ವಿದೇಶಕ್ಕೆ ಪರಿಹಾರ ನೀಡುವ ಪ್ರಧಾನಿ ಮೋದಿಗೆ ನಮ್ಮ ರೈತರ ಕಷ್ಟ ಅರ್ಥವಾಗುತ್ತಿಲ್ಲ: ಸಿಎಂ ಸಿದ್ದರಾಮಯ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಅಮೆರಿಕನ್ ಡಾಲರ್‌ ಮೊತ್ತದ ಪರಿಹಾರವನ್ನು ನೀಡುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರ್ನಾಟಕ ಕಂಡರೆ ಯಾಕಿಷ್ಟು ಅಸಡ್ಡೆ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನೆ ಹಾಕಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು, ಬೇರೆ ದೇಶದವರಿಗೆ ಸಹಾಯ ಮಾಡಿ ಬೇಡ ಎನ್ನುವುದಿಲ್ಲ, ಆದರೆ ನಮ್ಮ ರೈತರ ಬಗ್ಗೆ ನಿರ್ಲಕ್ಷ್ಯ ಏಕೆ ಪ್ರಧಾನಿಯವರೇ ಎಂದು ಪ್ರಶ್ನಿಸಿದ್ದಾರೆ.

ಪ್ರಧಾನಿಯವರಿಗೆ ಟ್ವಿಟ್ ಟ್ಯಾಗ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿಯವರು ಇತರ ದೇಶಗಳಿಗೆ ಮಾನವೀಯ ಸಹಾಯ ಮಾಡಿರುವುದಕ್ಕೆ ನಮ್ಮ ವಿರೋಧವಿಲ್ಲ, ಅವರು ಈ ನೆರವಿನ ಮೂಲಕ ಭಾರತದ ರಾಜತಾಂತ್ರಿಕತೆ ಹಾಗೂ ಪರಂಪರೆಯನ್ನು ಎತ್ತಿ ಹಿಡಿಯುತ್ತಿದ್ದಾರೆ. ಇದು ಸ್ವಾತಂತ್ರ ಪೂರ್ವದಿಂದಲೂ ಬಂದಂತಹ ಹವ್ಯಾಸವಾಗಿದ್ದು, ಇದು ಅಂದಿನಿಂದ ಇಂದಿಗೂ ಮುಂದುವರೆದಿದೆ. ಆದರೆ ನಮ್ಮ ಪ್ರಶ್ನೆ ಏನು ಎಂದರೆ, ಏಕೆ ಪ್ರಧಾನಿ ಮೋದಿ ಅವರು ಇದೇ ರೀತಿಯ ಅನುಕಂಪವನ್ನು ನಮ್ಮ ರೈತರ ಮೇಲೆ ತೋರಿಸುತ್ತಿಲ್ಲ ಎಂಬುದು, ಅವರು ಬರದಿಂದಾಗಿ ತಾವು ಬೆಳೆದ ಬೆಳೆಯನ್ನೆಲ್ಲಾ ಕಳೆದುಕೊಂಡಿದ್ದಾರೆ. ಪರಿಹಾರ ಕೋರಿ ನಾವು ಬರೆದ ಪತ್ರಕ್ಕೆ ಕೇಂದ್ರದ ಬಿಜೆಪಿ ಸರ್ಕಾರದಿಂದ ಕನಿಷ್ಠ ಸ್ಪಂದನೆ ಪಡೆಯುವುದಕ್ಕೆ ಕನ್ನಡಿಗರು ಅರ್ಹರಲ್ಲವೇ? ಬರದ ಸಮಯದಲ್ಲಿ ಕೇಂದ್ರದ ಈ ಮೌನವೂ, ಎಲ್ಲಾ ರಾಜ್ಯಗಳು ಮತ್ತು ಆ ರಾಜ್ಯಗಳ ನಾಗರಿಕರನ್ನು ಸಮಾನವಾಗಿ ಪರಿಗಣಿಸುವ ರೀತಿಯ ಬಗ್ಗೆ ಚಿಂತೆ ಉಂಟು ಮಾಡುತ್ತಿದೆ.

ರಾಜ್ಯದ ರೈತರಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರ ಇನ್ನೂ ಪೂರ್ವಭಾವಿ ಸಭೆಯನ್ನು ಕರೆಯದ ಹಿನ್ನೆಲೆಯಲ್ಲಿ, ರಾಜ್ಯದಿಂದ ತುರ್ತು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಮೊದಲ ಹಂತದಲ್ಲಿ ಅರ್ಹ ರೈತರಿಗೆ ತಲಾ 2 ಸಾವಿರ ರೂ. ವರೆಗೆ ಬೆಳೆ ಪರಿಹಾರ ಧನ ಬಿಡುಗಡೆ ಮಾಡಲಾಗುತ್ತಿದೆ ಎಂದು ಸಿಎಂ ಉಲ್ಲೇಖಿಸಿದ್ದಾರೆ.ರಾಜ್ಯದ 48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಬೆಳೆ ನಷ್ಟ ಪರಿಹಾರಕ್ಕಾಗಿ ಕೇಂದ್ರಕ್ಕೆ ರೂ. 4,663 ಕೋಟಿ ನೀಡುವಂತೆ ಕೇಳಿದೆವು ಇದರ ಜೊತೆಗೆ ಕೇಂದ್ರ ಸಚಿವರಿಗೂ ಮನವಿ ಮಾಡಿದ್ದೇವೆ. ಕೇಂದ್ರ ಕೃಷಿ ಮತ್ತು ವಸತಿ ಸಚಿವರನ್ನು ನೇರವಾಗಿ ಭೇಟಿ ಮಾಡಲು ಅವಕಾಶ ನೀಡುವಂತೆಯೂ ಪತ್ರ ಬರೆದಿದ್ದೆ ಆದರೆ ಅವರು ನಮಗೆ ಇನ್ನೂ ಕಾಲಾವಕಾಶ ನೀಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಟ್ವಿಟ್ ಮಾಡಿದ್ದು, ಕೇಂದ್ರದ ನಿರ್ಲಕ್ಷ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇಂದ್ರಕ್ಕೆ ಪತ್ರ ಬರೆದು ಪರಿಹಾರಕ್ಕಾಗಿ 18,171 ಕೋಟಿ ರೂ. ಆರ್ಥಿಕ ನೆರವು ನೀಡುವಂತೆ ಮನವಿ ಮಾಡಲಾಗಿದೆ. ಕೇಂದ್ರವು ನಮ್ಮ ಪಾಲಿನ ತೆರಿಗೆ ಹಣವನ್ನು ಹಿಂದಿರುಗಿಸಿದರೂ, ಅದು ನಮ್ಮ ರೈತರ ಸಂಕಷ್ಟವನ್ನು ನಿವಾರಿಸಲು ಸಹಾಯ ಮಾಡುತ್ತಿಲ್ಲ ಎಂದು ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!