ಕರ್ನಾಟಕ ನಂ.1 ಎಟಿಎಂ ಮಾಡಲು ಕೈ ಹೈಕಮಾಂಡ್ ಹುನ್ನಾರ: ಮೋದಿ ಟೀಕಾ ಪ್ರಹಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:‌

ದೆಹಲಿಯಲ್ಲಿರುವ ಹೈ ಕಮಾಂಡ್‌ಗೆ ಕರ್ನಾಟಕವನ್ನು ನಂ. 1 ಎಟಿಎಂ ಮಾಡಲು ಕಾಂಗ್ರೆಸ್​​ ಹುನ್ನಾರ ನಡೆಸುತ್ತಿದೆ. ಶೇ. 85 ರಷ್ಟು ಕಮಿಷನ್​ ತಿನ್ನುವ ಕಾಂಗ್ರೆಸ್​ ರಾಜ್ಯವನ್ನು ಸರ್ವನಾಶ ಮಾಡುತ್ತದೆ. ಇದಕ್ಕಾಗಿ ಕಾಂಗ್ರೆಸ್​ನಿಂದ ಜನ ಬಹಳ ಎಚ್ಚರಿಕೆಯಿಂದ ಇರಬೇಕಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಇಂದು ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯ ಕೊಲ್ನಾಡುವಿನಲ್ಲಿ ಬಿಜೆಪಿ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಅವರು, ಭಾರತ್​ ಮಾತಾ ಕೀ ಜೈ, ಬಜರಂಗಬಲಿ ಕೀ ಜೈ ಎಂದು ಘೋಷಣೆ ಕೂಗುವ ಮೂಲಕ ಪ್ರಧಾನಿ ಮಾತು ಆರಂಭಿಸಿದರು.

ತುಳುವಿನಲ್ಲಿ ಭಾಷಣ ಆರಂಭಿಸಿದ ಮೋದಿ

ಪರಶುರಾಮ ಕ್ಷೇತ್ರದ ನನ್ನ ಪ್ರೀತಿಯ ತುಳುವಮ್ಮನ ಮಕ್ಕಳಿಗೆ ನಮಸ್ಕಾರಗಳು ಎಂದು ತುಳುವಿನಲ್ಲಿ ಪ್ರಧಾನಿ ಮೋದಿ ಭಾಷಣ ಆರಂಭಿಸಿದರು. ಸಬ್​ ಕಾ ಸಾಥ್​ ಸಬ್​ ಕಾ ವಿಕಾಸ್​ ಮಂತ್ರ ನಮ್ಮದು. ಅದರೊಂದಿಗೆ ನಾವು ಮುಂದುವರಿಯುತ್ತಿದ್ದೇವೆ. ಮೇ. 10ರಂದು ಮತದಾನದ ದಿನವಾಗಿದೆ. ಕರ್ನಾಟಕವನ್ನು ನಂ.1 ರಾಜ್ಯ ಮಾಡೋದು ಬಿಜೆಪಿಯ ಸಂಕಲ್ಪವಾಗಿದೆ. ಕರ್ನಾಟಕದಲ್ಲಿ ಆಧುನಿಕ ಮೂಲ ಸೌಕರ್ಯ ಬಿಜೆಪಿಯ ಸಂಕಲ್ಪವಾಗಿದೆ. ರಾಜ್ಯವನ್ನು ಮ್ಯಾನುಫ್ಯಾಕ್ಚರಿಂಗ್​ ಸೂಪರ್​ ಪವರ್​ ಮಾಡುವುದು ಬಿಜೆಪಿಯ ಗುರಿಯಾಗಿದೆ. ಇವಿಷ್ಟು ನಮ್ಮ ಮುಂದಿನ ಗುರಿಗಳಾಗಿವೆ ಎಂದು ಪ್ರಧಾನಿ ಮೋದಿ ಹೇಳಿದರು.

ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ

ಕಾಂಗ್ರೆಸ್​ ಮತ ಏಕೆ ಕೇಳುತ್ತಿದ್ದಾರೆ ಅಂದರೆ, ಅವರ ಒಬ್ಬ ನಾಯಕ ನಿವೃತ್ತಿ ಹೊಂದುತ್ತಿದ್ದಾರೆ. ಅವರನ್ನು ಗೆಲ್ಲಿಸಲು ಮತ ಕೇಳುತ್ತಿದ್ದಾರೆ. ಕಾಂಗ್ರೆಸ್​ ಬಿಜೆಪಿಯ ಎಲ್ಲ ಯೋಜನೆಗಳನ್ನು ನಾಶ ಮಾಡಲು ಮತ ಕೇಳುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮಾಡಿದರು.‌

ಈ ವೇಳೆ ನನಗೆ ಒಂದೇ ವಿಶ್ವಾಸ ಹಾಗೂ ಸಂದೇಶ ಕೇಳಿಬರುತ್ತಿದೆ. ಅದೇನೆಂದರೆ ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಎಂದು ಪುನರುಚ್ಛರಿಸಿದರು.

ಕರ್ನಾಟಕವನ್ನು ನಂ. 1 ಎಟಿಎಂ ಮಾಡುವ ಹುನ್ನಾರ

ದೇಶದ 140 ಕೋಟಿ ಜನರೇ ನನ್ನ ರಿಮೋಟ್​ ಕಂಟ್ರೋಲ್​. ಕರ್ನಾಟಕ ಕೃಷಿ ವಿಕಾಸದಲ್ಲಿ ನಂ. 1 ಆಗಬೇಕು. ಶಿಕ್ಷಣದಲ್ಲಿ ನಂ.1 ಆಗಿಸುವುದು, ಕರ್ನಾಟಕ ಮೀನುಗಾರಿಕೆಯಲ್ಲಿ ನಂ. 1 ಆಗುವುದು ನಮ್ಮ ಲಕ್ಷ್ಯವಾಗಿದೆ. ಆದರೆ ಕಾಂಗ್ರೆಸ್​ ಏನು ಬಯಸುತ್ತಿದೆ ಅಂದರೆ, ದೆಹಲಿಯಲ್ಲಿ ಅವರ ರಾಜ ಪರಿವಾರ ಇದೆಯಲ್ಲಾ? ಅದಕ್ಕೆ ಕರ್ನಾಟಕವನ್ನು ನಂ. 1 ಎಟಿಎಂ ಮಾಡಲು ಬಯಸುತ್ತಿದೆ. ಶೇ. 85 ರಷ್ಟು ಕಮಿಷನ್​ ತಿನ್ನುವ ಕಾಂಗ್ರೆಸ್​ ರಾಜ್ಯವನ್ನು ಸರ್ವನಾಶ ಮಾಡುತ್ತದೆ. ಇದಕ್ಕಾಗಿ ಕಾಂಗ್ರೆಸ್​ನಿಂದ ಜನ ಬಹಳ ಎಚ್ಚರಿಕೆಯಿಂದ ಇರಬೇಕಿದೆ ಎಂದರು.

ರಾಜ್ಯ ಮತ್ತು ನಿಮ್ಮ ಭವಿಷ್ಯವು ಅಸ್ಥಿರ

ಮೊದಲ ಬಾರಿ ಮತ ಚಲಾಯಿಸುವವರು ರಾಜ್ಯದ ಮತ್ತು ತಮ್ಮ ಭವಿಷ್ಯವನ್ನು ನಿರ್ಧರಿಸುತ್ತಾರೆ. ಕರ್ನಾಟಕದಲ್ಲಿ ಅಸ್ಥಿರ ಸರ್ಕಾರವಿದ್ದರೆ ನಿಮ್ಮ ಭವಿಷ್ಯವು ಅಸ್ಥಿರವಾಗುತ್ತದೆ. ಕಾಂಗ್ರೆಸ್​ ಇದ್ದ ಕಡೆ ಬಂಡವಾಳ ಹೂಡುವವರು ಓಡಿ ಹೋಗುತ್ತಾರೆ. ಕಾಂಗ್ರೆಸ್​ ತುಷ್ಟೀಕರಣವನ್ನು ಪ್ರೋತ್ಸಾಹಿಸುತ್ತದೆ. ರಾಜಸ್ಥಾನದಲ್ಲಿ ಕೆಲವು ವರ್ಷಗಳ ಹಿಂದೆ ಬಾಂಬ್​ ಸ್ಫೋಟದಲ್ಲಿ 50ಕ್ಕೂ ಹೆಚ್ಚು ಜನ ಸತ್ತರು. ಆದರೆ ಅಲ್ಲಿನ ಪೊಲೀಸರು ದೋಷಿಗಳನ್ನು ಜೈಲಿನಿಂದ ಬಿಟ್ಟರು. ಶಿಕ್ಷೆ ಕೊಡಲಿಲ್ಲ. ತುಷ್ಟೀಕರಣ ಇಂಥ ನೀತಿಯೊಂದೇ ಕಾಂಗ್ರೆಸ್​ ಗುರುತಾಗಿದೆ ಎಂದರು.

