ವಿಶ್ವದ ಅತಿದೊಡ್ಡ ನದಿ ಕ್ರೂಸ್‌ ‘ಗಂಗಾ ವಿಲಾಸ್’ಗೆ ಇಂದು ಪ್ರಧಾನಿ ಚಾಲನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರದಂದು ವಾರಣಾಸಿಯಲ್ಲಿ ವಿಶ್ವದ ಅತಿ ಉದ್ದದ ನದಿ ಕ್ರೂಸ್ ಎಂವಿ ಗಂಗಾ ವಿಲಾಸ್ ಅನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಫ್ಲ್ಯಾಗ್ ಆಫ್ ಮಾಡಲಿದ್ದಾರೆ. ಇದರ ಜೊತೆಗೆ ಇನ್ನೂ ಹಲವಾರು ಇತರ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ವಿಶ್ವದ ಅತಿ ಉದ್ದದ ರಿವರ್ ಕ್ರೂಸ್ ಎಂವಿ ಗಂಗಾ ವಿಲಾಸ್ ಭಾರತದಲ್ಲಿ ತಯಾರಾದ ಮೊದಲ ಕ್ರೂಸ್ ಹಡಗು. ಇದು ರಿವರ್ ಕ್ರೂಸ್ ಸೆಕ್ಟರ್‌ನಲ್ಲಿ ಸ್ವಾವಲಂಬಿ ಭಾರತದ (ಆತ್ಮನಿರ್ಭರ ಭಾರತ) ಸಂಕೇತವಾಗಿದೆ.

ಗಂಗಾ ವಿಲಾಸ್ ಉತ್ತರ ಪ್ರದೇಶದ ವಾರಣಾಸಿಯಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸುತ್ತದೆ ಮತ್ತು ಬಾಂಗ್ಲಾದೇಶದ ಮೂಲಕ ಅಸ್ಸಾಂನ ದಿಬ್ರುಗಢವನ್ನು ತಲುಪಲು 51 ದಿನಗಳಲಗಲಿ 3,200 ಕಿ.ಮೀ.ಕ್ರಮಿಸುತ್ತದೆ. ಫ್ಲಾಗ್‌ ಆಫ್ ಸಮಾರಂಭವು ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವ – ಸರ್ಬಾನಂದ ಸೋನೋವಾಲ್, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಇತರ ಸಚಿವರು ಮತ್ತು ವಿವಿಧ ಸಚಿವಾಲಯಗಳು ಮತ್ತು ಇಲಾಖೆಗಳ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಯಲಿದೆ.

ಜಲಮಾರ್ಗಗಳನ್ನು ರಾಷ್ಟ್ರದ ಅಭಿವೃದ್ಧಿಯ ಮೂಲವನ್ನಾಗಿ ಮಾಡುವ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ಪರಾಕಾಷ್ಠೆ ಈ ಕ್ರೂಸ್. ಜಲಮಾರ್ಗದ ಪರಿಸರ ವ್ಯವಸ್ಥೆಯ ಅಭಿವೃದ್ಧಿಗೆ ಅನುಕೂಲವಾಗುವಂತೆ ಭಾರತದಾದ್ಯಂತ ವಿವಿಧ ಸ್ಥಳಗಳಲ್ಲಿ 100 ಕ್ಕೂ ಹೆಚ್ಚು ಜಲಮಾರ್ಗಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ, ಇದು ಹೆಚ್ಚು ಕ್ರೂಸ್ ಪ್ರವಾಸೋದ್ಯಮಕ್ಕೆ ಕಾರಣವಾಗುತ್ತದೆ, ನದಿ ದಡದಲ್ಲಿ ಸ್ಥಳೀಯ ವ್ಯವಹಾರಗಳನ್ನು ಉತ್ತೇಜಿಸುತ್ತದೆ ಮತ್ತು ಸ್ಥಳೀಯ ಆರ್ಥಿಕತೆಯ ಬೆಳವಣಿಗೆಗೆ ಕಾರಣವಾಗುತ್ತದೆ.

ಭಾರತೀಯ ಮತ್ತು ಅಂತರಾಷ್ಟ್ರೀಯ ವಿನ್ಯಾಸವನ್ನು ಪಾಲಿಸಲು ನಿರ್ಮಿಸಲಾದ ಆಧುನಿಕ ಹಡಗು 62 ಮೀಟರ್ ಉದ್ದ ಮತ್ತು 12 ಮೀಟರ್ ಅಗಲವಿದೆ ಮತ್ತು 1.4 ಮೀಟರ್ ಡ್ರಾಫ್ಟ್ ಅಗತ್ಯವಿದೆ. 18 ಸೂಟ್‌ಗಳು ಮತ್ತು ಎಲ್ಲಾ ಸಂಬಂಧಿತ ಸೌಕರ್ಯಗಳೊಂದಿಗೆ, ನೌಕೆಯು ಒಟ್ಟು 36 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ.

ಪ್ರಧಾನ ಮಂತ್ರಿಯವರು “ರಿವರ್ ಕ್ರೂಸ್ ವಿಷನ್ ಡಾಕ್ಯುಮೆಂಟ್ 2047” ಡಾಕ್ಯುಮೆಂಟ್‌ ಬಿಡುಗಡೆ ಮಾಡಲಿದ್ದಾರೆ. ಇದು 2047 ರ ವೇಳೆಗೆ ರಿವರ್ ಕ್ರೂಸ್‌ನ ಪ್ರಗತಿ ಮತ್ತು ಬೆಳವಣಿಗೆಯ ದೃಷ್ಟಿಕೋನವನ್ನು ಒಳಗೊಂಡಿದೆ. ಈ ಸಂದರ್ಭದಲ್ಲಿ, ಪ್ರಧಾನಿಯವರು ಹಲ್ದಿಯಾ ಮಲ್ಟಿ-ಮೋಡಲ್ ಟರ್ಮಿನಲ್, ಉತ್ತರ ಪ್ರದೇಶದಲ್ಲಿ 4 ತೇಲುವ ಸಮುದಾಯ ಜೆಟ್ಟಿಗಳು, ಅಸ್ಸಾಂನ ಗುವಾಹಟಿಯಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!