ನಿಂತು ಸಾಗುವ ಸಮಯ ಮುಗಿದಿದೆ, ಇನ್ನೇನಿದ್ದರೂ ಅಭಿವೃದ್ದಿಯ ಹಾದಿಯಲ್ಲಿ ಮಿಂಚಿನ ವೇಗ ಮಾತ್ರ: ಪ್ರಧಾನಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಿಂತು ನಿಂತು ಸಾಗುವ ಸಮಯ ಮುಗಿದಿದೆ. ಇನ್ನೇನಿದ್ದರೂ ಭಾರತದ್ದು ಅಭಿವೃದ್ಧಿಯ ಹಾದಿಯಲ್ಲಿ ಮಿಂಚಿನ ದೌಡು ಮಾತ್ರ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಬೆಂಗಳೂರು ನಗರದಲ್ಲಿ ಇಂದು ಕೆಂಪೇಗೌಡರ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಪ್ರಧಾನಿ, ಕೆಂಪೇಗೌಡರ ಪ್ರತಿಮೆ ಅನಾವರಣ, ಜಲಾಭಿಷೇಕಕ್ಕೆ ಅವಕಾಶ ಸಿಕ್ಕಿದ್ದು ನನ್ನ ಪಾಲಿನ ಸೌಭಾಗ್ಯ. ಕರ್ನಾಟಕಕ್ಕೆ ಅಪ್ಪಟ ಸ್ವದೇಶಿ ನಿರ್ಮಿತ ವಂದೇ ಭಾರತ್ ರೈಲು ಸಿಕ್ಕಿದೆ. ಇದು ಸ್ಟಾರ್ಟ್ ಅಪ್‌ನ್ನು ಪ್ರತಿನಿಧಿಸಿದರೆ, ಭಾರತ್ ಗೌರವ್ ದರ್ಶನ ರೈಲು ಈ ದೇಶದ ಪ್ರಸಿದ್ಧ ಯಾತ್ರಾ ಸ್ಥಳಗಳನ್ನು ಕನ್ನಡಿಗರಿಗೆ ಪರಿಚಯಿಸುತ್ತದೆ ಎಂದರು.

ಇಂದು ಲೋಕಾರ್ಪಣೆಗೊಂಡಿರುವ ವಂದೇ ಭಾರತ್ ರೈಲು, ಭಾರತ್ ಗೌರವ್ ದರ್ಶನ್‌ಗಳು ಕೇವಲ ರೈಲುಗಳು ಮಾತ್ರ ಅಲ್ಲ, ಇವುಗಳು ಹೊಸ ಭಾರತದ ಹೆಗ್ಗುರುತು ಎಂದರು. ಇಂದು ನನ್ನ ಪಾಲಿಗೆ ಅತ್ಯಂತ ಸಂಸದ ದಿನ, ಕರ್ನಾಟಕದ ಇಬ್ಬರು ಮಹನೀಯರಾದ ಕನಕದಾಸರು, ಒನಕೆ ಓಬವ್ವ ಅವರ ಜನ್ಮ ಜಯಂತಿಯಂದು ವಿಶ್ವ ಮನ್ನಣೆ ಗಳಿಸಿರುವ ಬೆಂಗಳೂರಿನಲ್ಲಿ ನಾನು ಇರುವುದು ಅತ್ಯಂತ ಸಂತಸ ತಂದಿದೆ ಎಂದು ಮೋದಿ ಹೇಳಿದರು.

ಜಾಗತಿಕ ಮಟ್ಟದಲ್ಲಿ ಇಂದು ಭವ್ಯ ಭಾರತ ಎದ್ದು ನಿಲ್ಲುತ್ತಿರುವ ಪ್ರತೀ ಹಂತಗಳನ್ನು ಸವಿವರವಾಗಿ ವಿವರಿಸಿದ ಪ್ರಧಾನಿ, ಮುಂದಿನ ಹತ್ತು ವರ್ಷಗಳಲ್ಲಿ ಭಾರತೀಯ ರೈಲ್ವೆಯ ಚಿತ್ರಣ ಹೇಗೆ ಬದಲಾಗಲಿದೆ ಎಂಬ ಅಂಶವನ್ನು ಬಿಚ್ಚಿಟ್ಟರು. ಭವಿಷ್ಯದ ಭಾರತೀಯ ರೈಲ್ವೆ ಹೇಗಿರಲಿದೆ ಎಂಬುದಕ್ಕೆ ವಂದೇ ಭಾರತ್, ಗೌರವ್ ರೈಲುಗಳೇ ಸಾಕ್ಷಿ. ಇನ್ನಷ್ಟು ಅತ್ಯಾಧುನಿಕ ರೈಲುಗಳು, ವಿಸ್ಟಾ ಡೋಮ್‌ಗಳ ಸೇರ್ಪಡೆಯಾಗುವ ಮೂಲಕ ಭಾರತೀಯ ರೈಲ್ವೇ ಸಶಕ್ತವಾಗಲಿದೆ. ಇದಕ್ಕೆ ಪೂರಕವಾಗಿ ಅತ್ಯಾಧುನಿಕ, ವಿಶ್ವ ದರ್ಜೆಯ ರೈಲು ನಿಲ್ದಾಣಗಳನ್ನೂ ನಿರ್ಮಿಸಲಾಗುತ್ತಿದೆ ಎಂದರು.

