ಎಡವಿ ಬಿದ್ದ ಬಸ್ ನಿರ್ವಾಹಕ: ಕೈ- ಕಾಲುಗಳಿಗೆ ಗಂಭೀರ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಾಲೂಕಿನ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಲ್ಲಿ ಬಸ್ ನಿರ್ವಾಹಕರೊಬ್ಬರು ಎಡವಿ ಬಿದ್ದು ಬಲ ಕೈ ಮತ್ತು ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು ಬಸ್ ಚಾಲಕ ಮತ್ತು ಬಸ್ ನಿಲ್ದಾಣದ ಅಂಗಡಿ ಮಳಿಗೆ ಮಾಲಿಕರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಕಾರವಾರ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ.
ಕುಮಟಾ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬಿಜಾಪುರ ನಿವಾಸಿ ದೇಸಾಯಿ ರಾಥೋಡ್ (49) ಗಾಯಗೊಂಡ ವ್ಯಕ್ತಿಯಾಗಿದ್ದು
ಕಾರವಾರದಿಂದ ಕುಮಟಾಕ್ಕೆ ಕರ್ತವ್ಯಕ್ಕೆ ಹೊರಟಾಗ ಅಂಕೋಲಾ ಬಸ್ ನಿಲ್ದಾಣದಲ್ಲಿ ನೋಂದಣಿ ಮಾಡಿ ಬರುತ್ತಿದ್ದ ಸಂದರ್ಭದಲ್ಲಿ ನಿಲ್ದಾಣದಲ್ಲಿ ಎಡವಿ ಬಿದ್ದಿರುವುದಾಗಿ ತಿಳಿದುಬಂದಿದೆ.
ಚಾಲಕ ದತ್ತು ನಾಯ್ಕ, ಅಂಗಡಿ ಮಳಿಗೆಗಳ ಕೆಲಸಗಾರ ಪ್ರವೀಣ ಗುನಗಾ, ನಾಗರಾಜ ಶೆಟ್ಟಿ ಮತ್ತಿತರರು ಸೇರಿ ಕೂಡಲೇ ಆಂಬ್ಯುಲೆನ್ಸ್ ಗೆ ಕರೆ ಮಾಡಿ ಆಸ್ಪತ್ರೆಗೆ ಸಾಗಿಸುವಲ್ಲಿ ಸಹಕರಿಸಿದರು.
ತಾಲೂಕಿನ ನೂತನ ಬಸ್ ನಿಲ್ದಾಣದ ಅವೈಜ್ಞಾನಿಕ ಕಾಮಗಾರಿ ಹಲವಾರು ಅವಾಂತರಗಳಿಗೆ ಕಾರಣವಾಗುತ್ತಲೇ ಬಂದಿದ್ದು ಯಾವುದೇ ರೀತಿಯ ಯೋಜನೆ ಇಲ್ಲದೇ ನಿರ್ಮಿಸಲಾಗಿರುವ ಪ್ಲಾಟ್ ಫಾರ್ಮ್, ಕಂಟ್ರೋಲ್ ರೂಂಗೆ ಸಾಗುವ ದಾರಿ ಗೊಂದಲಕ್ಕೆ ಕಾರಣರಾಗಿ ಸಿಬ್ಬಂದಿಗಳು ಸೇರಿದಂತೆ ಹಲವಾರು ಪ್ರಯಾಣಿಕರು ಆಗಾಗ ಎಡವಿ ಬಿದ್ದು ಗಾಯಗೊಳ್ಳುವ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತವೆ ಎನ್ನಲಾಗಿದೆ.
ಬಸ್ ನಿಲ್ದಾಣದ ವಿಚಾರಣಾ ಕೊಠಡಿ, ನಿಲ್ದಾಣ ನಿಯಂತ್ರಕರ ಕಚೇರಿಗೆ ಸಾಗಲು ಜಾರುಗುಂಡಿ ತರದಲ್ಲಿ ದಾರಿ ಇಡಲಾಗಿದ್ದು ಇದರಿಂದಾಗಿ ಬಹಳಷ್ಟು ಜನರು ಈಗಾಗಲೇ ಎಡವಿ ಬಿದ್ದಿರುವುದಾಗಿ ತಿಳಿದು ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!