ಮನ್‌ ಕಿ ಬಾತ್‌ ನಲ್ಲಿ ಕರ್ನಾಟಕದ ಎರಡು ʼವಿಶೇಷ ಸಂಗತಿಗಳʼ ಕುರಿತು ಪ್ರಶಂಸಿಸಿದ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಪ್ರಧಾನಿ ನರೇಂದ್ರ ಮೋದಿ ಇಂದು ನಡೆಸಿದ ಮನ್ ಕಿ ಬಾತ್ ನಲ್ಲಿ ಕರ್ನಾಟಕದ ಬಗ್ಗೆ ವಿಶೇಷ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಸ್ವಾತಂತ್ರ್ಯ ಅಮೃತ‌ ಮಹೋತ್ಸವ ಹಿನ್ನೆಲೆಯಲ್ಲಿ ಕನ್ನಡ ಸಂಸ್ಕ್ರತಿ ಇಲಾಖೆ ಆಯೋಜಿಸಿರುವ ʼಅಮೃತ ಭಾರತಿಗೆ ಕನ್ನಡದಾರತಿʼ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮುಕ್ತ ಕಂಠದಿಂದ ಪ್ರಶಂಸಿದ್ದಾರೆ.
ಪ್ರಧಾನಿ ಈ ಪರಿಕಲ್ಪನೆಯನ್ನು ವಿಶೇಷವಾಗಿ ಮೆಚ್ಚಿಕೊಂಡಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ರಾಜ್ಯದ 75 ಕಡೆಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಕರ್ನಾಟಕದ ಮಹಾನ್ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿರುವುದು ಮಾತ್ರವಲ್ಲದೆ ಸ್ಥಳೀಯ ಸಂಸ್ಕೃತಿ, ಕಲೆ, ಸಾಹಿತ್ಯಕ್ಕೂ ಒತ್ತು ನೀಡಿರುವುದು ಪ್ರಶಂಸನೀಯ ಎಂದು ಇಂದು ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.
ಕಾರ್ಯಕ್ರಮದ ಬಗ್ಗೆ:
ಸಚಿವ ಸುನೀಲ್ ಕುಮಾರ್ ಪರಿಕಲ್ಪನೆಯಲ್ಲಿ ಮೂಡಿ ಬಂದಿರುವ ʼಅಮೃತ ಭಾರತಿಗೆ ಕನ್ನಡದ ಆರತಿʼ ಕಾರ್ಯಕ್ರಮವು ರಾಜ್ಯದ ಸಾಂಸ್ಕ್ರತಿಕ ಹಾಗೂ ಸ್ವಾತಂತ್ರ್ಯ ಹೋರಾಟದ ಚರಿತ್ರೆಯನ್ನು ಜನರಿಗೆ ಮುಟ್ಟಿಸುತ್ತಿದೆ.
31 ಜಿಲ್ಲೆಗಳಲ್ಲಿ ಸಂಚಾರ ನಡೆಸುವ ಈ ರಥಯಾತ್ರೆ ಪ್ರಮುಖ ಸ್ಥಳಗಳಲ್ಲಿ ನಾಟಕ, ಮೆರವಣಿಗೆ, ಸ್ಥಬ್ಧಚಿತ್ರ ಮತ್ತು ಸಾಕ್ಷ್ಯಚಿತ್ರಗಳ ಮೆರವಣಿಗೆ ನಡೆಸಿ ಜನರಿಗೆ ಸ್ವಾತಂತ್ರ್ಯದ ಮಹತ್ವದ ಬಗ್ಗೆ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಮಹನೀಯರ ಬಗ್ಗೆ ತಿಳಿಸಿಕೊಡುತ್ತಿದೆ. ಆ.9 ರಂದು ಜಿಲ್ಲೆಗಳಿಂದ ಹೊರಟ ರಥಯಾತ್ರೆ ಬೆಂಗಳೂರು ನಗರವನ್ನು ತಲುಪಲಿದ್ದು ಆ.9 ರಿಂದ 11 ರವರೆಗೆ ನಗರದಲ್ಲಿ ಮಹೋತ್ಸವದ ಸಮಾರೋಪ ಸಮಾರಂಭ ನಡೆಯಲಿದೆ.

ಮಧುಕೇಶ್ವರ ಹೆಗಡೆಯವರ ಸಾಧನೆ ಬಗ್ಗೆ ಮೆಚ್ಚುಗೆ:
ದೇಶದಲ್ಲಿ ಯಶಸ್ಸಿನ ಹಾದಿಯಲ್ಲಿರುವ ರೈತರ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ರೈತ ಮಧುಕೇಶ್ವರ ಹೆಗಡೆ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಕೇಂದ್ರ ಸರ್ಕಾರದಿಂದ 50 ಪೆಟ್ಟಿಗೆ ಜೇನುನೊಣಗಳ ಸಾಕಾಣಿಕೆಗೆ ಸಬ್ಸಿಡಿ ಪಡೆದು ಇಂದು ಅವರು 800ಕ್ಕೂ ಹೆಚ್ಚು ಜೇನು ಪೆಟ್ಟಿಗೆಗಳನ್ನು ಹೊಂದಿದ್ದಾರೆ ಮತ್ತು ಅವುಗಳಿಂದ ಟನ್‌ಗಳಷ್ಟು ಜೇನುತುಪ್ಪ ಉತ್ಪಾದಿಸಿ ಮಾರಾಟ ಮಾಡುತ್ತಾರೆ. ಹಲವರು ಬಗೆಯ ಜೇನು ಸಾಕಾಣಿಕೆಯಿಂದ ಜೇನು ಸಾಕಣೆ ಉದ್ಯಮಕ್ಕೆ ಹೊಸ ಬಗೆಯ ನಾವೀನ್ಯತೆ ತಂದಿದ್ದಾರೆ. ಮಧುಕೇಶ್ವರ್ ಅವರ ಯಶಸ್ಸು ಅವರ ಹೆಸರನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತಿದೆ ಎಂದು ಶ್ಲಾಘಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!