ಹೊಸದಿಗಂತ ವರದಿ ಅಂಕೋಲಾ
ಉತ್ತರ ಕನ್ನಡ ಜಿಲ್ಲೆಯ ಜ್ವಲಂತ ಸಮಸ್ಯೆಯಾದ ಇ- ಸ್ವತ್ತು ಕಾನೂನಿನ ಸಮಸ್ಯೆಗೆ ಶೀಘ್ರದಲ್ಲಿ ಶಾಶ್ವತ ಪರಿಹಾರ ಒದಗಿಸುವುದಾಗಿ ಕಂದಾಯ ಮಂತ್ರಿ ಆರ್. ಅಶೋಕ ಹೇಳಿದರು.
ಅವರು ಶುಕ್ರವಾರ ತಾಲೂಕಿನ ಅಚವೆಯಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ “ಉತ್ತರ ಕನ್ನಡ ಜಿಲ್ಲೆಯ ಶಾಸಕರುಗಳು , ಜನಸಾಮಾನ್ಯರು ಈ ಸಮಸ್ಯೆ ಬಗ್ಗೆ ತಿಳಿಸಿದ್ದಾರೆ. ಇ- ಸ್ವತ್ತು ಕಾನೂನಿನಿಂದ ಜಿಲ್ಲೆಯಲ್ಲಿ ಮನೆ ನಿರ್ಮಾಣ ಅಸಾಧ್ಯವಾಗುತ್ತಿದೆ. ಹೀಗಾಗಿ ಶೀಘ್ರ ಈ ಸಮಸ್ಯೆಯಿಂದ ಮುಕ್ತಿ ನೀಡಿ ಜಿಲ್ಲೆಗೆ ಬಹುದೊಡ್ಡ ಕೊಡುಗೆ ನೀಡುವೆ” ಎಂದು ಭರವಸೆ ನೀಡಿದರು.
ಜಿಲ್ಲೆಯಲ್ಲಿ ಇನ್ನೊಂದು ದೊಡ್ಡ ಸಮಸ್ಯೆಯಾದ ಅರಣ್ಯ ಅತಿಕ್ರಮಣ ಸಮಸ್ಯೆ ಬಗ್ಗೆಯೂ ಕ್ರಮ ತೆಗೆದುಕೊಂಡು ಬಡ ರೈತರಿಗೆ ಭೂಮಿಯ ಹಕ್ಕು ಒದಗಿಸುವ ಕ್ರಮ ಆಗಲಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ , ಶಾಸಕರಾದ ರೂಪಾಲಿ ನಾಯ್ಕ , ದಿನಕರ ಶೆಟ್ಟಿ ಮತ್ತಿತರರು ಇದ್ದರು