ರಾಜಕೀಯ ಲಾಭಕ್ಕಾಗಿ ಜನರ ಭಾವನೆಗಳೊಂದಿಗೆ ಚೆಲ್ಲಾಟ: ಹೆಚ್.ಡಿ.ಕುಮಾರಸ್ವಾಮಿ

ಹೊಸದಿಗಂತ ವರದಿ, ಮಡಿಕೇರಿ:

ಕೊಡಗು ಸೇರಿದಂತೆ ರಾಜ್ಯದ ಎಲ್ಲಾ ಭಾಗಗಳಲ್ಲೂ ಜನ ಹೊಟ್ಟೆಗೆ ಹಿಟ್ಟಿಲ್ಲದೆ ನಾನಾ ರೀತಿಯ ಸಮಸ್ಯೆಗಳಿಂದ ಬಳಲುತ್ತಿದ್ದು ನಾವು ಅವರ ಅಭಿವೃದ್ಧಿ ಹಾಗೂ ಅವರಿಗೆ ಸ್ಪಂದನೆಯ ಕುರಿತು ಮಾತಾಡಬೇಕು. ಆದರೆ ಬಿಜೆಪಿ ಮಾತ್ರ ಇನ್ನೂ ಜನರ ಭಾವನೆಗಳ ಜೊತೆ ಚೆಲ್ಲಾಟವಾಡುತ್ತಾ, ರಾಜಕೀಯ ಲಾಭವನ್ನು ಪಡೆಯುತ್ತಾ ಎಲ್ಲರ ಸಂಬಂಧಗಳನ್ನು ಒಡೆಯಲು ಪ್ರಯತ್ನಿಸುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಮಡಿಕೇರಿಯ ರೆಸಾರ್ಟ್ ಒಂದರಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಸಂದರ್ಭ ಸುದ್ದಿಗಾರರ ಮಾತನಾಡಿದ ಅವರು, ಕೊಡಗಿನ ಜನ ನಿರಂತರವಾಗಿ ಒಂದಲ್ಲ ಒಂದು ಸಮಸ್ಯೆಯಿಂದ ಸಂಕಷ್ಟಕ್ಕೆ ಈಡಾಗುತ್ತಿದ್ದಾರೆ. ಅತಿಯಾದ ಮಳೆ ಒಂದೆಡೆಯಾದರೆ ವನ್ಯಜೀವಿಗಳ ಉಪಟಳ ಕೂಡಾ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಬಗ್ಗೆ ಸರ್ಕಾರ ಗಮನ ಹರಿಸದೆ ರಾಜ್ಯದ ಜನರನ್ನು ದಿಕ್ಕು ತಪ್ಪಿಸುವ ಹೇಳಿಕೆಗಳ ಮೂಲಕ ತನ್ನ ವೈಫಲ್ಯವನ್ನು ಮರೆಮಾಚುತ್ತಿದೆ ಎಂದರು.
ಜನರ ಬದುಕು ಕಟ್ಟಲಿ: ದೇಶದಲ್ಲಿ ಹಿಂದಿ ರಾಷ್ಟ್ರಭಾಷೆಯಾಗಬೇಕು ಹಿಂದು ರಾಷ್ಟ್ರವಾಗಬೇಕೆನ್ನುವ ಸಾತ್ಯಕಿ ಸಾವರ್ಕರ್ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ “ಸಾವರ್ಕರ್ ಮೊಮ್ಮಗನನ್ನು ಕಟ್ಟಿಕೊಂಡು ನನಗೇನಾಗಬೇಕು? ಹೇಳಿದ ವ್ಯಕ್ತಿಗೆ ಈ ದೇಶದ ಪ್ರಸ್ತುತ ವಿದ್ಯಮಾನಗಳ ಅರಿವಿಲ್ಲ. ಮೊದಲು ಜನರ ಬದುಕನ್ನು ಕಟ್ಟಲು ಮನಸು ಮಾಡಲಿ ಬಳಿಕ ಮನಸ್ಸನ್ನು ಒಡೆಯುವ ಕೆಲಸ ಮಾಡಲಿ ಎಂದು ವ್ಯಂಗ್ಯವಾಡಿದರು.
ಸುಸಂಸ್ಕೃತರ ಪಕ್ಷ: ಸಚಿವ ಸೋಮಣ್ಣ ಮಹಿಳೆಗೆ ಕಪಾಳಮೋಕ್ಷ ಮಾಡಿದ ವಿಚಾರದ ಬಗ್ಗೆ ಮಾತನಾಡಿದ ಕುಮಾರಸ್ವಾಮಿ, ಬಿಜೆಪಿ ಪಕ್ಷ ಮಹಿಳೆಯರನ್ನು ಯಾವ ರೀತಿ ನಡೆಸಿಕೊಳ್ಳುತ್ತಿದೆ ಎಂದು ತಿಳಿಯುತ್ತದೆ. ಬಿಜೆಪಿಯ ನಡವಳಿಕೆಯನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಅವರು ಎರಡು ತರಹದ ಮುಖ ಹೊಂದಿದ್ದಾರೆ. ಎದುರು ಸಿಕ್ಕಾಗ ಒಂದು ರೀತಿ ಮಾತನಾಡಿಸುತ್ತಾರೆ. ಆದರೆ ಒಳಗೆ ಇರುವ ನಡವಳಿಕೆಯೇ ಬೇರೆ ಇದೆ.ಸಾರ್ವಜನಿಕರು ಅಹವಾಲು ಕೊಡಲು ಬಂದಾಗ ಅವರು ನಡೆದುಕೊಳ್ಳುವುದೆಲ್ಲಾ ನನಗೆ ಗೊತ್ತಿದೆ.ಅವರಿಂದ ಒಳ್ಳೆಯ ನಡವಳಿಕೆಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಬಿಜೆಪಿಯ ಹಲವು ಸಚಿವರು ಹಿಂದೆ ಹೀಗೆ ನಡೆದುಕೊಂಡಿದ್ದು ಗೊತ್ತೇ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!