Friday, June 2, 2023

Latest Posts

50 ಲಕ್ಷ ಬಿಜೆಪಿ ಕಾರ್ಯಕರ್ತರ ಜತೆ ಸಂವಾದ ನಡೆಸಲಿದ್ದಾರೆ ಪ್ರಧಾನಿ ಮೋದಿ

ಹೊಸದಿಗಂತ ವರದಿ ಬೆಂಗಳೂರು:

ರಾಜ್ಯದಲ್ಲಿ ಚುನಾವಣಾ ಕಣ ರಂಗೇರಿದ್ದು, ಪ್ರಧಾನಿ ನರೇಂದ್ರ ಮೋದಿ ಏ.27ರಂದು ರಾಜ್ಯದ 50 ಲಕ್ಷ ಬಿಜೆಪಿ ಕಾರ್ಯಕರ್ತರೊಂದಿಗೆ ವಚ್ರ್ಯುವಲ್ ಮೂಲಕ ನೇರ ಸಂವಾದ ನಡೆಸಲಿದ್ದಾರೆ ಎಂದು ಬಿಜೆಪಿ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರು ಹಾಗೂ ಕೇಂದ್ರ ಸಚಿವೆ ಕು.ಶೋಭಾ ಕರಂದ್ಲಾಜೆ ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಮಾಧ್ಯಮ ಕೇಂದ್ರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 58,112 ಬೂತ್‌ಗಳಲ್ಲಿ, 1,680 ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ಈ ಸಂವಾದವನ್ನು ಹಮ್ಮಿಕೊಳ್ಳಲಾಗಿದೆ. ಬೂತ್‌ಗಳಲ್ಲಿ ಟಿ.ವಿಗಳನ್ನು, ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ಎಲ್‌ಇಡಿ ಸ್ಕ್ರೀನ್ ಅಳವಡಿಸಲಾಗುವುದು. ಈ ಸಂವಾದಕ್ಕಾಗಿ ಈಗಾಗಲೇ ೨೪ ಲಕ್ಷ ಕಾರ್ಯಕರ್ತರು ಮೋದಿ ಆಪ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.

ಕಾರ್ಯಕರ್ತರ ಪ್ರಶ್ನೆಗಳಿಗೆ ಉತ್ತರ:
ಬೂತ್ ಮಟ್ಟದಲ್ಲಿ 58 ಸಾವಿರ ಸ್ಥಳಗಳಲ್ಲಿ ಈ ಆಪ್‌ಗಳ ಮೂಲಕ ಕಾರ್ಯಕರ್ತರು ಸಂವಾದವನ್ನು ವೀಕ್ಷಿಸಲಿದ್ದಾರೆ. ಎಲ್‌ಇಡಿ ಸ್ಕ್ರೀನ್ ಇರುವ ಕಡೆ ಸುಮಾರು 1,000 ಕಾರ್ಯಕರ್ತರನ್ನು, ಬೂತ್‌ಗಳಲ್ಲಿ 200ಕಾರ್ಯಕರ್ತರನ್ನು ಈ ಕಾರ್ಯಕ್ರಮಕ್ಕಾಗಿ ಸಂಯೋಜಿಸಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 5,000 ನಮೋ ಆಪ್ ಡೌನ್ ಲೋಡ್ ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳ 15 ಕಡೆ ಪ್ರಧಾನಿಯವರು ಕಾರ್ಯಕರ್ತರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಹೊಸ ತಂತ್ರಜ್ಞಾನ ಬಳಸಿಕೊಂಡು ಇದೇ ಮೊದಲ ಬಾರಿ ಬೃಹತ್ ಪ್ರಮಾಣದಲ್ಲಿ ನೇರ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

ಶ್ರಮದ ಮೇಲೆ ಗೆಲ್ಲುವ ಪಕ್ಷ:
ಬಿಜೆಪಿ ಮಾತ್ರ ಗರಿಷ್ಠ ಕಾರ್ಯಕರ್ತರನ್ನು ಹೊಂದಿದೆ. ಕಾರ್ಯಕರ್ತರ ಆಧಾರಿತ ಬಿಜೆಪಿ, ಈ ಶ್ರಮದ ಮೇಲೆ ಗೆಲ್ಲುವ ಪಕ್ಷವಾಗಿದೆ. ನರೇಂದ್ರ ಮೋದಿಯವರು ರಾಜ್ಯದಲ್ಲಿ ಪೂರ್ಣ ಬಹುಮತದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಅಪೇಕ್ಷೆ ಹೊಂದಿದ್ದಾರೆ. ಕಾರ್ಯಕರ್ತರ ಶ್ರಮಕ್ಕೆ ನರೇಂದ್ರಮೋದಿಯವರು ಬೆನ್ನೆಲುಬಾಗಿರಲು ಸಿದ್ಧರಾಗಿದ್ದಾರೆ. ಕಡಿಮೆ ಅವಧಿಯಲ್ಲಿ ಅಭ್ಯರ್ಥಿಗಳು ಎಲ್ಲ ಮನೆಗಳಿಗೆ ಭೇಟಿ ನೀಡಲು ಕಷ್ಟ ಸಾಧ್ಯವಾದ್ದರಿಂದ ಕಾರ್ಯಕರ್ತರು ಒಂದೊಂದು ಮನೆಯನ್ನು ಎರಡರಿಂದ ಮೂರು ಬಾರಿ ಸಂಪರ್ಕಿಸಿ, ಡಬಲ್ ಇಂಜಿನ್ ಸರ್ಕಾರದ ಸಾಧನೆ ಮತ್ತು ಯೋಜನೆಗಳನ್ನು ತಿಳಿಸಲಿದ್ದಾರೆ ಎಂದು ಕು.ಶೋಭಾ ಕರಂದ್ಲಾಜೆ ವಿವರಿಸಿದರು.

