`ಪ್ರತಿಯೊಬ್ಬ ಕನ್ನಡಿಗನ ಕನಸು ನನ್ನದು’: ಚುನಾವಣೆಗೂ ಮುನ್ನ ಪ್ರಧಾನಿ ಮೋದಿ ವಿಡಿಯೋ ಸಂದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕರ್ನಾಟಕದಲ್ಲಿ ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ಹೈವೋಲ್ಟೇಜ್ ಪ್ರಚಾರ ಕೊನೆಗೊಂಡ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ರಾಜ್ಯದ ಜನತೆಗೆ ಅವರ ಕನಸುಗಳನ್ನು ತಮ್ಮ ಕನಸು ಎಂಬ ಭರವಸೆ ನೀಡಿದರು.
ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಪ್ರಧಾನಿ ಮೋದಿ, “ಪ್ರತಿಯೊಬ್ಬ ಕನ್ನಡಿಗನ ಕನಸು ನನ್ನ ಸ್ವಂತ ಕನಸು, ನಿಮ್ಮ ನಿರ್ಣಯವೇ ನನ್ನ ನಿರ್ಣಯ” ಎಂದು ಹೇಳಿದ್ದಾರೆ.

ದೇಶದ ಆರ್ಥಿಕತೆಯಲ್ಲಿ ಕರ್ನಾಟಕದ ಮಹತ್ವದ ಪಾತ್ರವನ್ನು ಎತ್ತಿ ಹಿಡಿದ ಪ್ರಧಾನಿ, “ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಶೀಘ್ರದಲ್ಲೇ ಭಾರತವು ವಿಶ್ವದ ಅಗ್ರ ಮೂರು ಆರ್ಥಿಕತೆಗಳಲ್ಲಿ ಒಂದಾಗಬೇಕು. ಅದಕ್ಕಾಗಿ ಕರ್ನಾಟಕದ ಆರ್ಥಿಕತೆಯು ಅಭಿವೃದ್ಧಿ ಹೊಂದಿದಾಗ ಮಾತ್ರ ಇದು ಸಾಧ್ಯ” ಎಂದರು.

ಕರ್ನಾಟಕದಲ್ಲಿ ಡಬಲ್ ಇಂಜಿನ್ ಸರ್ಕಾರದ 3.5 ವರ್ಷಗಳ ಅವಧಿಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ಬಿಜೆಪಿ ಸರ್ಕಾರದ ನಿರ್ಣಾಯಕ, ಕೇಂದ್ರೀಕೃತ ಮತ್ತು ಭವಿಷ್ಯದ ವಿಧಾನವು ಕರ್ನಾಟಕದ ಆರ್ಥಿಕತೆಗೆ ಗಣನೀಯ ಕೊಡುಗೆ ನೀಡುತ್ತಿದೆ. ಕೋವಿಡ್ ಸಂದರ್ಭದಲ್ಲಿಯೂ ಕರ್ನಾಟಕ ಬಿಜೆಪಿಯ ನೇತೃತ್ವದಲ್ಲಿ ವಾರ್ಷಿಕ 90 ಸಾವಿರ ಕೋಟಿ ವಿದೇಶಿ ಬಂಡವಾಳ ಹೂಡಿಕೆಯಾಗಿದೆ. ಆದರೆ, ಹಿಂದಿನ ಸರ್ಕಾರಗಳ ಅವಧಿಯಲ್ಲಿ ಕರ್ನಾಟಕವು ವಾರ್ಷಿಕ ಸುಮಾರು 30 ಸಾವಿರ ಕೋಟಿ ವಿದೇಶಿ ಹೂಡಿಕೆಯನ್ನು ಕಂಡಿದೆ. ಇದು ಯುವ ಜನತೆಗೆ ಬಿಜೆಪಿಯ ಬದ್ಧತೆಯಾಗಿದೆ ಎಂದರು.

ರಾಜ್ಯದ ಅಭಿವೃದ್ಧಿಗೆ ಪಕ್ಷದ ಬದ್ಧತೆಯನ್ನು ಪುನರುಚ್ಚರಿಸಿದ ಪ್ರಧಾನಿ ಮೋದಿ, ನಗರಗಳಲ್ಲಿ ಮೂಲಸೌಕರ್ಯಗಳನ್ನು ಸುಧಾರಿಸಲು, ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಲು, ಹಳ್ಳಿಗಳು ಮತ್ತು ನಗರಗಳಲ್ಲಿ ಜೀವನದ ಗುಣಮಟ್ಟವನ್ನು ಸುಧಾರಿಸಲು ಮತ್ತು ಹೊಸ ಅವಕಾಶಗಳನ್ನು ಖಚಿತಪಡಿಸಿಕೊಳ್ಳಲು ಬಿಜೆಪಿ ಸರ್ಕಾರವು ಅತ್ಯಂತ ನಿಷ್ಠೆಯಿಂದ ಕೆಲಸ ಮಾಡುತ್ತದೆ.

ಬಂಡವಾಳ ಹೂಡಿಕೆ, ಕೈಗಾರಿಕೆ ಮತ್ತು ಆವಿಷ್ಕಾರದಲ್ಲಿ ಕರ್ನಾಟಕ ಪ್ರಥಮ ಸ್ಥಾನ ಪಡೆಯಬೇಕು. ಶಿಕ್ಷಣ, ಉದ್ಯೋಗ, ಉದ್ಯಮಶೀಲತೆ, ಕೃಷಿಯಲ್ಲಿಯೂ ಕರ್ನಾಟಕವನ್ನು ನಂಬರ್ ಒನ್ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ. ಕರ್ನಾಟಕದ ಪರಂಪರೆ ಮತ್ತು ಸಾಂಸ್ಕೃತಿಕ ಸಾಮರ್ಥ್ಯ ಪೂಜ್ಯನೀಯವಾದುದು ಎಂದರು.

ಕರ್ನಾಟಕವನ್ನು ನಂಬರ್ ಒನ್ ಮಾಡಲು, ಮೇ 10 ರಂದು ನಿಮ್ಮೆಲ್ಲರನ್ನೂ ಜವಾಬ್ದಾರಿಯುತ ನಾಗರಿಕರಾಗಿ ಮತ ಚಲಾಯಿಸುವಂತೆ ಪ್ರಧಾನಿ ಮೋದಿ ವಿನಂತಿಸಿದರು.

ಕರ್ನಾಟಕ ಚುನಾವಣಾ ಪ್ರಚಾರ ಸೋಮವಾರ ಸಂಜೆ ಅಂತ್ಯಗೊಂಡಿದೆ. ಮೇ 10ರಂದು ಮತದಾನ ನಡೆಯಲಿದೆ. ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ. ಪ್ರಚಾರ ಮುಗಿದ ಕೆಲವೇ ಗಂಟೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ತಡರಾತ್ರಿ ಕರ್ನಾಟಕದ ಜನತೆಗೆ ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿದರು. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಬಿಜೆಪಿಯ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!