ಬ್ಯಾನ್‌ ಆಗತ್ತಾ ಪಿಎಫ್‌ಐ? ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರದ ನಿರೀಕ್ಷೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಹಲವಾರು ಭಯೋತ್ಪಾದನಾ ಕೃತ್ಯಗಳಿಗೆ ಪ್ರೇರಣೆ ನೀಡಿರುವ ಹಾಗೂ ಹಾಗೂ ವಿವಿಧ ರಾಜ್ಯಗಳಲ್ಲಿ ಕೋಮು ಗಲಭೆ, ಹಿಂಸಾಚಾರಗಳಿಗೆ ಕಾರಣವಾಗಿರುವ ವಿವಾದಾತ್ಮಕ ಮೂಲಭೂತವಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಅನ್ನು ಕೇಂದ್ರ ಸರ್ಕಾರ ಶೀಘ್ರದಲ್ಲೇ ನಿಷೇಧಿಸುವ ಸಾಧ್ಯತೆಯಿದೆ.
ಕಳೆದ ವಾರ ಹಿಂದೂಗಳು ರಾಮನವಮಿ ಆಚರಿಸುತ್ತಿದ್ದ ಸಂದರ್ಭದಲ್ಲಿ ದೇಶದ ಹಲವು ಭಾಗಗಳಲ್ಲಿ ದಾಳಿಗಳು ನಡೆದಿದ್ದವು. ಜನರಲ್ಲಿ ದ್ವೇಷಭಾವನೆ ಹುಟ್ಟುಹಾಕಿ ಹಿಂಸಾಚಾರಗಳಿಗೆ ಪ್ರಚೋದಿಸಿದ ಮತ್ತು ಕೋಮು ಉದ್ವಿಗ್ನತೆ ಸೃಷ್ಟಿಸಿರುವುದರಲ್ಲಿ ಪಿಎಫ್‌ಐ ಪಾತ್ರವಿರುವುದು ತಿಳಿದುಬಂದಿದೆ. ಜೊತೆಗೆ ಸಂಘಟನೆಯು ಹಲವಾರು ದೇಶವಿರೋಧಿ ಸಂಚುಗಳಲ್ಲಿ ಭಾಗಿಯಾಗಿರುವುದರ ಬಗ್ಗೆ ಕೇಂದ್ರ ಗೃಹ ಸಚಿವಾಲಯವು ಸಾಕಷ್ಟು ಪುರಾವೆಗಳನ್ನು ಕಲೆಹಾಕಿದೆ. ಪಿಎಫ್‌ಐ ನಿಷೇಧದ ಸಿದ್ಧತೆಗಳು ಪೂರ್ಣಗೊಂಡಿದ್ದು, ಕೇಂದ್ರ ಸರ್ಕಾರ ಮುಂದಿನ ವಾರ ನಿಷೇಧ ಅಧಿಸೂಚನೆಯನ್ನು ಪ್ರಕಟಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ವಾರಾಂತ್ಯದಲ್ಲಿ ಗೋವಾ, ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ ರಾಮನವಮಿ ಮೆರವಣಿಗೆ ವೇಳೆ ಹಿಂಸಾಚಾರ ಭುಗಿಲೆದ್ದಿತ್ತು. ಖಾರ್ಗೋನ್‌ನಲ್ಲಿ ಬೆಂಕಿ ಹಚ್ಚಲು ಮತ್ತು ಕಲ್ಲು ತೂರಾಟನಡೆಸಲು ದುಷ್ಕರ್ಮಿಗಳಿಗೆ ಪಿಎಫ್‌ಐ ಹಣವನ್ನು ನೀಡಿದೆ ಎಂದು ಮಧ್ಯಪ್ರದೇಶದ ಬಿಜೆಪಿ ಮುಖಂಡರು ಆರೋಪಿಸಿದ್ದರು.
ಈ ಹಿಂಸಾಕೃತ್ಯಗಳಿಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ರಾಷ್ಟ್ರೀಯ ತನಿಖಾ ಸಂಸ್ಥೆ(ಸಿಬಿಐ) ಹಾಗೂ ಜಾರಿ ನಿರ್ದೇಶನಾಲಯ(ಇಡಿ) ಸಂಸ್ಥೆಗಳು ಪಿಎಫ್‌ಐ ನಿಷೇಧಕ್ಕೆ ಪೂರಕ ದಾಖಲೆಗಳನ್ನು ಸಲ್ಲಿಸಿವೆ ಎಂದು ಮೂಲಗಳು ಬಹಿರಂಗಪಡಿಸಿವೆ. ಸಿಎಎ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಗಳಿಗೆ ಭಾರೀ ಪ್ರಮಾಣದ ಹಣವನ್ನು ಈ ಸಂಘಟನೆ ಸಂಗ್ರಹಿಸಿ ಕೊಟ್ಟಿದೆ ಎಂದು ಇಡಿ ತನ್ನ ವರದಿಯಲ್ಲಿ ಬಹಿರಂಗಪಡಿಸಿದೆ.

PFI ಸಂಘಟನೆ ಮೇಲಿದೆ ಈ ಪ್ರಕರಣಗಳಲ್ಲಿ ಭಾಗಿಯಾದ ಆರೋಪ
1. ಕೇರಳದಲ್ಲಿ ಆರ್‌ಎಸ್‌ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಸರಣಿ ಹತ್ಯೆ ಪ್ರಕರಣ
2. ಸಂಘಟನೆ ವಿರುದ್ಧ ಹೇಳಿಕೆ ನೀಡಿದ ಕೇರಳದ ಪ್ರೊಫೆಸರ್ ಟಿ.ಜೆ.ಜೋಸೆಫ್ ಅವರ ಕೈಯನ್ನು ಬರ್ಬರವಾಗಿ ಕತ್ತರಿಸಲಾಗಿತ್ತು. ಈ ಪ್ರಕರಣದಲ್ಲಿ 13 ಮಂದಿ ಪಿಎಫ್‌ಐ ಕಾರ್ಯಕರ್ತರನ್ನು ಅಪರಾಧಿಗಳು ಎಂದು ಘೋಷಿಸಲಾಗಿದೆ.
3.ಬಿಜೆವೈಎಂ ಅಧ್ಯಕ್ಷರು ಹಾಗೂ ಲೋಕಸಭಾ ಸಂಸದ ತೇಜಸ್ವಿ ಸೂರ್ಯ ಹತ್ಯೆಗೆ ಸಂಚು ರೂಪಿಸಿದ್ದ ಪಿಎಫ್‌ಐ ಜತೆ ನಂಟು ಹೊಂದಿರುವ 6 ಮಂದಿಯನ್ನು ಬಂಧಿಸಲಾಗಿದೆ.
4.ಸಿಎಎ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ.
5. 23 PFI ಕಾರ್ಯಕರ್ತರಿಂದ ನಡೆದಿರುವ ಲವ್ ಜಿಹಾದ್ ಪ್ರಕರಣಗಳನ್ನು ಎನ್ಐಎ ತನಿಖೆ ನಡೆಸುತ್ತಿದೆ.
5.47 PFI ಸದಸ್ಯರು 2020 ರ ದೆಹಲಿ ಗಲಭೆಗಳೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ಮಾಹಿತಿಯಿದೆ.

2006 ರಲ್ಲಿ ಈ ಮೂಲಭೂತವಾಧಿ ಸಂಘಟನೆಯು ಅಸ್ತಿತ್ವಕ್ಕೆ ಬಂದಿದೆ. ಅದರ ರಾಜಕೀಯ ವಿಭಾಗವಾದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(ಎಸ್‌ ಡಿಪಿಐ) 2009 ರಲ್ಲಿ ಅಸ್ತಿತ್ವಕ್ಕೆ ಬಂದಿದೆ. ಮತ್ತು ಚುನಾವಣೆಗಳಲ್ಲಿಯೂ ಸ್ಪರ್ಧಿಸುತ್ತಿದೆ.

ನಮ್ಮನ್ನ ನಿಷೇಧಿಸಲು ಸಾಧ್ಯವಿಲ್ಲ: ಪಿಎಫ್‌ಐ
ನಿಷೇಧ ಸುದ್ದಿಗಳ ಬಗ್ಗೆ ಪ್ರತಿಕ್ರಿಯಿಸಿರುವ ಪಿಎಫ್‌ಐ ಮುಖಂಡ ಅನಿಸ್ ಅಹ್ಮದ್, ಸರ್ಕಾರವು ನಮ್ಮನ್ನು ನಿಷೇಧಿಸಲು ಸಾಧ್ಯವಿಲ್ಲ, ನಾವು ರಾಷ್ಟ್ರದ ವಿರುದ್ಧ ಏನನ್ನೂ ಮಾಡಿಲ್ಲ. ಇಂತಹ ಸುದ್ದಿಗಳು ಬರುತ್ತಲೇ ಇರುತ್ತವೆ. 2017 ರಲ್ಲಿ ಪಿಎಫ್‌ ಐ ನಿಷೇಧಿಸಬೇಕೆಂಬ ದೊಡ್ಡ ಅಭಿಯಾನ ನಡೆಯಿತು, ಆದರೆ ಏನೂ ಆಗಲಿಲ್ಲ. ಸರ್ಕಾರ ಅಧಿಕೃತವಾಗಿ ಹೇಳಿದರೆ ನಾವು ಪರಿಗಣಿಸುತ್ತೇವೆ. ಹಾಗೇನಾದರೂ ಸರ್ಕಾರ ನಮ್ಮನ್ನು ನಿಷೇಧಿಸಲು ಪ್ರಯತ್ನಿಸಿದರೆ ನಮ್ಮನ್ನು ರಕ್ಷಿಸಲು ಪ್ರಜಾಪ್ರಭುತ್ವ ಮತ್ತು ಕಾನೂನು ಸಂಸ್ಥೆಗಳಿವೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!