ಪ್ರಧಾನಿ ಮೋದಿ ಸುಳ್ಳುಗಾರರ ನಾಯಕ: ಮಲ್ಲಿಕಾರ್ಜುನ ಖರ್ಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಪ್ರಧಾನಿ ಮೋದಿ ಅವರು ‘ಸುಳ್ಳುಗಾರರ ನಾಯಕ’ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ರಾಜಸ್ಥಾನದ (Rajastan) ಜೈಪುರದಲ್ಲಿ ನಡೆದ ಪಕ್ಷದ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ 25 ಗ್ಯಾರಂಟಿಗಳನ್ನು ಈಡೇರಿಸುತ್ತೇವೆ ಎಂದು ನಾವು ಭರವಸೆ ನೀಡಿದ್ದೇವೆ.ನಾವು ಪ್ರಧಾನಿ ಮೋದಿಯಂತೆ ಸುಳ್ಳು ಹೇಳುವುದಿಲ್ಲ. ಅವರು ಜನರಿಗೆ ಹಲವಾರು ಭರವಸೆಗಳನ್ನುನೀಡಿದ್ದರು. ಆದರೆ ಯಾವ ಭರವಸೆಗಳನ್ನು ಈಡೇರಿಸಿದ್ದಾರೆ? ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು. ಅಂದರೆ ಕಳೆದ 10 ವರ್ಷಗಳಲ್ಲಿ ಒಟ್ಟು 20 ಕೋಟಿ ಉದ್ಯೋಗಗಳನ್ನು ಒದಗಿಸಬೇಕಿತ್ತು. ಆದರೆ 20 ಕೋಟಿ ಉದ್ಯೋಗಗಳು ದೊರಕಿದೆಯೇ’ ಎಂದು ಪ್ರಶ್ನಿಸಿದರು.

ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯನ್ನು ಪ್ರಶ್ನೆ ಮಾಡಿದ ಖರ್ಗೆ, ಗಡಿಯಲ್ಲಿ ಭಾರತದ ನೆಲವನ್ನು ಚೀನಾ ಅಕ್ರಮಿಸಿಕೊಳ್ಳುತ್ತಿದ್ದು, ದೇಶದ ಗ್ರಾಮಗಳ ಹೆಸರುಗಳನ್ನು ಬದಲಾಯಿಸಿದೆ. ಆದರೆ ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಏಕೆ ಉತ್ತರಿಸುತ್ತಿಲ್ಲ ಎಂದು ಹೇಳಿದರು.

ನನಗೆ 56 ಇಂಚಿನ ಎದೆ ಇದೆ ಎಂದು ಮೋದಿ ಹೇಳುತ್ತಾರೆ. 56, 55 ಅಥವಾ 54 ಆಗಿರಲಿ. ನಾವು ಟೇಲರ್ ಕರೆದು ಅಳತೆ ಮಾಡಿಯೇ ಬಿಡೋಣ ಎಂದು ವ್ಯಂಗ್ಯವಾಡಿದರು.

ಮೂರನೇ ಎರಡರಷ್ಟು ಬಹುಮತ ನೀಡಿದರೆ ಸಂವಿಧಾನವನ್ನೇ ಬದಲಾಯಿಸುವುದಾಗಿ ಪ್ರಧಾನಿ ಮೋದಿ ಹಾಗೂ ಆರ್‌ಎಸ್‌ಎಸ್ ಹೇಳುತ್ತಿದೆ ಎಂದು ಖರ್ಗೆ ಕಳವಳ ವ್ಯಕ್ತಪಡಿಸಿದರು.

ಪಕ್ಷ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಯಶಸ್ವಿಯಾಗಿ ಜಾರಿ ಮಾಡಿರುವ ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ದೋಚುತ್ತಿದೆ ಎಂದೂ ಸಹ ಅವರು ಆರೋಪಿಸಿದರು.

ಪ್ರಧಾನಿ ತಮ್ಮ ಭಾಷಣದಲ್ಲಿ, ಸಂವಿಧಾನದ 370ನೇ ವಿಧಿ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಕಲ್ಪಿಸಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ್ದರ ಬಗ್ಗೆ ಮಾತನಾಡುತ್ತಾರೆ. ಆದರೆ ರೈತರಿಗಾಗಿ ಏನು ಮಾಡಿದ್ದಾರೆಂದು ಹೇಳಲಿ ಎಂದು ಅವರು ಪ್ರಶ್ನಿಸಿದರು.

55 ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್ ದೇಶದ ಅಭಿವೃದ್ಧಿಗಾಗಿ ಶ್ರಮವಹಿಸಿದೆ. ಮೂಲಸೌಕರ್ಯಗಳನ್ನು ನಿರ್ಮಿಸಿದೆ. ಆದರೆ ಕಾಂಗ್ರೆಸ್ ಸರ್ಕಾರವು ಹಾಕಿದ ಹಳಿಗಳ ಮೇಲೆ ರೈಲುಗಳಿಗೆ ಹಸಿರು ನಿಶಾನೆ ತೋರುವ ಮೂಲಕ ಮೋದಿ ಪ್ರಶಂಸೆ ಗಿಟ್ಟಿಸುತ್ತಾರೆ ಎಂದು ಅವರು ವಾಗ್ದಾಳಿ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!