ವಿಶೇಷ ಮಹಾ ಪ್ರಚಾರ ಅಭಿಯಾನ ಆರಂಭ:
ಇಂದಿನಿಂದ ಎರಡು ದಿನದ ‘ವಿಶೇಷ ಮಹಾ ಪ್ರಚಾರ ಅಭಿಯಾನ’ ಆರಂಭವಾಗಿದೆ. ಎಲ್ಲ 224 ಕ್ಷೇತ್ರಗಳಲ್ಲಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಬೆಳಿಗ್ಗೆ ಮಠ-ಮಂದಿಗಳಿಗೆ ಭೇಟಿ ನೀಡಿ ಆ ನಂತರ ರಾಷ್ಟ್ರ ನಾಯಕರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದ್ದಾರೆ. ಮನೆ-ಮನೆಗೂ ಭೇಟಿ ನೀಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಧನೆಗಳು ಮತ್ತು ಯೋಜನೆಗಳ ಬಗ್ಗೆ ತಿಳಿಸುತ್ತಿದ್ದಾರೆ. ಅಭಿಯಾನದ ಭಾಗವಾಗಿ ಸುದ್ದಿಗೋಷ್ಠಿಗಳು, ವಿವಿಧ ಸಮುದಾಯಗಳ ಮುಖಂಡರೊಂದಿಗೆ ಸಂವಾದ, ರೋಡ್‌ಶೋಗಳು, ಸಾರ್ವಜನಿಕ ಸಭೆಗಳನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು.

ನಿರ್ಧಾರಕ್ಕೆ ಬಿಜೆಪಿ ಬದ್ಧ: 
ರಾಜ್ಯಸರ್ಕಾರ ಮುಸ್ಲೀಮರಿಗೆ ನೀಡಿರುವ ಶೇ 4ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿರುವ ರಾಜ್ಯ ಸರ್ಕಾರದ ಆದೇಶಕ್ಕೆ ಸುಪ್ರೀಂಕೋರ್ಟ್ ತಾತ್ಕಾಲಿಕ ತಡೆ ನೀಡಿರುವ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಸಂವಿಧಾನದ ಪ್ರಕಾರ ಧರ್ಮದ ಆಧಾರದಡಿ ಮೀಸಲಾತಿ ಒದಗಿಸಲು ಅವಕಾಶವಿಲ್ಲ. ಮುಸ್ಲಿಮರನ್ನು ಓಲೈಕೆ ಮಾಡಲು ಹಿಂದಿನ ಸರ್ಕಾರ ಮೀಸಲಾತಿ ಒದಗಿಸಿತ್ತು. ಮೀಸಲಾತಿ ರದ್ದು ಗೊಳಿಸಿದ ನಿರ್ಧಾರಕ್ಕೆ ಬಿಜೆಪಿ ಈಗಲೂ ಬದ್ಧವಾಗಿದೆ. ಮುಸ್ಲಿಮರಿಗೆ ಮೀಸಲಾತಿ ಹೆಚ್ಚಿಸುವುದರಿಂದ ಪರಿಶಿಷ್ಟ ಜಾತಿ-ಪಂಗಡ ಮತ್ತು ಇತರ ವರ್ಗಗಳಿಗೆ ಅನ್ಯಾಯವಾಗಲಿದೆ. ಮೀಸಲಾತಿ ರದ್ದು ಆದೇಶ ತಡೆ ವಿಚಾರವಾಗಿ ರಾಜ್ಯ ಸರ್ಕಾರ ಮತ್ತೊಮ್ಮೆ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಲಿದೆ ಎಂದು ಹೇಳಿದರು.

ಜನರು ಕಾಂಗ್ರೆಸ್ ತಿರಸ್ಕರಿಸಲಿದ್ದಾರೆ:
ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ನವ ಕರ್ನಾಟಕ ನಿರ್ಮಾಣದ ಸಂಕಲ್ಪವನ್ನು ಹೊಂದಿದ್ದಾರೆ. ಆದರೆ ಕಾಂಗ್ರೆಸ್ ಸುಳ್ಳು, ಒಡೆದಾಳುವ, ದಾರಿತಪ್ಪಿಸುವ, ಒಂದು ಸಮುದಾಯವನ್ನು ಓಲೈಸುವ ಕೆಲಸವನ್ನು ಮಾಡುತ್ತಿದೆ. ಜನರು ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣ ತಿರಸ್ಕರಿಸಲಿದ್ದಾರೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿನಯ್ ಬಿದರೆ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!