Wednesday, October 5, 2022

Latest Posts

ಪ್ರಧಾನಿ ಮೋದಿ ಮಂಗಳೂರು ಭೇಟಿ ಕಾರ್ಯಕ್ರಮಗಳ ಸಮಯ ಬದಲಾವಣೆ

ಹೊಸದಿಗಂತ ವರದಿ, ಮಂಗಳೂರು:
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಂಗಳೂರು ಕಾರ್ಯಕ್ರಮದ ಸಮಯ ಬದಲಾವಣೆ ಆಗಿದ್ದು, ಸೆ.2ರಂದು ಮಧ್ಯಾಹ್ನ 1ಕ್ಕೆ ಪ್ರಧಾನಿ ಮಂಗಳೂರಿಗೆ ಆಗಮಿಸುವರು. ಕಾರ್ಯಕರ್ತರು ಬೆಳಗ್ಗೆ 11.30ರೊಳಗೆ ಸಮಾವೇಶ ನಡೆಯುವ ಕೂಳೂರಿನ ಗೋಲ್ಡ್‌ಫಿಂಚ್ ಮೈದಾನಕ್ಕೆ ತಲುಪಬೇಕು. ಸಮಾವೇಷದಲ್ಲಿ ಒಟ್ಟು 2 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದಿರೆ ತಿಳಿಸಿದರು.
ಮಧ್ಯಾಹ್ನ 1.15ಕ್ಕೆ ವೇದಿಕೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಮಧ್ಯಾಹ್ನ 3ರವರೆಗೆ ಕಾರ್ಯಕ್ರಮ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿ, ಶೋಭಾ ಕರಂದ್ಲಾಜೆ, ಸರ್ಬಾನಂದ ಸೋನೆವಾಲ್, ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು, ರಾಜ್ಯದ ಸಚಿವರಾದ ಎಸ್. ಅಂಗಾರ, ಕೋಟ ಶ್ರೀನಿವಾಸ ಪೂಜಾರಿ, ವಿ.ಸುನಿಲ್‌ಕುಮಾರ್, ದ.ಕ. ಜಿಲ್ಲೆಯ ಶಾಸಕರು ಭಾಗವಹಿಸುವರು. ಪ್ರಧಾನಿ ಸಮಾವೇಶದ ಶೇ.80 ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲು, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್‌ಕುಮಾರ್, ಜಿಲ್ಲೆಯ ಶಾಸಕರ ನೇತೃತ್ವದಲ್ಲಿ ಸಮಾವೇಶದ ಸಿದ್ಧತೆಗಳು ನಡೆಯುತ್ತಿವೆ. ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಲ್ಲೂ ಬೂತ್ ಮಟ್ಟದಲ್ಲಿ ಪೂರ್ವಭಾವಿ ಸಭೆ ನಡೆಸಲಾಗಿದೆ. ಕಾರ್ಯಕರ್ತರನ್ನು ಕರೆತರಲು ಇದುವರೆಗೆ 1461 ಬಸ್, 200 ಟೆಂಪೊ ಬುಕ್ಕಿಂಗ್ ಮಾಡಲಾಗಿದೆ. ಒಟ್ಟು 1 ಲಕ್ಷ ಮಂದಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಉಡುಪಿಯಿಂದ 10 ಸಾವಿರ ಮಂದಿ ಭಾಗವಹಿಸುವರು. ಕೇಂದ್ರ ಸರಕಾರದ ಯೋಜನೆಗಳ 70 ಸಾವಿರ ಮಂದಿ ಫಲಾನುಭವಿಗಳನ್ನು ಜಿಲ್ಲಾಡಳಿತ ಕರೆತರಲಿದೆ. ಆಗಮಿಸುವ ಎಲ್ಲರಿಗೂ ಜಿಲ್ಲಾಡಳಿತದಿಂದ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮ ಮುಗಿದ ಬಳಿಕ ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಭಾಗದ ಕಾರ್ಯಕರ್ತರಿಗೆ ಪಕ್ಷದ ವತಿಯಿಂದ ಆಹಾರದ ವ್ಯವಸ್ಥೆ ಮಾಡಲಾಗುವುದು ಎಂದು ಸುದರ್ಶನ ಎಂ. ವಿವರಿಸಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕಸ್ತೂರಿ ಪಂಜ, ಸುಧೀರ್ ಶೆಟ್ಟಿ ಕಣ್ಣೂರು, ಜಿಲ್ಲಾ ವಕ್ತಾರರಾದ ರವಿಶಂಕರ ಮಿಜಾರ್, ಜಗದೀಶ ಶೇಣವ, ಜಿಲ್ಲಾ ಮಾಧ್ಯಮ ಸಂಯೋಜಕ ಸಂದೇಶ್ ಶೆಟ್ಟಿ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!