ಹೊಸದಿಗಂತ ಡಿಜಿಟಲ್ ಡೆಸ್ಕ್
ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಕರೆತರುವ ಸಂಬಂಧ ಕೈಗೊಳ್ಳಬೇಕಾದ ಕ್ರಮಗಳ ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದಾರೆ.
ರಷ್ಯಾದ ಸೇನಾ ಕಾರ್ಯಾಚರಣೆಗಳ ನಡುವೆ ಉಕ್ರೇನ್‌ನಿಂದ ಭಾರತೀಯರ ವಾಪಸಾತಿಗಾಗಿ ಆಪರೇಷನ್ ಗಂಗಾ ಅಡಿಯಲ್ಲಿ ನಡೆಯುತ್ತಿರುವ ಪ್ರಯತ್ನಗಳ ಕುರಿತು ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಐದನೇಯ ಪರಿಶೀಲನಾ ಸಭೆ ಇದಾಗಿದೆ. ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ಸ್ಥಳಾಂತರಿಸುವ ಪ್ರಯತ್ನವನ್ನು ಕೇಂದ್ರವು ಚುರುಕುಗೊಳಿಸಿದೆ. ಭಾರತೀಯರನ್ನು ಉಕ್ರೇನ್‌ನ ಗಡಿಯಲ್ಲಿರುವ ನಾಲ್ಕು ನೆರೆಯ ದೇಶಗಳಿಗೆ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ನೋಡಿಕೊಳ್ಳಲು ಮತ್ತು ಆ ಬಗ್ಗೆ ಮೇಲ್ವಿಚಾರಣೆ ನಡೆಸಲು ಸರ್ಕಾರವು ವಿಶೇಷ ರಾಯಭಾರಿಗಳನ್ನು ನಿಯೋಜಿಸಿದೆ.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಹಂಗೇರಿಯಲ್ಲಿ, ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಸ್ಲೋವಾಕಿಯಾದಲ್ಲಿ, ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ರೊಮೇನಿಯಾದಲ್ಲಿ ಮತ್ತು ಪೋಲೆಂಡ್‌ನಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳು ಮತ್ತು ನಾಗರಿಕ ವಿಮಾನಯಾನ ರಾಜ್ಯ ಸಚಿವ ಜನರಲ್ ವಿಕೆ ಸಿಂಗ್ ಅವರು ಹಂಗೇರಿಯಲ್ಲಿ ಭಾರತೀಯರ ರಕ್ಷಣಾ ಕಾರ್ಯಗಳ ಮೇಲುಸ್ತುವಾರಿ ವಹಿಸಿದ್ದಾರೆ.
ಉಕ್ರೇನ್ ತೊರೆಯುವಂತೆ ಎಚ್ಚರಿಕೆ ನೀಡಿದಾಗಿನಿಂದ ಒಟ್ಟು ಹದಿನೆಂಟು ಸಾವಿರ ಭಾರತೀಯರು ಆ ದೇಶವನ್ನು ತೊರೆದಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಮಾಹಿತಿ ನೀಡಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