ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಂಡೀಗಢದಲ್ಲಿ ಮೂರು ಮಹತ್ವದ ಕ್ರಿಮಿನಲ್ ಕಾನೂನುಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದರು. ಈ ಮೂಲಕ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷಿ ಅಧಿನಿಯಮಗಳು ಯಶಸ್ವಿಯಾಗಿ ಅನುಷ್ಠಾನಗೊಂಡಿವೆ.
ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸತ್ಯ ಮತ್ತು ನ್ಯಾಯ ಸ್ಥಾಪಿಸುವ ಶಕ್ತಿಯ ರೂಪವಾದ ಮಾತೆ ಚಂಡಿ ದೇವಿಗೆ ಚಂಡೀಗಢದ ಗುರುತು ಸಂಬಂಧಿಸಿದೆ. ಅದೇ ತತ್ವಶಾಸ್ತ್ರವು ಭಾರತೀಯ ನ್ಯಾಯ ಸಂಹಿತೆ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸಂಪೂರ್ಣ ಸ್ವರೂಪದ ಆಧಾರವಾಗಿದೆ. ಭಾರತ ಸಂವಿಧಾನದ ಸ್ಫೂರ್ತಿಯಿಂದ ಪ್ರೇರಿತವಾದ ಭಾರತೀಯ ನ್ಯಾಯ ಸಂಹಿತೆ ಜಾರಿಗೆ ಬರುತ್ತಿರುವುದು ಒಂದು ಐತಿಹಾಸಿಕ ಕ್ಷಣವಾಗಿದ್ದು, ರಾಷ್ಟ್ರವು ‘ವಿಕಸಿತ ಭಾರತ’ ಕಟ್ಟುವ ಸಂಕಲ್ಪದೊಂದಿಗೆ ಮುನ್ನಡೆಯುವ ಪ್ರಮುಖ ಘಟ್ಟದಲ್ಲಿದೆ ಎಂದು ತಿಳಿಸಿದರು.
ಗೃಹ ವ್ಯವಹಾರಗಳ ಸಚಿವಾಲಯವು ಜನವರಿ 2020ರಲ್ಲಿ ಸಲಹೆ ಸೂಚನೆಗಳನ್ನು ಕೇಳಿತ್ತು. ದೇಶದ ಹಲವು ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳ ಬೆಂಬಲದೊಂದಿಗೆ ಸುಪ್ರೀಂ ಕೋರ್ಟ್‌ನ ಅನೇಕ ಮುಖ್ಯ ನ್ಯಾಯಮೂರ್ತಿಗಳ ಸಲಹೆಗಳನ್ನು ಇದರಲ್ಲಿ ಅಳವಡಿಸಿಲಾಗಿದೆ. ಇಂದಿನ ಆಧುನಿಕ ಜಗತ್ತಿನಲ್ಲಿ ರಾಷ್ಟ್ರದ ಅಗತ್ಯತೆಗಳ ಕುರಿತು ಚರ್ಚೆಗಳು ನಡೆಯುತ್ತಿವೆ. ಸ್ವಾತಂತ್ರ್ಯ ಗಳಿಸಿದ 7 ದಶಕಗಳಲ್ಲಿ ನ್ಯಾಯಾಂಗ ವ್ಯವಸ್ಥೆಯು ಎದುರಿಸಿದ ಸವಾಲುಗಳ ಬಗ್ಗೆ ತೀವ್ರವಾದ ಚಿಂತನ-ಮಂಥನ ನಡೆದಿದೆ. ಪ್ರತಿಯೊಂದು ಕಾನೂನಿನ ಪ್ರಾಯೋಗಿಕ ಅಂಶವನ್ನು ನೋಡಲಾಗಿದೆ. ನ್ಯಾಯ ಸಂಹಿತೆಯ ಭವಿಷ್ಯದ ಅಂಶವನ್ನು ರೂಪಿಸಲು ಸಹ ಕೆಲಸ ಮಾಡಲಾಗಿದೆ. ಈ ಎಲ್ಲಾ ಪ್ರಯತ್ನಗಳು ನ್ಯಾಯ ಸಂಹಿತೆಯ ಪ್ರಸ್ತುತ ರೂಪವನ್ನು ನಮಗೆ ನೀಡಿವೆ. ಪ್ರತಿಯೊಬ್ಬರ ಸಹಕಾರದೊಂದಿಗೆ ದೇಶದ ಈ ನ್ಯಾಯ ಸಂಹಿತೆಯು ಭಾರತದ ನ್ಯಾಯಾಂಗ ಪಯಣದಲ್ಲಿ ಒಂದು ಮೈಲಿಗಲ್ಲು ಎಂದು ಸಾಬೀತುಪಡಿಸುತ್ತದೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಗುಲಾಮರಿಗಾಗಿ ರಚಿಸಲಾದ ಕಾನೂನು ಏಕೆ ಮುಂದುವರಿಸಬೇಕು?
