ಸರ್ಕಾರಿ ಸಾಲ ಯೋಜನೆಗಳಿಗೊಂದು ಏಕೀಕೃತ ಜಾಲತಾಣ- ಪ್ರಧಾನಿ ಮೋದಿಯವರಿಂದ ಚಾಲನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹಣಕಾಸು ಸಚಿವಾಲಯ ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಆಯೋಜಿಸಿದ ʻಐಕಾನಿಕ್‌ ವೀಕ್‌ ಆಫ್‌ ಸೆಲಬ್ರೇಷನ್‌ʼ ಕಾರ್ಯಕ್ರಮದಲ್ಲಿ ಪ್ರಧಾನಿಯವರು ಆಜಾದಿ ಕಾ ಅಮೃತ್ ಮಹೋತ್ಸವಕ್ಕೆ ಮೀಸಲಾದ 1, 2, 5, 10, ಮತ್ತು 20ರೂಪಾಯಿ ಹೊಸ ನಾಣ್ಯಗಳನ್ನು ಬಿಡುಗಡೆ ಮಾಡಿದ್ದಾರೆ. ಜೊತೆಗೆ ಯಾವೆಲ್ಲ ಸರ್ಕಾರಿ ಯೋಜನೆಗಳಿಗೆ ಸಾಲ ಸೌಲಭ್ಯಗಳಿವೆಯೋ ಅವೆಲ್ಲವನ್ನು ಒಂದೆಡೆ ತರುವ ರಾಷ್ಟ್ರೀಯ ಪೋರ್ಟಲ್‌ ʻಜನ್‌ ಸಮರ್ಥ್ʼ ಅನ್ನು ಪ್ರಧಾನಿ ನರೇಂದ್ರ ಮೋದಿಯವರು ದೆಹಲಿಯ ವಿಜ್ಞಾನ ಭವನಲ್ಲಿ ಉದ್ಘಾಟಿಸಿದ್ದಾರೆ.

ಆಜಾದಿ ಕಾ ಅಮೃತ್‌ ಮಹೋತ್ಸವದ ಅಂಗವಾಗಿ ಜೂನ್‌ 6ರಿಂದ 11ರವರೆಗೆ ಈ ಐಕಾನಿಕ್‌ ವೀಕ್‌ ಸೆಲಬ್ರೇಷನ್‌ ನಡೆಯಲಿದೆ. ಒನ್‌ ಸ್ಟಾಪ್‌ ಡಿಜಿಟಲ್‌ ಪೋರ್ಟಲ್‌ ಮೂಲಕ ಫಲಾನುಭವಿಗಳು ನೇರವಾಗಿ ಸಾಲದಾತರನ್ನು ಸಂಪರ್ಕಿಸುವ ವ್ಯವಸ್ಥೆಯಾಗಿದೆ. ಕ್ರೆಡಿಟ್‌ ಲಿಂಕ್‌ ಸರ್ಕಾರಿ ಯೋಜನೆಗಳನ್ನು ಒಂದೇ ವೇದಿಕೆಯಲ್ಲಿ ಲಿಂಕ್‌ ಮಾಡುವ ಪೋರ್ಟಲ್‌ ಇದಾಗಿದ್ದು, ಅತ್ಯಂತ ಸುಲಭವಾಗಿ ಡಿಜಿಟಲ್‌ ಪ್ರಕ್ರಿಯೆಗಳ ಮೂಲಕ ಸರ್ಕಾರಿ ಪ್ರಯೋಜನಗಳನ್ನು ನೀಡುವುದು ಎಂದು ಪಿಎಂಒ ತಿಳಿಸಿದೆ. ಶಿಕ್ಷಣ ಸಾಲ, ಕೃಷಿ, ಮೂಲ ಸೌಕರ್ಯ, ಜೀವನೋಪಾಯ ಸಾಲ, ವ್ಯಾಪಾರ-ವ್ಯವಹಾರ ಸೇರಿದಂತೆ ಹಲವು ಯೋಜನೆಗಳನ್ನು ಈ ಪೋರ್ಟಲ್‌ನಲ್ಲಿ ಸೇರಿಸಲಾಗಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಡಿಜಿಟಲ್‌ ಅನುಮೋದನೆಯನ್ನು ಪಡೆಯಬಹುದು.

ಈ ಸಂದರ್ಭದಲ್ಲಿ ಮಾತನಾಡಿದ ಮೋದಿ, ಆಜಾದಿ ಕಾ ಅಮೃತ್ ಮಹೋತ್ಸವ ಕೇವಲ 75 ವರ್ಷಗಳ ಆಚರಣೆಯಲ್ಲ. ಭಾರತದ ಸ್ವಾತಂತ್ರ್ಯದ ನಾಯಕರು ಕಂಡ ಸ್ವತಂತ್ರ ಭಾರತದ ಕನಸುಗಳಿಗೆ ಹೊಸ ಚೈತನ್ಯವನ್ನು ತುಂಬಲು ಮತ್ತು ಹೊಸ ನಿರ್ಣಯಗಳೊಂದಿಗೆ ಮುಂದುವರಿಯಲು ಇದು ಒಂದು ಕ್ಷಣವಾಗಿದೆ ಎಂದು ಪ್ರಧಾನಿ ಮೋದಿಯವರು ಹೇಳಿದರು. ಕಳೆದ 8 ವರ್ಷಗಳಲ್ಲಿ, ಭಾರತವು ಪ್ರತಿದಿನ ಹೊಸ ಹೆಜ್ಜೆಗಳನ್ನು ಇಟ್ಟಿದೆ ಮತ್ತು ಹೊಸ ಕೆಲಸವನ್ನು ಮಾಡಲು ಪ್ರಯತ್ನಿಸುತ್ತಿದೆ. ಈ ಸಮಯದಲ್ಲಿ ರಾಷ್ಟ್ರದಲ್ಲಿ ಹೆಚ್ಚಿದ ಸಾರ್ವಜನಿಕ ಭಾಗವಹಿಸುವಿಕೆ ರಾಷ್ಟ್ರದ ಅಭಿವೃದ್ಧಿಯನ್ನು ವೇಗಗೊಳಿಸಿದೆ. ಜೊತೆಗೆ ಬಡವರಿಗೆ ಅಧಿಕಾರ ನೀಡಿದೆ. ಸ್ವಚ್ಛ ಭಾರತ ಅಭಿಯಾನ ಬಡವರಿಗೆ ಘನತೆಯ ಜೀವನ ನಡೆಸಲು ಅವಕಾಶ ನೀಡಿದೆ ಎಂದು ವಿಶ್ಲೇಷಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!