April 30, 2026
Thursday, April 30, 2026
spot_img

ಮತಾಂತರ ವಿರೋಧಿ ಕಾನೂನು ಸಿಂಧುತ್ವ ಪ್ರಶ್ನಿಸಿ ಅರ್ಜಿ: ಕೇಂದ್ರ, 12 ರಾಜ್ಯಗಳಿಗೆ ಸುಪ್ರೀಂ ನೊಟೀಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮತಾಂತರ ವಿರೋಧಿ ಕಾನೂನುಗಳ ಸಿಂಧುತ್ವ ಪ್ರಶ್ನಿಸಿ ರಾಷ್ಟ್ರೀಯ ಚರ್ಚುಗಳ ಮಂಡಳಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ (ಪಿಐಎಲ್)‌ ಅರ್ಜಿಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು (ಸೋಮವಾರ) ಕೇಂದ್ರ ಸರ್ಕಾರ, ರಾಜಸ್ಥಾನ, ಕರ್ನಾಟಕ, ಅರುಣಾಚಲ ಪ್ರದೇಶ ಸೇರಿದಂತೆ 12 ರಾಜ್ಯಗಳಿಗೆ ನೊಟೀಸ್ ಜಾರಿ ಮಾಡಿ, ಪ್ರತಿಕ್ರಿಯೆ ಕೇಳಿದೆ.

ಎನ್‌ಸಿಐಸಿ ಈ ರಾಜ್ಯಗಳಲ್ಲಿರುವ ಮತಾಂತರ ವಿರೋಧಿ ಕಾನೂನುಗಳನ್ನು ಅನುಷ್ಠಾನಗೊಳಿಸುವುದಕ್ಕೆ ತಡೆ ನೀಡುವಂತೆ ಕೋರಿದೆ.

ಈ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾ. ಜೋಯ್ಮಲ್ಯ ಬಾಗ್ಚಿ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸುತ್ತಿದ್ದು, ಮುಂದಿನ ನಾಲ್ಕು ವಾರಗಳಲ್ಲಿ ಕೇಂದ್ರ ಮತ್ತು 12 ರಾಜ್ಯ ಸರ್ಕಾರಗಳು ತಮ್ಮ ಪ್ರತಿಕ್ರಿಯೆ ನೀಡಬೇಕು ಎಂದು ಆದೇಶಿಸಿತು.

ಕೇಂದ್ರ ಸರ್ಕಾರ, ರಾಜಸ್ಥಾನ, ಉತ್ತರ ಪ್ರದೇಶ, ಒಡಿಶಾ, ಛತ್ತೀಸ್‌ಗಢ, ಅರುಣಾಚಲ ಪ್ರದೇಶ, ಗುಜರಾತ್, ಜಾರ್ಖಂಡ್, ಉತ್ತರಾಖಂಡ, ಹರಿಯಾಣ, ಮಧ್ಯಪ್ರದೇಶ, ಕರ್ನಾಟಕ ಮತ್ತು ಹಿಮಾಚಲ ಪ್ರದೇಶಗಳಿಗೆ ಕೋರ್ಟ್ ನೋಟಿಸ್ ನೀಡಿದೆ.

ಕಳೆದ ಸೆಪ್ಟೆಂಬರ್ 16ರಂದು, ಮತಾಂತರ ವಿರೋಧಿ ಕಾನೂನುಗಳಿಗೆ ತಡೆ ನೀಡುವಂತೆ ಕೋರಿದ್ದ ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಈ ಕುರಿತು ಹಲವು ರಾಜ್ಯಗಳ ನಿಲುವು ಕೇಳಿತ್ತು.ರಾಜ್ಯ ಸರ್ಕಾರಗಳ ನಿಲುವು ಪಡೆದ ನಂತರ ಅಂತಹ ಕಾನೂನುಗಳ ಜಾರಿಯನ್ನು ತಡೆಹಿಡಿಯುವ ಮನವಿಗಳನ್ನು ವಿಚಾರಣೆಗೆ ಪರಿಗಣಿಸುವುದಾಗಿ ಸ್ಪಷ್ಟಪಡಿಸಿತ್ತು.

ಮತಾಂತರ ವಿರೋಧ ಕಾನೂನುಗಳು ಸಂವಿಧಾನದ 21 ಮತ್ತು 25ನೇ ವಿಧಿಗಳನ್ನು ಉಲ್ಲಂಘಿಸುತ್ತವೆ. ಅವು ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯ ಮತ್ತು ಆತನ ಆಯ್ಕೆಯ ಧರ್ಮವನ್ನು ಆಚರಿಸುವ ಸ್ವಾತಂತ್ರ್ಯವನ್ನು ಹತ್ತಿಕ್ಕಲು ರಾಜ್ಯಕ್ಕೆ ಅಧಿಕಾರ ನೀಡುತ್ತವೆ ಎಂದು ಎನ್‌ಜಿಒ ಸಲ್ಲಿಸಿದ ಅರ್ಜಿಯಲ್ಲಿ ಆರೋಪಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !