Saturday, August 13, 2022

Latest Posts

ರಾಜ್ಯದಲ್ಲಿ ಪ್ರತಿಯೊಂದು ಜಿಲ್ಲೆಯಲ್ಲೂ ಮೃಗಾಲಯ ಸ್ಥಾಪಿಸಲು ಚಿಂತನೆ: ಸಚಿವ ಉಮೇಶ್ ಕತ್ತಿ

ಹೊಸದಿಗಂತ ವರದಿ, ಮೈಸೂರು:

ರಾಜ್ಯದಲ್ಲಿ ಪ್ರತಿಯೊಂದು ಜಿಲ್ಲೆಯಲ್ಲೂ ಮೃಗಾಲಯ ಸ್ಥಾಪನೆ ಮಾಡಬೇಕೆಂಬ ಚಿಂತನೆ ಇದ್ದು, ಇದಕ್ಕಾಗಿ ಎಲ್ಲಾ ಜಿಲ್ಲೆಗಳಲ್ಲೂ ಸ್ಥಳಗಳನ್ನ ಗುರುತು ಮಾಡಿ, ಕೇಂದ್ರಕ್ಕೆ ಪ್ರಸ್ತಾವನೆ ಕಳಿಸುತ್ತೇವೆ. ಅಲ್ಲಿಂದ ಅನುಮತಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ತಿಳಿಸಿದರು.
ಗುರುವಾರ ಅರಮನೆ ನಗರಿ ಮೈಸೂರಿನಲ್ಲಿರುವ ಇತಿಹಾಸ ಪ್ರಸಿದ್ಧ ಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡಿ ಮೃಗಾಲಯ ವೀಕ್ಷಿಸಿದರು.
ನಿರ್ಮಾಣ ಹಂತದಲ್ಲಿರುವ ಗೊರಿಲ್ಲಾ ಗ್ಯಾಲರಿ , ಮೃಗಾಲಯದ ಉಗ್ರಾಣ, ಪಾಕಶಾಲೆ, ಆಸ್ಪತ್ರೆಯನ್ನ ವೀಕ್ಷಣೆ ಮಾಡಿ, ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು. ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದರು.
ಸಭೆಯಲ್ಲಿ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಸದಸ್ಯರುಗಳಾದ ಗೋಕುಲ್ ಗೋವರ್ಧನ್, ಮೃಗಲಯದ ನಿರ್ದೇಶಕ ಅಜಿತ್ ಕುಲಕರ್ಣಿ ಸೇರಿದಂತೆ ಹಲವರ ಭಾಗಿಯಾಗಿದ್ದರು.
ಮೃಗಾಲಯ ವೀಕ್ಷಣೆಯ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಸಚಿವರು, ರಾಜ್ಯದ ಪ್ರವಾಸೋದ್ಯಮದ ಅಭಿವೃದ್ಧಿ ಹಿನ್ನೆಲೆ ಮೃಗಾಲಯಕ್ಕೆ ಪ್ರೋತ್ಸಾಹ ನೀಡಲಾಗುತ್ತದೆ. ಇಳಕಲ್ ಡ್ಯಾಂ ಬಳಿ ನೂತನ ಮೃಗಾಲಯ ತೆರೆಯಲು ಸರ್ಕಾರದ ಚಿಂತನೆ ನಡೆಸಿದೆ. ಈಗಾಗಲೇ ಅನುಮತಿಗಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 100 ಎಕರೆ ವಿಸ್ತೀರ್ಣ ಪ್ರದೇಶದಲ್ಲಿ ಮೃಗಾಲಯ ನಿರ್ಮಾಣಕ್ಕೆ ಚಿಂತನೆ ನಡೆಸಿದ್ದೇವೆ.
ಈ ಮೃಗಾಲಯ ಆರಂಭವಾದರೆ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ. ಪ್ರಾಣಿ ತಜ್ಞರ ಅಭಿಪ್ರಾಯ ಪಡೆದು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೃಗಾಲಯ ತೆರೆಯಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು. ಮೈಸೂರು ಮೃಗಾಲಯದಂತೆ ಎಲ್ಲಾ ಮೃಗಾಲಯಗಳನ್ನು ಅಭಿವೃದ್ಧಿಪಡಿಸುವುದು ನಮ್ಮ ಉದ್ದೇಶ. ಇಂದಿನ ಯುವ ಜನತೆಗೆ ಪ್ರಾಣಿ ಪಕ್ಷಿಗಳನ್ನು ಪರಿಚಯಿಸುವ ದೃಷ್ಟಿಯಿಂದ ಮೃಗಾಲಯ ತೆರೆಯಲಾಗುತ್ತಿದೆ. ಇದು ಅರಣ್ಯ ಇಲಾಖೆಯ ಮುಖ್ಯ ಕಾರ್ಯಕ್ರಮ ಎಂದು ಹೇಳಿದರು.
ಸುತ್ತೂರು ಮಠಕ್ಕೆ ಭೇಟಿ; ಸಭೆ ಬಳಿಕ ಸಚಿವ ಉಮೇಶ್ ಕತ್ತಿ ಅವರು, ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಆಗಮಿಸಿ, ಮಠದ ಪೀಠಾಧಿಪತಿಗಳಾದ ಶ್ರೀಶಿವರಾತ್ರಿದೇಶಿಕೇಂದ್ರಸ್ವಾಮಿ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡು, ಕೆಲಕಾಲ ಸಮಾಲೋಚನೆ ನಡೆಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss