ಶ್ವಾನ ಪ್ರಿಯರು ತಿಳಿದುಕೊಳ್ಳಲೇ ಬೇಕಾದ ವಿಚಾರಗಳು ಇಲ್ಲಿವೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಶ್ವಾನವನ್ನು ಇಷ್ಟಪಡದವರು ಯಾರಿದ್ದಾರೆ ಹೇಳಿ. ಅದರಲ್ಲೂ ಮನೆಯಲ್ಲಿ ನಾಯಿ ಸಾಕೋದಂದ್ರೆ ಬಹಳ ಜನರಿಗೆ ಹೆಚ್ಚು ಪ್ರೀತಿ. ಹೀಗಿರುವಾಗ ನೀವು ನಿಮ್ಮ ಮನೆಯಲ್ಲಿ ಶ್ವಾನವನ್ನು ಸಾಕುತ್ತಿರುವಿರಾದರೆ, ಯಾವ ರೀತಿಯ ಹವ್ಯಾಸಗಳನ್ನು ಶ್ವಾನಗಳಿಗೆ ಕಲಿಸಿಕೊಟ್ಟರೆ ಒಳಿತು ಎಂದು ತಿಳಿದುಕೊಳ್ಳೋಣ.

ಶ್ವಾನ ಪ್ರಿಯರು ತಿಳಿದುಕೊಳ್ಳಬೇಕಾದ ವಿಚಾರಗಳು

1. ನೀವು ಹೊಸ ಶ್ವಾನವನ್ನು ಮನೆಗೆ ಸ್ವಾಗತಿಸಿದ್ದರೆ ಅದಕ್ಕೆ ಈಗಿನಿಂದಾನೇ ತರಬೇತಿ ನೀಡುವುದು ಉತ್ತಮ. ನಾವೇನಾದರೂ ತಿನ್ನಲು ಕೊಡಲು ಹೋದಾಗ ಅದು ಮೇಲಕ್ಕೆ ಹಾರಲು ಆರಂಭಿಸುತ್ತದೆ. ಆದರೆ ಈ ಅಭ್ಯಾಸ ಒಳ್ಳೆಯದಲ್ಲ. ಹೀಗಾಗಿ ನಾಯಿಯು ಹಾರುವುದನ್ನು ನಿಲ್ಲಿಸಿ ನಾಲ್ಕು ಕಾಲುಗಳನ್ನು ನೆಲಕ್ಕೆ ಊರಿ ನಿಮ್ಮತ್ತ ನೋಡುವವರೆಗೂ ಅದಕ್ಕೆ ಏನನ್ನು ನೀಡಬೇಡಿ. ನಿಮ್ಮಲ್ಲಿ ಗಮನವನ್ನು ಕೇಂದ್ರೀಕರಿಸಿದೆ ಎಂದು ಖಾತರಿ ಪಡಿಸಿಕೊಂಡು ನಂತರ ನಾಯಿಗೆ ತಿನ್ನಲು ಆಹಾರ ನೀಡಿ.

2. ಶ್ವಾನ ಚಿಕ್ಕದಿರುವಾಗಲೇ ಅದಕ್ಕೆ ಎಲ್ಲಾ ರೀತಿಯ ಹವ್ಯಾಸಗಳನ್ನು ರೂಢಿಸಿದರೆ ಉತ್ತಮ. ಬೇರೆ ಬೇರೆ ಜಾಗಕ್ಕೆ ಕರೆದುಕೊಂಡು ಹೋಗಿ, ಇತರರೊಂದಿಗೆ ಸ್ನೇಹ ಜೀವಿಯಾಗಿ ಬೆರೆಯಲು ಬಿಡಿ, ಇತರ ನಾಯಿಗಳೊಂದಿಗೆ ಆಟವಾಡಲು ಅಭ್ಯಾಸ ಮಾಡಿಸಿ. ಹೀಗಾದಾಗ ಅವುಗಳು ಕೂಡ ಎಲ್ಲಾ ರೀತಿಯ ವಾತಾವರಣಕ್ಕೆ ಹೊಂದಿಕೊಳ್ಳುತ್ತದೆ. ಇಲ್ಲವಾದರೆ ನೀವು ಹೊರಗಡೆ ಕರೆದುಕೊಂಡು ಹೋದಾಗ ಶ್ವಾನಕ್ಕೆ ಎಲ್ಲವೂ ಹೊಸತು ಎನ್ನಿಸುತ್ತದೆ. ಬೊಗಳೋದು, ಚೀರಾಡೋದನ್ನ ಮಾಡುತ್ತವೆ.

3. ಶ್ವಾನಗಳಿಗೆ ಮನೆ ತರಬೇತಿ ತುಂಬಾನೇ ಮುಖ್ಯ. ಹಾಗಾಗಿ ಪ್ರತಿದಿನ ಒಂದೇ ಸಮಯದಲ್ಲಿ ನೀವು ತರಬೇತಿ ನೀಡಿದಾಗ ಆ ಸಮಯಕ್ಕೆ ನಿಮ್ಮ ನಾಯಿ ಹೊಂದಿಕೊಳ್ಳುತ್ತದೆ. ಅದರ ಊಟದ ಸಮಯ, ಆಟದ ಸಮಯ ಹಾಗೂ ಸ್ನಾನದ ಸಮಯವನ್ನು ಸರಿಯಾಗಿ ಪಾಲನೆ ಮಾಡಿ.

