ಕಾಡಾನೆಗಳ ದಫನಕ್ಕೆ ತೋಟ ಮಾಲಕರ ವಿರೋಧ: ಅರಣ್ಯ ಪ್ರದೇಶಕ್ಕೆ ಸಾಗಿಸಿದ ಅಧಿಕಾರಿಗಳು!

ಹೊಸದಿಗಂತ ವರದಿ, ಮಡಿಕೇರಿ:

ವಿದ್ಯುತ್ ತಂತಿ ಸ್ಪರ್ಶಗೊಂಡು ಸಾವಿಗೀಡಾದ ಎರಡು ಕಾಡಾನೆಗಳ ಮೃತದೇಹಗಳನ್ನು ಕಾಫಿ‌ ತೋಟದಲ್ಲಿ ದಫನ ಮಾಡಲು ಮಾಲಕರು ತೀವ್ರ ವಿರೋಧ ವ್ಯಕ್ತಪಡಿಸಿದ ಘಟನೆ ನಡೆದಿದ್ದು, ಬಳಿಕ ಅನಿವಾರ್ಯವಾಗಿ ಮೀನುಕೊಲ್ಲಿ ಅರಣ್ಯಕ್ಕೆ ಸಾಗಿಸಿ ಅಂತ್ಯಕ್ರಿಯೆ ನಡೆಸಲಾಯಿತು.
ನೆಲ್ಯಹುದಿಕೇರಿ ಗ್ರಾ.ಪಂ. ವ್ಯಾಪ್ತಿಯ ಅತ್ತಿಮಂಗಲದ ಕಾಫಿ ತೋಟದಲ್ಲಿ ತೇಗದ ಮರದ ರೆಂಬೆ ಬಿದ್ದು 11 ಕೆವಿ ವಿದ್ಯುತ್ ತಂತಿ ಕೆಳಭಾಗದಲ್ಲಿ ಹಾದು ಹೋದ ಪರಿಣಾಮ ಸೋಮವಾರ ಒಂದು ಗಂಡಾನೆ (30) ಹಾಗೂ ಹೆಣ್ಣಾನೆ(25) ಮೃತಪಟ್ಟಿದೆ.
ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಎರಡು ಕಾಡಾನೆಗಳ ಮೃತದೇಹವನ್ನು ತೋಟದಲ್ಲೇ ಅಂತ್ಯ ಸಂಸ್ಕಾರ ಮಾಡುವ ನಿರ್ಧಾರ ಕೈಗೊಂಡರು. ಆದರೆ ತೋಟದ ಮಾಲಕರು ಇದಕ್ಕೇ ತೀವ್ರ ವಿರೋಧ ವ್ಯಕ್ತಪಡಿಸಿದರು.
ಅಂತ್ಯ ಸಂಸ್ಕಾರಕ್ಕೆ ಸಹಕಾರ ನೀಡುವಂತೆ ಮಾಲಕರ ಮನವೊಲಿಸುವ ಪ್ರಯತ್ನವನ್ನು ಅಧಿಕಾರಿಗಳು ಮಾಡಿದರಾದರೂ ಅದು ಫಲ ನೀಡಲಿಲ್ಲ.
ಈ ಸಂದರ್ಭ ಮಾತನಾಡಿದ ಬೆಳೆಗಾರರು, ಅಂತ್ಯ ಸಂಸ್ಕಾರ ಇಲ್ಲೇ ಮಾಡಿದರೆ ಮತ್ತಷ್ಟು ಗಿಡಗಳಿಗೆ ಹಾನಿಯಾಗಿ ನಷ್ಟ ಉಂಟಾಗಲಿದೆ. ಆದ್ದರಿಂದ ತೋಟದಲ್ಲಿ ಕಾಡಾನೆ ಮೃತದೇಹದ ಅಂತ್ಯ ಸಂಸ್ಕಾರ ಮಾಡಲು ಅವಕಾಶ ನೀಡುವುದಿಲ್ಲ. ಕಾಡಾನೆಗಳಿಂದ ನಾವು ಸಾಕಷ್ಟು ನಷ್ಟ ಅನುಭವಿಸಿದ್ದು, ಒಂದು ವೇಳೆ ಇಲ್ಲೇ ಅಂತ್ಯ ಸಂಸ್ಕಾರ ಮಾಡುವ ಅನಿವಾರ್ಯತೆ ಇದ್ದರೆ ಆಗುವ ನಷ್ಟಕ್ಕೆ ಮೊದಲು ಪರಿಹಾರ ನೀಡಿ, ನಂತರ ಸಂಸ್ಕಾರ ಮಾಡಿ ಎಂದು ಪಟ್ಟು ಹಿಡಿದರು.
