ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆ ರಾಮಮಂದಿರಕ್ಕೆ ವ್ಯಕ್ತಿಯೊಬ್ಬ ಕನ್ನಡಕದಲ್ಲಿ ಎರಡು ಕ್ಯಾಮೆರಾಗಳನ್ನು ಅಳವಡಿಸಿಕೊಂಡು ಎಂಟ್ರಿಯಾಗಿದ್ದು, ಕ್ಯಾಮೆರಾ ಅಳವಡಿಸಿದ ಸನ್‌ಗ್ಲಾಸ್‌ಗಳನ್ನು ಹಿಡಿದುಕೊಂಡು ಫೋಟೋ ಕ್ಲಿಕ್ಕಿಸುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಗುಜರಾತ್‌ನ ವಡೋದರಾದ ಜಾನಿ ಜೈಕುಮಾರ್ ಎಂದು ಗುರುತಿಸಲಾಗಿದೆ. ರಾಮಜನ್ಮಭೂಮಿ ಮಾರ್ಗದಲ್ಲಿ ಅನೇಕ ಚೆಕ್‌ಪೋಸ್ಟ್‌ಗಳ ಮೂಲಕ ಹಾದುಹೋಗುವಲ್ಲಿ ಆತ ಯಶಸ್ವಿಯಾಗಿದ್ದಾನೆ. ಸೋಮವಾರ ದೇವಾಲಯದ ಸಂಕೀರ್ಣದ ಸಿಂಗ್‌ದ್ವಾರದ ಬಳಿ ಆತ ತಲುಪಿದ್ದ ಅಲ್ಲಿ ಅವನನ್ನು ಭದ್ರತಾ ಸಿಬ್ಬಂದಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ವರದಿಗಳ ಪ್ರಕಾರ, ಆರೋಪಿ ಸೋಮವಾರ ರಾಮಲಲ್ಲಾನ ದರುಶನ ಪಡೆಯಲು ಅಯೋಧ್ಯೆಗೆ ಆಗಮಿಸಿದ್ದ. ಕ್ಯಾಮೆರಾ ಇರುವ ಕನ್ನಡಕ ಧರಿಸಿದ್ದ ಈತ, ದೇಗುಲದ ಎಲ್ಲಾ ಭದ್ರತಾ ಚೆಕ್ ಪಾಯಿಂಟ್ ದಾಟಿ ಬಂದರೂ ಸಿಬ್ಬಂದಿಗೆ ಗೊತ್ತಾಗಲಿಲ್ಲ.
ಅದೇ ರೀತಿ ರಾಮಮಂದಿರ ಸಂಕಿರ್ಣಕ್ಕೆ ಆಗಮಿಸಿದ್ದ ಆರೋಪಿ ಫೋಟೋ ತೆಗೆಯಲು ಆರಂಭಿಸಿದ್ದ. ಇದು ಅಲ್ಲಿರುವ ಭದ್ರತಾ ಸಿಬ್ಬಂದಿಗೆ ಗೊತ್ತಾಗಿ ಕೂಡಲೇ ವಶಕ್ಕೆ ಪಡೆದುಕೊಂಡಿದ್ದಾರೆ. ನಂತರ ಹೆಚ್ಚಿನ ತನಿಖೆಗಾಗಿ ಗುಪ್ತಚರ ಇಲಾಖೆ ಅಧಿಕಾರಿಗಳಿಗೆ ಆತನನ್ನು ನೀಡಿದ್ದಾರೆ. ಆತ ಧರಿಸಿದ್ದ ಕನ್ನಡಕದ ಎರಡೂ ಬದಿಯಲ್ಲಿ ಕ್ಯಾಮೆರಾ ಅಳವಡಿಸಲಾಗಿತ್ತು.