ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನ ಭಾರತಿ ಕ್ಯಾಂಪಸ್ ಅನ್ನು ಸ್ವಚ್ಛವಾಗಿಡಲು ಬೆಂಗಳೂರು ವಿಶ್ವವಿದ್ಯಾಲಯ ಸಾರ್ವಜನಿಕರು ಮತ್ತು ವಾಹನ ಸವಾರರಿಗೆ ದಂಡ ಪ್ರಯೋಗಕ್ಕೆ ಮುಂದಾಗಿದೆ.
ಈ ಸಂಬಂಧ ಬೆಂಗಳೂರು ವಿಶ್ವವಿದ್ಯಾಲಯ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಬೆಂಗಳೂರು ವಿಶ್ವವಿದ್ಯಾಲಯದ ಆವರಣವನ್ನ ಈಗಾಗಲೇ ಕಸ ಮುಕ್ತ ಮತ್ತು ಪ್ಲಾಸ್ಟಿಕ್ ಮುಕ್ತ ಪ್ರದೇಶವನ್ನಾಗಿ ಘೋಷಣೆ ಮಾಡಲಾಗಿದೆ. ಆದರೆ ವಿವಿ ಆವರಣದಲ್ಲಿ ಓಡಾಡುವ ಸಾರ್ವಜನಿಕರು ಮತ್ತು ವಾಹನ ಸವಾರರು ಕಸ ಹಾಕುವುದು, ಪ್ಲಾಸ್ಟಿಕ್ ಹಾಕುವ ಪ್ರಕರಣಗಳು ಕಂಡು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಕಸ ಹಾಕೋ ಸಾರ್ವಜನಿಕರು ಮತ್ತು ವಾಹನ ಸವಾರರಿಗೆ ಸ್ಥಳದಲ್ಲಿ ದಂಡ ಹಾಕುವ ನಿರ್ಧಾರಕ್ಕೆ ವಿವಿ ಬಂದಿದೆ.
ಕಸ ಹಾಕುವ ಸಾರ್ವಜನಿಕರು ಮತ್ತು ವಾಹನ ಸವಾರರಿಗೆ ಇನ್ನು ಮುಂದೆ ಸ್ಥಳದಲ್ಲೆ ದಂಡ ಹಾಕಲಾಗುತ್ತದೆ. ಒಂದು ವೇಳೆ ದಂಡದ ನಂತರವೂ ಕಸ ಹಾಕೋದು ಮುಂದುವರೆಸಿದರೆ ಅಂತಹವರ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ವಿಶ್ವವಿದ್ಯಾಲಯ ನೀಡಿದೆ.