4. ನೀವೇನಾದರೂ ಮನೆಯ ಒಳಗಡೆ ನಾಯಿಯನ್ನು ಸಾಕುತ್ತಿದ್ದರೆ ಪದೇ ಪದೇ ಮನೆಯಿಂದ ಹೊರ ಹೋಗದಂತೆ ತಡೆಯಿರಿ. ಇನ್ನೂ ಹೊರಗಡೆ ನಾಯಿಯನ್ನು ಸಾಕುವುದಾದರೆ ಮನೆಯ ಒಳಬಾರದಂತೆ ತಡೆಯಿರಿ. ಈ ರೀತಿ ಅಭ್ಯಾಸವನ್ನು ಮೈಗೂಡಿಸಿಕೊಳ್ಳಿ. ಅದು ತಪ್ಪು ಮಾಡಿದಾಗ ಹೊಡೆದು, ಗದರಿಸಿ ಹೇಳಬೇಡಿ. ಬದಲಾಗಿ ಅದಕ್ಕೆ ಅರ್ಥವಾಗುವ ರೀತಿಯಲ್ಲಿ ಪ್ರೀತಿಯಿಂದ ತಿಳಿ ಹೇಳಿ.

5. ಪ್ರತಿದಿನ ಒಂದೇ ರೀತಿಯ ತರಬೇತಿಯನ್ನು ಶ್ವಾನಕ್ಕೆ ನೀಡಿ. ಅದನ್ನು ಬಿಟ್ಟು ನೀವು ಪ್ರತಿ ದಿನ ನಿಮ್ಮ ತರಬೇತಿ ಶೈಲಿಯನ್ನು ಬದಲಾಯಿಸಿದರೆ ಶ್ವಾನಕ್ಕೂ ಕನ್‌ಫ್ಯೂಸ್‌ ಆಗಬಹುದು. ಇನ್ನೂ ನೀವು ಬಳಸುವ ಭಾಷೆಯು ಕೂಡ ತುಂಬಾನೇ ಮುಖ್ಯ. ಯಾವುದಾದರೂ ಒಂದು ಭಾಷೆಯನ್ನು ಮಾತ್ರ ನಿತ್ಯ ಬಳಸಿ. ಅದನ್ನು ಬಿಟ್ಟು ನಿಮಗೆ ಬೇಕಾಗುವ ಭಾಷೆಯಲ್ಲಿ ಮಾತನಾಡಿದರೆ ನಾಯಿಗೆ ಅರ್ಥ ಮಾಡಿಕೊಳ್ಳಲು ಕಷ್ಟವೆನಿಸುತ್ತದೆ.

6. ಶ್ವಾನಗಳಿಗೆ ತರಬೇತಿ ನೀಡುವಾಗ ತಾಳ್ಮೆ ತುಂಬಾನೇ ಮುಖ್ಯ. ಕೆಲವು ನಾಯಿಗಳು ತುಂಬಾ ನಿಧಾನವಾಗಿ ಕಲಿತುಕೊಳ್ಳುತ್ತವೆ. ಇನ್ನೂ ಕೆಲವು ಜಾತಿಯ ನಾಯಿಗಳು ಬೇಗ ಕಲಿತುಕೊಳ್ಳುತ್ತವೆ. ಕೆಲವೊಂದು ಸಲ ನಾವು ಎಷ್ಟೇ ಕಲಿಸಿದರು ಶ್ವಾನ ಮತ್ತೆ ಮತ್ತೆ ಮರೆತು ಹೋಗುತ್ತದೆ. ಆಗ ನೀವು ಕೋಪಗೊಳ್ಳಬಾರದು. ಬದಲಿಗೆ ತಾಳ್ಮೆಯಿಂದ ಅದಕ್ಕೆ ಕಲಿಸುವ ಪ್ರಯತ್ನ ಮಾಡಬೇಕು.

7. ತರಬೇತಿಯ ಸಮಯದಲ್ಲಿ ಮೊದಲಿಗೆ ಅವುಗಳಿಗೆ ಕಮಾಂಡ್‌ ಬಗ್ಗೆ ಚೆನ್ನಾಗಿ ತಿಳಿಸಿ ಕೊಡಿ. ಕಮಾಂಡ್‌ ಜೊತೆಗೆ ಕೆಲವೊಂದು ಒಳ್ಳೆಯ ಅಭ್ಯಾಸಗಳನ್ನು ಕಲಿಸಿಕೊಡಿ. ಪ್ರತಿನಿತ್ಯ ಹೀಗೆ ಮಾಡುತ್ತಾ ಇದ್ದರೆ ಅವುಗಳಿಗೆ ರೂಢಿ ಕೂಡ ಆಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!