ಸ್ವತಂತ್ರ ದೇಶದಲ್ಲಿ ಗುಲಾಮರಿಗಾಗಿ ರಚಿಸಲಾದ ಕಾನೂನುಗಳನ್ನು ನಾವು ಏಕೆ ಮುಂದುವರಿಸಬೇಕು? ಎಂದು ಪ್ರಶ್ನಿಸಿದ್ದಾರೆ. ಈ ವಸಾಹತುಶಾಹಿ ಮನಸ್ಥಿತಿಯನ್ನು ತೊಡೆದುಹಾಕಲು ಮತ್ತು ದೇಶದ ಪ್ರಜಾಪ್ರಭುತ್ವದ ಆದರ್ಶಗಳೊಂದಿಗೆ ಹೊಂದಿಕೊಳ್ಳುವ ಕಾನೂನು ಚೌಕಟ್ಟಿಗೆ ಪರಿವರ್ತನೆಯ ಅಗತ್ಯವನ್ನು ಪ್ರಧಾನಿ ಮೋದಿ ಒತ್ತಿ ಹೇಳಿದ್ದಾರೆ.
ಅಂದು ಬ್ರಿಟಿಷ್ ವಸಾಹತುಶಾಹಿ ಯುಗದಲ್ಲಿ ರಚಿಸಲಾದ ಹಳೆಯ ಕ್ರಿಮಿನಲ್ ಕಾನೂನುಗಳು ಭಾರತೀಯರನ್ನು ಶಿಕ್ಷಿಸಲು ಮತ್ತು ಅವರನ್ನು ಅಧೀನದಲ್ಲಿಡಲು ವಿನ್ಯಾಸಗೊಳಿಸಲಾಗಿದೆ .ಭಾರತವು 1947ರಲ್ಲಿ ಸ್ವಾತಂತ್ರ್ಯವನ್ನು ಪಡೆದಾಗ ಜನರು ಈ ವಸಾಹತುಶಾಹಿ ಕಾನೂನುಗಳಿಂದ ಮುಕ್ತರಾಗುತ್ತಾರೆ ಎಂಬ ಭರವಸೆಯಲ್ಲಿದ್ದರು. ಆದರೆ, ಆ ಕಾನೂನುಗಳನ್ನು ನಿಯಂತ್ರಣ ಮತ್ತು ಅಧೀನತೆಯ ಸಾಧನಗಳಾಗಿ ಬಳಸಲಾಯಿತು ಎಂದಿದ್ದಾರೆ.
1857ರ ಸ್ವಾತಂತ್ರ್ಯ ಹೋರಾಟವು ಬ್ರಿಟಿಷರ ಆಳ್ವಿಕೆಯ ಬೇರುಗಳನ್ನು ಅಲುಗಾಡಿಸಿತು . =1860ರಲ್ಲಿ ಭಾರತೀಯ ದಂಡ ಸಂಹಿತೆ (IPC) ಅನ್ನು ಹೇಗೆ ಪರಿಚಯಿಸಲಾಯಿತು ಮತ್ತು ಸ್ವಲ್ಪ ಸಮಯದ ನಂತರ ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) ಅನುಸರಿಸಲಾಯಿತು ಎಂಬುದನ್ನು ಅವರು ತಿಳಿಸಿದ್ದಾರೆ. ಈ ಕಾನೂನುಗಳನ್ನು ಭಾರತೀಯರನ್ನು ಶಿಕ್ಷಿಸುವ ಮತ್ತು ಗುಲಾಮರನ್ನಾಗಿ ಇರಿಸುವ ಉದ್ದೇಶದಿಂದ ಮಾಡಲಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಸಮಾನತೆ, ಸೌಹಾರ್ದತೆ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಗಳೊಂದಿಗೆ ನ್ಯಾಯ ಸಂಹಿತೆಯನ್ನು ಹೆಣೆಯಲಾಗಿದೆ. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರಾಗಿದ್ದರೂ, ಪ್ರಾಯೋಗಿಕ ವಾಸ್ತವ ವಿಭಿನ್ನವಾಗಿದೆ. ಬಡವರು ಕಾನೂನುಗಳಿಗೆ ಹೆದರುತ್ತಾರೆ, ನ್ಯಾಯಾಲಯ ಅಥವಾ ಪೊಲೀಸ್ ಠಾಣೆ ಮೆಟ್ಟಿಲೇರುತ್ತಾರೆ. ಹೊಸ ನ್ಯಾಯ ಸಂಹಿತೆ ಸಮಾಜದ ಮನೋವಿಜ್ಞಾನವನ್ನು ಬದಲಾಯಿಸುವ ಕೆಲಸ ಮಾಡುತ್ತದೆ. ದೇಶದ ಕಾನೂನು ಸಮಾನತೆಯ ಭರವಸೆ ಎಂಬ ನಂಬಿಕೆ ಪ್ರತಿಯೊಬ್ಬ ಬಡವರಿಗೂ ಇರುತ್ತದೆ. ಇದು ನಮ್ಮ ಸಂವಿಧಾನದಲ್ಲಿ ಭರವಸೆ ನೀಡಿರುವ ನಿಜವಾದ ಸಾಮಾಜಿಕ ನ್ಯಾಯವನ್ನು ಸಾಕಾರಗೊಳಿಸಿದೆ ಎಂದರು.