ಪಿಎಫ್‌ಐ ಬೆದರಿಕೆ: ಕೇಂದ್ರ ಸರಕಾರದಿಂದ ಮೇಲುಕೋಟೆ ಶ್ರೀ ನಾರಾಯಣ ರಾಮಾನುಜ ಜಿಯರ್ ಗೆ ವೈ ಭದ್ರತೆ

ಹೊಸದಿಗಂತ ವರದಿ,ಮಂಡ್ಯ :

ಮೇಲುಕೋಟೆ ಯದುಗಿರಿಯ ಯತಿರಾಜ ಮಠದ ಪೀಠಾಧಿಪತಿ ಎದುಗಿರಿ ಯತಿರಾಜ ಶ್ರೀಮನ್ ನಾರಾಯಣ ರಾಮಾನುಜ ಜಿಯರ್ ಅವರಿಗೆ ನಿಷೇಧಿತಾ ಪಿಎಫ್‌ಐ ಸಂಘಟನೆಯಿಂದ ಬೆದರಿಕೆ ಇರುವುದರಿಂದ ಭಾರತ ಸರ್ಕಾರ ವೈ ಮಾದರಿ ಭದ್ರತೆ ನೀಡುವಂತೆ ಆದೇಶಿಸಿದೆ.

ಯತಿರಾಜ ಜಿಯರ್ ಅವರಿಗೆ ಇತ್ತೀಚೆಗೆ ಪಿಎಫ್‌ಐ ಸಂಘಟನೆ ವಿಡಿಯೋ ಸಂದೇಶದ ಮೂಲಕ ಜೀವ ಬೆದರಿಕೆ ಹಾಕಿರುವ ಸುದ್ದಿ ರಾಷ್ಟ್ರೀಯ ಸುದ್ಧಿ ವಾಹಿನಿಗಳಲ್ಲಿ ಬಿತ್ತರವಾಗಿರುವ ಹಿನ್ನೆಲೆಯಲ್ಲಿ ಅವರಿಗೆ ವೈ ಮಾದರಿ ಭದ್ರತೆಯನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿದೆ.
ಯದುಗಿರಿ ಯತಿರಾಜ ಮಠದ ಯತಿರಾಜ ಜಿಯರ್ ಅವರು ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಶಾಖ ಮಠದಲ್ಲಿ ವಾಸವಾಗಿದ್ದು, ಮೇಲುಕೋಟೆ ವೈರಮುಡಿ, ಶ್ರೀ ರಾಮಾನುಜ ತಿರುನಕ್ಷತ್ರ ಸೇರಿದಂತೆ ವಿಶೇಷ ದಿನಗಳನ್ನು ಮಾತ್ರ ಮೇಲುಕೋಟೆಗೆ ಆಗಮಿಸಿ ಪೂಜಾ ಕೈಂಕರ್ಯಗಳಲ್ಲಿ ತೊಡಗುತ್ತಿದ್ದರು.

ಕಾಶ್ಮೀರದಲ್ಲಿ ಶ್ರೀ ಶಂಕರಾಚಾರ್ಯರು ಮತ್ತು ಶ್ರೀ ರಾಮಾನುಜಾಚಾರ್ಯರು ಸಂಚಾರ ಮಾಡಿದ್ದರಿಂದ ಶೃಂಗೇರಿ ಮಠದ ವತಿಯಿಂದ ಅಲ್ಲಿ ಶಂಕರಾಚಾರ್ಯರ ಪ್ರತಿಮೆಯನ್ನು ಪ್ರತಿಷ್ಠಾಪನೆ ಮಾಡಿದ್ದರೆ, ಯತಿರಾಜ ಜಿಯರ್ ಅವರು ಭಾರತ ಸರ್ಕಾರದ ಅನುಮತಿ ಮೇರೆಗೆ ಅಲ್ಲಿಗೆ ತೆರಳಿ ಶ್ರೀ ರಾಮಾನುಜಾಚಾರ್ಯರ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದರು. ಆ ಸಮಯದಲ್ಲಿ ಕಾಶ್ಮೀರ ಸರಸ್ವತಿಯ ನೆಲೆವೀಡು. ಭಾರತದ ಅವಿಭಾಜ್ಯ ಅಂಗ ಎಂದು ರಾಮಾನು ಜಿಯರ್ ಹೇಳಿದ್ದರು.

ಈ ಮಾತಿನಿಂದ ಕೆರಳಿದ ಪಿ.ಎಫ್.ಐ. ಸಂಘಟನೆ ಅವರಿಗೆ ವಿಡಿಯೋ ಸಂದೇಶದ ಮೂಲಕ ಬೆದರಿಕೆ ಕರೆ ಹಾಕಿತ್ತು ಎಂದು ಹೇಳಲಾಗಿದೆ.
ಈ ಕಾರಣದಿಂದ ರಾಮಾನುಜ ಜಿಯರ್ ಅವರಿಗೆ ವೈ ಮಾದರಿ ಭದ್ರತೆಯನ್ನು ನೀಡುವಂತೆ ಭಾರತ ಸರ್ಕಾರ ಸೂಚಿಸಿದೆ.
ಶ್ರೀಗಳಿಗೆ ಈ ಹಿಂದೆಯೂ ಭದ್ರತೆ ನೀಡಿದ್ದು, ಇತ್ತೀಚೆಗೆ ಅದನ್ನು ವಾಪಸ್ಸು ಪಡೆಯಲಾಗಿತ್ತು. ಪಿಎಫ್‌ಐ ಸಂಘಟನೆಯ ಬೆದರಿಕೆಯ ಹಿನ್ನೆಲೆಯಲ್ಲಿ ಮತ್ತೆ ಅವರಿಗೆ ವೈ ಮಾದರಿ ಭದ್ರತೆ ಒದಗಿಸುವಂತೆ ಸೂಚಿಸಲಾಗಿದೆ. ಸಧ್ಯ ಶ್ರೀಗಳು ತಮಿಳುನಾಡಿನಲ್ಲಿರುವ ಶಾಖಾ ಮಠಕ್ಕೆ ತೆರಳಿದ್ದಾರೆ ಎಂದು ಹೇಳಲಾಗಿದೆ.

ಈ ಬಗ್ಗೆ ತಮಗೆ ಮಾಹಿತಿ ಇಲ್ಲ, ಕೇಂದ್ರ ಗುಪ್ತಚರ ಇಲಾಖೆಯಿಂದ ರಾಜ್ಯ ಗುಪ್ತಚರ ಇಲಾಖೆಗೆ ಸೂಚನೆ ಬರಲಿದ್ದು, ನಂತರ ನಮಗೆ ತಿಳಿಯಲಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ಯತೀಶ್ ಪತ್ರಿಕೆಗೆ ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!