ಇಂದು ಕರ್ನಾಟಕದಲ್ಲಿಯೂ ಬಹಳಷ್ಟು ಬದಲಾವಣೆಗಾಳಾಗುತ್ತಿದೆ. ಕೇಂದ್ರ ಹಾಗೂ ರಾಜ್ಯಗಳ ಡಬಲ್ ಇಂಜಿನ್ ಸರ್ಕಾರ ಕರ್ನಾಟಕವನ್ನು ಅಭಿವೃದ್ಧಿ ಪಥದ ಹೊಸ ದಿಶೆಯತ್ತ ಕೊಂಡೊಯ್ಯುತ್ತಿದೆ. ಅತ್ಯಾಧುನಿಕ ಏರ್‌ಪೋರ್ಟ್, ರೈಲು ನಿಲ್ದಾಣಗಳು, ಬ್ರಾಡ್‌ಗೇಜ್ ಉನ್ನತೀಕರಣಕ್ಕೆ ಸಿಕ್ಕಿರುವ ವೇಗವು ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯ ಒದಗಿಸಲಿದೆ. ಜೊತೆಗೆ ಸರಕು ಸಾಗಾಟ ಕ್ಷೇತ್ರದಲ್ಲಿ ಈ ಬೆಳವಣಿಗೆಗಳು ಹೊಸ ಸಂಚಲನ ಮೂಡಿಸಲಿದೆ ಎಂದರು. ಸ್ಟಾರ್ಟ್ ಅಪ್ ಕ್ಷೇತ್ರದಲ್ಲಿಯೂ ಕರ್ನಾಟಕ ದೇಶದಲ್ಲಿಯೇ ಹೊಸ ಗುರುತು ಮೂಡಿಸುತ್ತಿದೆ. ಇಲ್ಲಿನ ಯುವಕರ ಹುರುಪು ಎಷ್ಟಿದೆ ಎಂಬುದಕ್ಕೆ ಇಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯ, ಸಂಶೋಧನೆಗಳು, ವಿವಿಧ ಕ್ಷೇತ್ರಗಳಲ್ಲಿನ ಸಾಧನೆಗಳೇ ಸಾಕ್ಷಿ ನುಡಿಯುತ್ತಿದೆ ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು ಇಂದು ಹಳ್ಳಿ ಹಳ್ಳಿಗಳಿಗೂ ತಲುಪುತ್ತಿವೆ. ತಳಮಟ್ಟದಲ್ಲಿಯೂ ಭಾರತ ಅಭಿವೃದ್ಧಿಯ ಹಾದಿ ತುಳಿಯುತ್ತಿದೆ. ರಾಜ್ಯ ಸರ್ಕಾರವೂ ಇದಕ್ಕೆ ಪೂರಕವಾಗಿ ಶ್ರಮಿಸುತ್ತಿದೆ. ಭಾರತ ಇಂದು ಆಧುನಿಕ ಹಾಗೂ ಆಧ್ಯಾತ್ಮ ಎರಡೂ ಕ್ಷೇತ್ರದಲ್ಲಿ ಹೊಸ ಹೆಜ್ಜೆ ಇಡುತ್ತಿದೆ. ನಾಡಿನ ಮಹಾನ್ ಸಂತರು ಕಂಡ ಕನಸುಗಳು ಇಂದು ಒಂದೊಂದಾಗಿ ನನಸಾಗುತ್ತಿದೆ. ಸಾಮಾಜಿಕ ಸಮಾನತೆಯ ಕನಸುಗಳು ಕೂಡಾ ನನಸಾಗುತ್ತಿದೆ. ಕೆಂಪೇಗೌಡರ ಅಭೂತಪೂರ್ವ ಪ್ರತಿಮೆ ಅನಾವರಣ ಈ ಪೈಕಿ ಒಂದು ನಿದರ್ಶನ ಎಂದು ಪ್ರಧಾನಿ ಹೇಳಿದರು.

ಕುಲ ಕಲ ಕುಲವೆಂದು ಬಡಿದಾಡದಿರಿ ಎಂದು ದಾಸರ ಪದದ ಸಾಲುಗಳನ್ನು ಉದಾಹರಿಸಿದ ಪ್ರಧಾನಿ, ಕೆಂಪೇಗೌಡರು ಸ್ಥಾಪಿಸಿದ ಬೆಂಗಳೂರು ನಗರವನ್ನು ಅಭಿವೃದ್ದಿ ಪಡಿಸುವ ಮೂಲಕ ಅವರ ಹೆಸರನ್ನು ಇನ್ನಷ್ಟು ಪ್ರಸಿದ್ದಿಗೊಳಿಸೋಣ. ಸಿಲಿಕಾನ್ ಸಿಟಿಯಲ್ಲಿ ಕೆಂಪೇಗೌಡರ ಹೆಗ್ಗುರುತು ಅನಾವರಣಗೊಳಿಸಿದ್ದಾಗಿ ಪ್ರಧಾನಿ ಮೋದಿ ನಾಡಿಗೆ ಅಭಿನಂದನೆ ಸಲ್ಲಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!