Friday, December 8, 2023

Latest Posts

ಪಿಎಂ-ಕಿಸಾನ್ 11ನೇ ಕಂತು ಬಿಡುಗಡೆ,‌ ಗರೀಬ್‌ ಕಲ್ಯಾಣ್‌ ಸಮ್ಮೇಳನದಲ್ಲಿ ಮೋದಿ ಸಂದೇಶವೇನು..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯಡಿ 10 ಕೋಟಿಗೂ ಹೆಚ್ಚು ಫಲಾನುಭವಿ ರೈತರಿಗೆ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ 21,000 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದಾರೆ. ಈ ವರ್ಗಾವಣೆ PM-KISAN ಯೋಜನೆಯಡಿಯಲ್ಲಿ ಬಿಡುಗಡೆಯಾದ 11 ನೇ ಕಂತಾಗಿದೆ. ‘ಗರೀಬ್ ಕಲ್ಯಾಣ್ ಸಮ್ಮೇಳನ’ದಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಮಂಗಳವಾರ ಶಿಮ್ಲಾಗೆ ಆಗಮಿಸಿದ್ದರು. ಕೇಂದ್ರದ ಎನ್‌ಡಿಎ ಸರ್ಕಾರದ ಎಂಟನೇ ವರ್ಷಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಮೋದಿ ಸಂವಾದ ನಡೆಸಿದರು.

ಈ ಕಾರ್ಯಕ್ರಮದಲ್ಲಿ ಪ್ರಧಾನಿಯವರು ದೇಶಾದ್ಯಂತ ಸರ್ಕಾರ ನಡೆಸುತ್ತಿರುವ ವಿವಿಧ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕ ಪ್ರತಿನಿಧಿಗಳಿಂದ ಪ್ರತಿಕ್ರಿಯೆಯನ್ನು ಕೇಳಿದರು. ಪ್ರಧಾನ ಮಂತ್ರಿಗಳ ಕಾರ್ಯಾಲಯದ ಪ್ರಕಾರ, ಸಮ್ಮೇಳನದ ಪ್ರಯತ್ನವು ದೇಶದ ನಾಗರಿಕರ ಜೀವನ ಸೌಕರ್ಯವನ್ನು ಸುಧಾರಿಸಲು ಹಾಗೂ ಸರ್ಕಾರಿ ಕಾರ್ಯಕ್ರಮಗಳ ತಲುಪುವಿಕೆ ಮತ್ತು ವಿತರಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುವುದಾಗಿದೆ.

11 ನೇ ಕಂತಿನ ಭಾಗವಾಗಿ ಇ-ಕೆವೈಸಿ ನೀತಿಯನ್ನು ಜಾರಿಗೆ ತರಲಾಗಿದೆ. ಯೋಜನೆಯಲ್ಲಿನ ಭ್ರಷ್ಟಾಚಾರವನ್ನು ತಡೆಗಟ್ಟಲು ಕೇಂದ್ರವು ಈ ನೀತಿಯನ್ನು ಜಾರಿಗೆ ತರುತ್ತಿದೆ ಇದರಿಂದ ಅರ್ಹ ಫಲಾನುಭವಿಗಳಿಗೆ ಮಾತ್ರ ಹಣ ತಲುಪುವ ವ್ಯವಸ್ಥೆ ಆಗುತ್ತದೆ ಎಂದು ಪ್ರಧಾನಿ ಮೋದಿಯವರು ತಿಳಿಸಿದರು. 2014ಕ್ಕೂ ಮುನ್ನ ಸರ್ಕಾರ ಭ್ರಷ್ಟಾಚಾರವನ್ನು ತೊಲಗಿಸುವ ಬದಲು ಅದಕ್ಕೆ ಬದ್ಧವಾಗಿತ್ತು. ಹಾಗಾಗಿಯೇ ಬಡವರಿಗೆ, ರೈರಿಗೆ, ನಿರ್ಗತಿಕರಿಗೆ ಸಿಗುವ ಯೋಜನೆಗಳನ್ನು ಸರ್ಕಾರವೇ ಕೊಳ್ಳೆ ಹೊಡೆಯಲು ನೋಡುತ್ತಿತ್ತು. ಆದರೆ ನಮ್ಮ ಸರ್ಕಾರ ಜನರಿಗಾಗಿ ರೂಪಿತವಾಗಿದೆ. ಇನ್ನು ಮುಂದೆ ಈ ಸರ್ಕಾರ ಯಜಮಾನನಾಗಿ ಕೆಲಸ ಮಾಡುವುದಿಲ್ಲ, ಬದಲಿಗೆ ನಿಮ್ಮ ಸೇವಕನಾಗಿ ಕೆಲಸ ಮಾಡುತ್ತದೆ ಎಂದರು. ಜನರ ಸೇವೆ, ಉತ್ತಮ ಆಡಳಿತ, ಬಡವರು/ನಿರ್ಗತಿಕರ ಕಲ್ಯಾಣಕ್ಕಾಗಿ ನಮ್ಮ ಸರ್ಕಾರ ದುಡಿಯಲಿದೆ. 130ಕೋಟಿ ಭಾರತೀಯರಿಗಾಗಿ ನನ್ನ ಜೀವನನ್ನು ಮುಡಿಪಾಗಿಟ್ಟಿದ್ದೇನೆ. ಈ ಸರ್ಕಾರ ಯಜಮಾನನಲ್ಲ, ನಿಮ್ಮ‌ ಸೇವಕ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪ್ರಧಾನ ಮಂತ್ರಿ ಆವಾಸ್‌ ಯೋಜನೆ, ಪ್ರಧಾನ ಮತ್ರಿ ಕಿಸಾನ್‌ ಸಮ್ಮಾನ್‌ ನಿಧಿ, ಪ್ರಧಾನ ಮಂತ್ರಿ ಉಜ್ವಲ ಯೋಜನೆ, ಪೋಷಣ್‌ ಅಭಿಯಾನ, ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ, ಸ್ವಚ್ಛ ಭಾರತ್‌ ಮಿಷನ್‌, ಜಲ ಜೀವನ್‌ ಮಿಷನ್‌, ಗರೀಬ್‌ ಕಲ್ಯಾಣ್‌ ಅನ್ನ ಯೋಜನೆ ಸೇರಿದಂತೆ ಇನ್ನೂ ಹಲವಾರು ಯೋಜನೆಗಳ ಸೌಲಭ್ಯ ಪಡೆದಿರುವ ದೇಶದ ಎಲ್ಲಾ ಜಿಲ್ಲೆಗಳಿಂದ ಆಯ್ದ ಪಲಾನುಭವಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!