ಸಿಲಿಕಾನ್ ಸಿಟಿಯಲ್ಲಿ ಪ್ಲೆಕ್ಸ್, ಬ್ಯಾನರ್ ಸಂಪೂರ್ಣ ನಿಷೇಧ: BBMP ಆದೇಶ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಲಿಕಾನ್ ಸಿಟಿಯ ನಗರದಲ್ಲಿ ಪ್ಲೆಕ್ಸ್, ಬ್ಯಾನರ್ ಸಂಪೂರ್ಣ ನಿಷೇಧಿಸುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದು, ಇದೀಗ ಬಿಬಿಎಂಪಿಯಿಂದ ಅಧಿಕೃತವಾಗಿ ಆದೇಶ ಹೊರಡಿಸಲಾಗಿದೆ.

ಈ ಕುರಿತಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಆದೇಶ ಹೊರಡಿಸಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಅಳವಡಿಸಿರುವ ಪ್ಲೆಕ್ಸ್, ಬ್ಯಾನರ್ಸ್, ಫ್ಲಾಗ್, ಬಂಟಿಂಗ್ಸ್ ಇತ್ಯಾದಿಗಳನ್ನು ನಿಯಮಾನುಸಾರ ತೆರವುಗೊಳಿಸಿ ಅಂತಹವರ ವಿರುದ್ಧ ಕ್ರಮ ಜರುಗಿಸುವ ಸಂಬಂಧ ಬಿಬಿಎಂಪಿಯ ಅಧಿಕಾರಿಗಳಿಗೆ ಕರ್ತವ್ಯ ಮತ್ತು ಜವಾಬ್ದಾರಿಯನ್ನು ನೀಡಿ ಆದೇಶ ಹೊರಡಿಸಿದ್ದಾರೆ .

ನಗರದಲ್ಲಿ ಒಂದೇ ಒಂದು ಅನಧಿಕೃತ ದೃಶ್ಯ ಕಂಡುಬಂದರೆ ಪಾಲಿಕೆ ಹಾಗೂ ರಾಜ್ಯ ಸರ್ಕಾರ ತಲಾ ರೂ.50,000/- ಠೇವಣಿ ಇಡಬೇಕೆಂದು ನಿರ್ದೇಶನ ನೀಡಿದ್ದು, ಈ ಸಂಬಂಧ ಉಲ್ಲೇಖಿತ (2)ರ ಸುತ್ತೋಲೆಗಳಲ್ಲಿ ಮಾನ್ಯ ಉಚ್ಚ ನ್ಯಾಯಾಲಯದ ನಿರ್ದೇಶನದಂತೆ ಕೂಡಲೇ ತುರ್ತು ಕ್ರಮ ಕೈಗೊಂಡು ಅನಧಿಕೃತ ಹೋರ್ಡಿಂಗ್ಸ್ , ಪ್ಲೆಕ್ಸ್ , ಬ್ಯಾನರ್, ಎಲ್.ಇ.ಡಿ. ಇನ್ನಿತರೇ ಜಾಹೀರಾತು ಫಲಕಗಳನ್ನು ತೆರವುಗೊಳಿಸಲು ಅಗತ್ಯ ಕ್ರಮವಹಿಸಿ ಕೈಗೊಂಡ ಕ್ರಮದ ಬಗ್ಗೆ ಅಂಕಿ ಅಂಶಗಳು, ದಾಖಲೆಗಳ ಸಮೇತ ಅನುಪಾಲನಾ ವರದಿಯನ್ನು ದಿ.16.08.2013ರೊಳಗೆ ಕಡ್ಡಾಯವಾಗಿ ಸಲ್ಲಿಸಲು ಸೂಚಿಸಲಾಗಿತ್ತು. ತಪ್ಪಿದಲ್ಲಿ ಉಚ್ಛ ನ್ಯಾಯಾಲಯದ ಆದೇಶ ಉಲ್ಲಂಘನೆ ಆದೇಶ ಪಾಲನೆಯಲ್ಲಿನ ನಿರ್ಲಕ್ಷ , ಕರ್ತವ್ಯಲೋಪದಿಂದಾಗಿ ಮುಂದೆ ಎದುರಾಗುವ ಪರಿಣಾಮಗಳಿಗೆ ಸಂಬಂಧಪಟ್ಟ ಅಪರ, ಜಂಟಿ ಆಯುಕ್ತರು ಮತ್ತು ಮುಖ್ಯ ಅಭಿಯಂತರರುಗಳನ್ನು ವೈಯಕ್ತಿಕ ಜವಾಬ್ದಾರರನ್ನಾಗಿಸಲಾಗುವುದೆಂದು ಈ ಮೂಲಕ ಕಟ್ಟುನಿಟ್ಟಾಗಿ ತಿಳಿಸಲಾಗಿದೆ ಎಂದು ಹೇಳಿದ್ದಾರೆ.

ಈ ಹಿನ್ನಲೆಯಲ್ಲಿ ಸಂಬಂಧಪಟ್ಟ ವಲಯ ಆಯುಕ್ತರ ಉಸ್ತುವಾರಿಯಲ್ಲಿ ಕಟ್ಟುನಿಟ್ಟಾಗಿ ಎಲ್ಲಾ ಹೋರ್ಡಿಂಗ್ಸ್ , ಪ್ಲೆಕ್ಸ್, ಬ್ಯಾನರ್, ಎಲ್.ಇ.ಡಿ. ಇನ್ನಿತರೇ ಜಾಹೀರಾತು ಫಲಕಗಳನ್ನು ತೆರವುಗೊಳಿಸಲು ಸಂಬಂಧಪಟ್ಟ ಜಂಟಿ ಆಯುಕ್ತರು ಹಾಗೂ ಮುಖ್ಯ ಅಭಿಯಂತರರು ತುರ್ತಾಗಿ ಕ್ರಮ ಕೈಗೊಳ್ಳುವಂತೆ, ಒಂದು ವೇಳೆ ತೆರವುಗೊಳಿಸಲು ವಿಫಲರಾದಲ್ಲಿ ಸಂಬಂಧಪಟ್ಟ ಜಂಟಿ ಆಯುಕ್ತರು ಮತ್ತು ಮುಖ್ಯ ಅಭಿಯಂತರನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ತಲಾ 50,000/- ಠೇವಣಿಯನ್ನು ಅವರಿಂದ ವಸೂಲಿ ಮಾಡಿ ನ್ಯಾಯಾಲಯದಲ್ಲಿ ಇಡಲಾಗುವುದು ಎಂದು ತಿಳಿಸಿದ್ದಾರೆ.

ಈ ಕುರಿತು ಪಾಲಿಕೆಯ ಎಲ್ಲಾ ವಲಯ ಆಯುಕ್ತರರು ತಮ್ಮ ವಲಯ ವ್ಯಾಪ್ತಿಯಲ್ಲಿನ ಜಾಹೀರಾತುಗಳ ತೆರವಿಗೆ ಸಂಬಂಧಪಟ್ಟಂತೆ ಮೇಲುಸ್ತುವಾರಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!