ಹೊಸದಿಗಂತ ವರದಿ,
ನಾನು ಆರ್ಥಿಕತೆ ಬಗ್ಗೆ ಮಾತನಾಡಿರುವುದು ತಪ್ಪು, ಸರಿ ಎಂದು ಹೇಳಲು ಸಂಸದ ಪ್ರತಾಪ್ ಸಿಂಹ ಆರ್ಥಿಕ ತಜ್ಞನಾ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಆರ್ಥಿಕ ತಜ್ಞರೇ ಎಂದು ವಿಪಕ್ಷ ನಾಯಕರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.
ಸೋಮವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಓದಿದ ಲಾ ಬಗ್ಗೆ ಪ್ರಶ್ನಿಸಲು ಪ್ರತಾಪ್ ಸಿಂಹ, ಮೋದಿ ಇಬ್ಬರೂ ವಕೀಲರಾ.? ಮೋದಿ, ಪ್ರತಾಪ್ ಸಿಂಹನಿಗೆ ಆರ್ಥಿಕತೆ ಬಗ್ಗೆ ಏನು ಗೊತ್ತಿದೆ. ಸುಮ್ಮನೆ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ಟಾಂಗ್ ನೀಡಿದರು.
ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಗೂ ಪ್ರತಾಪ್ ಸಿಂಹಗೂ ಏನು ಸಂಬಂಧ. ಪ್ರತಾಪ್ ಸಿಂಹ ಕ್ಷೇತ್ರ ವ್ಯಾಪ್ತಿಯಲ್ಲಿ ಎಷ್ಟು ಕಿಮೀ ಹೆದ್ದಾರಿ ಬರುತ್ತೆ. ನಾನು ಮೈಸೂರಿಗೆ ಏನು ಮಾಡಿದ್ದೇನೆ, ಅವ್ರು ಏನು ಮಾಡಿದ್ದಾರೆ, ಚರ್ಚೆಗೆ ಬರಲಿ. ಚರ್ಚೆಗೆ ನಾನು ಬರುವುದಿಲ್ಲ ನಮ್ಮ ಪಕ್ಷದ ವಕ್ತಾರರನ್ನ ಕಳುಹಿಸುತ್ತೇನೆ. ದಾಖಲೆ ಸಮೇತ ಬಂದು ಚರ್ಚೆ ಮಾಡಲಿ ಎಂದು ಸವಾಲು ಹಾಕಿದರು.
ಮೈಸೂರು ವಿಮಾನ ಉನ್ನತೀಕರಣ ಯಾರ ಕಾಲದಲ್ಲಿ ಆಗಿದ್ದು ಎಂಬುದು ಪ್ರತಾಪ್ ಆ ಸಿಂಹನಿಗೆ ಏನು ಗೊತ್ತು ಎಂದು ಸಿದ್ದರಾಮಯ್ಯ ಕಿಡಿಕಾರಿದರು.