ಗುಜರಾತ್‌ ಚುನಾವಣೆ: ಪ್ರಚಾರವನ್ನು ಮತ್ತಷ್ಟು ಚುರುಕುಗೊಳಿಸಿದ ಬಿಜೆಪಿ, ಇಂದಿನಿಂದ ಮೋದಿ ಪರ್ಯಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಗುಜರಾತ್ ವಿಧಾನಸಭೆ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆ, ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಗಮನವನ್ನು ಗುಜರಾತ್‌ನತ್ತ ಕೇಂದ್ರೀಕರಿಸಿದೆ. ಈ ನಿಟ್ಟಿನಲ್ಲಿ ಸ್ವತಃ ಅಖಾಡಕ್ಕಿಳಿದಿರುವ ಪ್ರಧಾನಿ ಮೋದಿ ಮುಂದಿನ ಹದಿನೈದು ದಿನಗಳಲ್ಲಿ ರಾಜ್ಯಾದ್ಯಂತ ಸುಮಾರು 25 ರ್ಯಾಲಿಗಳನ್ನು ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಶನಿವಾರ ಸಂಜೆಯಿಂದ ಪ್ರಧಾನಿ ಮೋದಿ ಅವರ ತವರು ರಾಜ್ಯದಲ್ಲಿ ಮೂರು ದಿನಗಳ ಕಾಲ ಪರ್ಯಟನೆ ಮಾಡಲಿದ್ದಾರೆ. ಇಂದು ಸಂಜೆಯೇ ಗುಜರಾತ್‌ಗೆ ಬಂದಿಳಿದ ಬಳಿಕ, ಪ್ರಧಾನಿ ವಲ್ಸಾದ್‌ನಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮರುದಿನ ಮೋದಿ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿ, ಸೌರಾಷ್ಟ್ರ ಪ್ರದೇಶದಲ್ಲಿ (ವೆರಾವಲ್, ಧೋರಾರ್ಜಿ, ಅಮ್ರೇಲಿ ಮತ್ತು ಬೊಟಾಡ್) ನಾಲ್ಕು ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. 3ನೇ ದಿನದಂದು, ಪ್ರಧಾನಿ ಮೋದಿ ಸುರೇಂದ್ರನಗರ, ಭರೂಚ್ ಮತ್ತು ನವಸಾರಿಯಲ್ಲಿ ಮೂರು ರ್ಯಾಲಿಗಳನ್ನು ನಡೆಸಲಿದ್ದಾರೆ.

ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ 40 ನಾಯಕರ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಪಕ್ಷವು ಈಗಾಗಲೇ ರಚಿಸಿದೆ. ಎಲ್ಲರೂ ಸೇರಿ ಕನಿಷ್ಠ 2-3 ದಿನಗಳ ಕಾಲ ಪ್ರಚಾರ ಮಾಡುವ ನಿರೀಕ್ಷೆಯಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಅವರು ರಾಜ್ಯದಲ್ಲಿ ಪ್ರಚಾರಕ್ಕೆ ಬರಲು ಅಭ್ಯರ್ಥಿಗಳಿಂದ ಭಾರಿ ಬೇಡಿಕೆಯಿದೆ.

ರಾಜ್ಯವು ಹಿಂದಿನಿಂದಲೂ ಬಿಜೆಪಿ ಭದ್ರಕೋಟೆಯಾಗಿದ್ದು, ಏಳನೇ ಅವಧಿಗೆ ಮತ್ತೆ ಅಧಿಕಾರಕ್ಕೆ ಬರುವ ಗುರಿಯನ್ನು ಹೊಂದಿದೆ.
182 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಗುಜರಾತ್ ರಾಜ್ಯದಲ್ಲಿ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮತಗಳ ಎಣಿಕೆ ಡಿಸೆಂಬರ್ 8 ರಂದು ನಡೆಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!