ಸ್ಥಳಕ್ಕೆ ಆಗಮಿಸಿದ ರೈತ ಸಂಘದ ಪ್ರಮುಖರು ಅರಣ್ಯ ಇಲಾಖೆ ಮತ್ತು ಚೆಸ್ಕಾಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.ಯಾವುದೇ ಕಾರಣಕ್ಕೂ ತೋಟದಲ್ಲಿ ಕಾಡಾನೆಗಳ ಮೃತದೇಹದ ಅಂತ್ಯ ಸಂಸ್ಕಾರ ಮಾಡಬಾರದೆಂದು ಆಗ್ರಹಿಸಿದರು. ಕಾಡಾನೆಗಳ ಹಾವಳಿಯನ್ನು ಅರಣ್ಯ ಇಲಾಖೆ ಸಮರ್ಪಕವಾಗಿ ನಿಯಂತ್ರಿಸುತ್ತಿಲ್ಲ. ವಿದ್ಯುತ್ ಇಲಾಖೆ ಮುಂಗಾರಿನ ಅವಧಿಯಲ್ಲಿ ವಿದ್ಯುತ್ ಮಾರ್ಗಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲವೆಂದು ಆರೋಪಿಸಿದ ರೈತ ಸಂಘದ ಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ರೈತ ಸಂಘದ ಅಮ್ಮತ್ತಿ ಹೋಬಳಿ ಅಧ್ಯಕ್ಷ ಪ್ರವೀಣ್ ಬೋಪಣ್ಣ ಮಾತನಾಡಿ, ಕಾಡಾನೆಗಳ ಹಾವಳಿ ತಡೆಯಲು ಅರಣ್ಯ ಇಲಾಖೆ ವಿಫಲವಾಗಿದ್ದು, ಆಹಾರ ಅರಸಿ ತೋಟಕ್ಕೆ ಬಂದಿದ್ದ ಕಾಡಾನೆಗಳೆರಡು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದೆ. ಇದರಿಂದ ಕಾರ್ಮಿಕರು ಹಾಗೂ ಮಾಲಕರು ಭಯಭೀತರಾಗಿದ್ದಾರೆ. ವಿದ್ಯುತ್ ಇಲಾಖೆ ಬೇಜವಾಬ್ದಾರಿತನ ತೋರಿದೆ ಎಂದು ಟೀಕಿಸಿದರು. ತೋಟದಲ್ಲಿ ಅಂತ್ಯ ಸಂಸ್ಕಾರ ಬೇಡವೆಂದು ಪಟ್ಟುಹಿಡಿದರು.
ಮೀನುಕೊಲ್ಲಿಗೆ ಸ್ಥಳಾಂತರ: ಬೆಳೆಗಾರರು ಹಾಗೂ ಗ್ರಾಮಸ್ಥರ ಪ್ರತಿಭಟನೆ ಹಿನ್ನೆಲೆಯಲ್ಲಿ ತೋಟದಲ್ಲಿ ಸತ್ತು ಬಿದ್ದಿದ್ದ ಕಾಡಾನೆಗಳೆರಡನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಾಲ್ನೂರು ಮೀನುಕೊಲ್ಲಿ ಮೀಸಲು ಅರಣ್ಯ ಪ್ರದೇಶಕ್ಕೆ ಸಾಗಿಸಿ, ಅಲ್ಲಿ ಅಂತ್ಯಕ್ರಿಯೆ ನಡೆಸಲು ಕ್ರಮ ಕೈಗೊಂಡರು.
ಅರಣ್ಯ ಇಲಾಖೆಯ ಡಿ.ಸಿ.ಎಫ್. ಪೂವಯ್ಯ, ಎ.ಸಿ.ಎಫ್ ಎ.ಎ.ಗೋಪಾಲ್, ವೈದ್ಯಾಧಿಕಾರಿ ಚೆಟ್ಟಿಯಪ್ಪ, ಸಿದ್ದಾಪುರ ಠಾಣಾಧಿಕಾರಿ ಮೋಹನ್ ರಾಜ್ ಸೇರಿದಂತೆ ಹಲವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!