಿದ್ದು, ಸಕಾಲಕ್ಕೆ ಚಿಕಿತ್ಸೆ ನೀಡದಿದ್ದರೆ ಸಾವಿಗೆ ಕಾರಣವಾಗಬಹುದು.
ಜಗತ್ತಿನಾದ್ಯಂತ ಟಿಬಿ ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಾಗಿದ್ದು, ಇದು 10 ಲಕ್ಷ ಜನರ ಮೇಲೆ ಪರಿಣಾಮ ಬೀರುತ್ತಿದೆ. ಜಗತ್ತಿನ ಒಟ್ಟು ಪ್ರಕರಣಗಳಲ್ಲಿ ಶೇ. 26 ಕ್ಕೂ ಹೆಚ್ಚು ಜನ ಭಾರತಕ್ಕೆ ಸೇರಿದವರಾಗಿದ್ದಾರೆ. ಇದು ಬಹು ಔಷಧ ನಿರೋಧಕ ಟಿಬಿ ಮತ್ತು ಎಚ್‌ಐವಿ ಟಿಬಿ ಪ್ರಕರಣಗಳನ್ನು ಸಹ ಒಳಗೊಂಡಿದೆ.

ಟಿಬಿ ಸೋಂಕು ಮತ್ತು ಟಿಬಿ ರೋಗ:
ಟಿಬಿ ಸೋಂಕು ಎಂದರೆ ಅದು ಟಿಬಿ ಕಾಯಿಲೆಯಲ್ಲ. ಜಗತ್ತಿನ ಜನಸಂಖ್ಯೆಯಲ್ಲಿ ಮೂರನೇ ಒಂದರಷ್ಟು ಟಿಬಿ ಸೋಂಕಿತರು ನಮ್ಮಲ್ಲಿದ್ದಾರೆ; ಹಾಗೆಂದ ಮಾತ್ರಕ್ಕೆ ಅವರೆಲ್ಲರೂ ಟಿಬಿಯಿಂದ ಬಳಲುತ್ತಿದ್ದಾರೆ ಎಂದಲ್ಲ. ಭಾರತದಲ್ಲಿ ಶೇ. 40ಕ್ಕೂ ಹೆಚ್ಚು ಜನ ತಮ್ಮ ದೇಹದಲ್ಲಿ ಟಿಬಿ ಬ್ಯಾಕ್ಟಿರಿಯಾ ಹೊಂದಿರುತ್ತಾರೆ. ಆದರೆ ಇವರಲ್ಲಿ ಶೇ. 10 ರಷ್ಟು ಜನ ಟಿಬಿ ರೋಗಕ್ಕೆ ಒಳಗಾಗುವ ಸಾಧ್ಯತೆಯಿದೆ ಎಂದು ಹೇಳುತ್ತಾರೆ ರಾಷ್ಟ್ರೀಯ ಕ್ಷಯರೋಗ ಸಂಸ್ಥೆಯ ಮುಖ್ಯ ವೈದ್ಯಾಧಿಕಾರಿ ಡಾ. ರವಿಚಂದ್ರ ಸಿ.

ಬಂಜೆತನಕ್ಕೆ ಸಾಮಾನ್ಯ ಕಾರಣ ಟಿಬಿ:
ಟಿಬಿ ಉಗುರು ಮತ್ತು ಕೂದಲಿಗೆ ಅಷ್ಟೇ ಹಾನಿ ಮಾಡುವುದಿಲ್ಲ, ಇದು ದೇಹದ ಯಾವುದೇ ಅಂಗದ ಮೇಲೆ ಪರಿಣಾಮ ಬೀರಬಹುದು. ರಕ್ತ ಸಂಚಲನವಾಗುವ ದೇಹದ ಪ್ರತಿಯೊಂದು ಅಂಗಗಳಿಗೂ ಇದು ಹಾನಿ ಉಂಟು ಮಾಡುತ್ತದೆ. ನಮ್ಮ ದೇಶದಲ್ಲಿ ಬಂಜೆತನಕ್ಕೆ ಸಾಮಾನ್ಯ ಕಾರಣವೆಂದರೆ ಅದು ಟ್ಯುಬೆರ್ಕುಲೊಸಿಸ್ ಅಂದರೆ ಕ್ಷಯ ರೋಗ ಆಗಿದೆ ಎಂದು ರಾಷ್ಟ್ರೀಯ ಕ್ಷಯರೋಗ ಸಂಸ್ಥೆ ನಿರ್ದೇಶಕ ಡಾ. ಸೋಮಶೇಖರ್ ಎನ್. ಹೇಳುತ್ತಾರೆ.

ಕಡಿಮೆ ರೋಗ ನಿರೋಧಕ ಶಕ್ತಿಯಿದ್ದವರಿಗೆ ಸೋಂಕು:
ಕಡಿಮೆ ರೋಗನಿರೋಧಕ ಶಕ್ತಿ ಹೊಂದಿರುವವರು ಟಿಬಿ ಕಾಯಿಲೆಗೆ ಒಳಗಾಗುತ್ತಿದ್ದು, ಇದು ಸಾಮಾನ್ಯ ಕಾರಣಗಳಲ್ಲಿ ಒಂದಾಗಿದೆ. ಎಚ್‌ಐವಿ, ಒತ್ತಡದ ಬದುಕು, ಮಧುಮೇಹ, ಶ್ವಾಸಕೋಶ ಹಾನಿಗೊಳಗಾಗಿರುವವರು, ಮದ್ಯಪಾನ ಮತ್ತು ಧೂಮಪಾನ ಮಾಡುವವರ ಆರೋಗ್ಯ ಪರಿಸ್ಥಿತಿ ದುರ್ಬಲವಾಗಿರುತ್ತದೆ. ಹೀಗಾಗಿ ಇವರಿಗೆ ರೋಗ ಹರಡುವ ಸಾಧ್ಯತೆ ಹೆಚ್ಚು. ಈ ಹಂತದಲ್ಲಿ ಅವರು ರೋಗ ಲಕ್ಷಣಗಳನ್ನು ತೋರ್ಪಡಿಸಲು ಆರಂಭಿಸುತ್ತಾರೆ. ಎಚ್‌ಐವಿ ಸೋಂಕಿತರು ಟಿಬಿ ರೋಗಕ್ಕೆ ಒಳಗಾಗಿ ಸಾವನ್ನಪ್ಪುವುದು ಸಹ ಅಷ್ಟೇ ಸಾಮಾನ್ಯ.
ಸಾಮಾನ್ಯ ಲಕ್ಷಣವೆಂದರೆ ಕೆಮ್ಮು. ಎರಡು ವಾರಗಳಿಂದ ಸತತ ಕೆಮ್ಮು ಇದ್ದರೆ, ತೂಕ ಕಡಿಮೆಯಾಗುವುದು, ರಾತ್ರಿ ಸಮಯದಲ್ಲಿ ಹಸಿವು ಆಗದಿರುವುದು ಮತ್ತು ಜ್ವರ ಎಲ್ಲಾ ರೀತಿಯ ಟಿಬಿ ಹರಡಲು ಕಾರಣವಾಗಿದೆ. ಇತರೆ ಲಕ್ಷಣಗಳೆಂದರೆ ಎದೆನೋವು, ಆಯಾಸ, ಗಣನೀಯವಾಗಿ ತೂಕ ಇಳಿಕೆ, ರಾತ್ರಿ ವೇಳೆಯಲ್ಲಿ ಬೆವರುವುದು ಮತ್ತು ಕದಲ್ಲಿ ಹೆಚ್ಚಾಗಿ ರಕ್ತ ಬರುವುದನ್ನು ಎಕ್ಸ್ಟ್ರಾ ಪಲ್ಮನರಿ ಟಿಬಿಯಿಂದ ಬಳಲುತ್ತಿರುವವರು ಅನುಭವಿಸುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!