ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಬುಧವಾರ) ಹರಿಯಾಣ ಮತ್ತು ಪಂಜಾಬ್‌ಗೆ ಭೇಟಿ ನೀಡಲಿದ್ದು, ಎರಡು ಪ್ರಮುಖ ಆರೋಗ್ಯ ಕೇಂದ್ರಗಳನ್ನು ಉದ್ಘಾಟಿಸಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಹರಿಯಾಣದ ಫರಿದಾಬಾದ್‌ನಲ್ಲಿ ಅಮೃತ ಆಸ್ಪತ್ರೆಯನ್ನು ಉದ್ಘಾಟಿಸಲಿದ್ದು, ನಂತರ ಅವರು ಮೊಹಲ್‌ಗೆ ಪ್ರಯಾಣಿಸಲಿದ್ದಾರೆ. ಮೊಹಾಲಿಯ ಸಾಹಿಬ್ಜಾದಾ ಅಜಿತ್ ಸಿಂಗ್ ನಗರ ಜಿಲ್ಲೆಯ ಮುಲ್ಲನ್‌ಪುರದಲ್ಲಿ 02:15 ರ ಸುಮಾರಿಗೆ ‘ಹೋಮಿ ಭಾಭಾ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ’ವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ ಎಂದು ಪ್ರಧಾನ ಮಂತ್ರಿ ಕಾರ್ಯಾಲಯ ತಿಳಿಸಿದೆ.
ಫರಿದಾಬಾದ್‌ನಲ್ಲಿರುವ ಅಮೃತ ಆಸ್ಪತ್ರೆಯು ಆಧುನಿಕ ವೈದ್ಯಕೀಯ ಮೂಲಸೌಕರ್ಯಗಳ ಲಭ್ಯತೆಯಿಂದ ಕೂಡಿದೆ. ಮಾತಾ ಅಮೃತಾನಂದಮಯಿ ಮಠ ನಿರ್ವಹಿಸುತ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ 2600 ಹಾಸಿಗೆಗಳನ್ನು ಹೊಂದಿದ್ದು, ಸುಮಾರು 6000 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗಿದೆ. ಫರಿದಾಬಾದ್ ಮತ್ತು ಇಡೀ ನ್ಯೂ ಚಂಢಿಗಡ ಪ್ರದೇಶದ ಜನರಿಗೆ ಅತ್ಯಾಧುನಿಕ ಆರೋಗ್ಯ ಸೌಲಭ್ಯಗಳನ್ನು ಒದಗಿಸುತ್ತದೆ.
ಪಂಜಾಬ್ ಮತ್ತು ನೆರೆಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಿವಾಸಿಗಳಿಗೆ ವಿಶ್ವದರ್ಜೆಯ ಕ್ಯಾನ್ಸರ್ ಆರೈಕೆಯನ್ನು ಒದಗಿಸುವ ಪ್ರಯತ್ನದಲ್ಲಿ, ಪ್ರಧಾನಿಯವರು ಹೊಸ ಚಂಡೀಗಢದ ಸಾಹಿಬ್ಜಾದಾ ಅಜಿತ್ ಸಿಂಗ್ ನಗರ ಜಿಲ್ಲೆ (ಮೊಹಾಲಿ) ನಲ್ಲಿರುವ ಮುಲ್ಲನ್‌ಪುರದಲ್ಲಿ ‘ಹೋಮಿ ಭಾಭಾ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ’ವನ್ನು ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. 660 ಕೋಟಿಗೂ ಅಧಿಕ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಿಸಲಾಗಿದೆ. ಭಾರತ ಸರ್ಕಾರದ ಪರಮಾಣು ಶಕ್ತಿ ಇಲಾಖೆಯ ಅಡಿಯಲ್ಲಿರುವ ಅನುದಾನಿತ ಸಂಸ್ಥೆಯಾದ ಟಾಟಾ ಸ್ಮಾರಕ ಕೇಂದ್ರ ಈ ಆಸ್ಪತ್ರೆ ನಿರ್ಮಿಸಿದೆ.
ಕ್ಯಾನ್ಸರ್ ಆಸ್ಪತ್ರೆಯು 300-ಹಾಸಿಗೆಗಳನ್ನು ಹೊಂದಿದ್ದು, ಲಭ್ಯವಿರುವ ಎಲ್ಲಾ ಚಿಕಿತ್ಸಾ ವಿಧಾನಗಳಾದ ಶಸ್ತ್ರಚಿಕಿತ್ಸೆ, ರೇಡಿಯೊಥೆರಪಿ ಮತ್ತು ವೈದ್ಯಕೀಯ ಆನ್‌ಕೊಲಾಜಿ – ಕೀಮೋಥೆರಪಿ, ಇಮ್ಯುನೊಥೆರಪಿ ಮತ್ತು ಮೂಳೆ ಮಜ್ಜೆಯ ಕಸಿ ಎಲ್ಲಾ ರೀತಿಯ ಕ್ಯಾನ್ಸರ್‌ಗಳಿಗೆ ಚಿಕಿತ್ಸೆ ನೀಡಲು ಆಧುನಿಕ ಸೌಲಭ್ಯಗಳನ್ನು ಹೊಂದಿದೆ.