ಒಡೆದು ಆಳುವುದೇ ಕಾಂಗ್ರೆಸ್​ ನೀತಿ

ಯಾವ ರಾಜ್ಯಗಳು ಅಭಿವೃದ್ಧಿಯನ್ನು ಬಯಸುತ್ತವೆಯೋ ಅವು ಕಾಂಗ್ರೆಸ್​ ಅನ್ನು ತಮ್ಮ ರಾಜ್ಯದಿಂದ ಹೊರಗೆ ಹಾಕುತ್ತವೆ. ದೇಶವು ಪ್ರಗತಿ ಹೊಂದಿದರೆ ಅದನ್ನು ಕಾಂಗ್ರೆಸ್​ ಸಹಿಸುವುದಿಲ್ಲ. ಒಡೆದು ಆಳುವುದೇ ಕಾಂಗ್ರೆಸ್​ ನೀತಿಯಾಗಿದೆ. ಸಮಾಜದಲ್ಲಿ ಶಾಂತಿ ನೆಲೆಸಿದ್ದರೆ ಕಾಂಗ್ರೆಸ್​ಗೆ ಶಾಂತಿ ಇರುವುದಿಲ್ಲ. ಕಾಂಗ್ರೆಸ್​ ದೇಶ ವಿರೋಧಿಗಳ ಮೇಲಿನ ಕೇಸನ್ನು ವಾಪಸ್​ ಪಡೆಯುತ್ತದೆ. ಕಾಂಗ್ರೆಸ್​ ರಿವರ್ಸ್​ ಗೇರ್​ನಲ್ಲಿ ಮತ್ತೊಂದು ದಿಕ್ಕಿಗೆ ಹೋಗುತ್ತದೆ. ಆದರೆ ಬಿಜೆಪಿ ಸೈನಿಕರಿಗೆ ಗೌರವ ಮತ್ತು ಸನ್ಮಾನ ನೀಡುತ್ತದೆ ಎಂದು ಮೋದಿ ಹೇಳಿದರು.

ಮಹಿಳೆಯರಿಗೆ ಹೆಚ್ಚು ಪ್ರಾಶಸ್ತ್ಯ

ದೇಶದ ಮಕ್ಕಳು ಜಿ 20 ಬಗ್ಗೆ ಮಾತನಾಡುತ್ತಿದ್ದಾರೆ. ಜಿ 20ಯಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ರಾಣಿ ಅಬ್ಬಕ್ಕ ರೀತಿಯ ನಮ್ಮ ಮಹಿಳೆಯರಲ್ಲೂ ಸಾಮರ್ಥ್ಯ ಇದೆ. ಕಾಂಗ್ರೆಸ್​ ಆಡಳಿತದಲ್ಲಿ ಮಹಿಳೆಯರಿಗೆ ಸುರಕ್ಷತೆ ಇರಲಿಲ್ಲ. ಮಹಿಳೆಯರಿಗಾಗಿ ಶೌಚಾಲಯ ಇರಲಿಲ್ಲ, ಓದಲು ಶಾಲೆಗಳಿರಲಿಲ್ಲ, ಗ್ಯಾಸ್​ ಕೊರತೆ ಇತ್ತು. ಆದರೆ ಬಿಜೆಪಿ ಸರ್ಕಾರದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದೆ.

ಎಲ್ಲ ಕ್ಷೇತ್ರದಲ್ಲೂ ಕರ್ನಾಟಕವನ್ನು ನಂ.1 ಮಾಡುವ ಉದ್ದೇಶ

ದಕ್ಷಿಣ ಕನ್ನಡ ಶಿಕ್ಷಣ ಕ್ಷೇತ್ರದಲ್ಲಿ ನಂಬರ್​ ಒನ್​ ಸ್ಥಾನದಲ್ಲಿದೆ. ಹಾಗೇ ಕರ್ನಾಟಕವನ್ನು ಎಲ್ಲ ಕ್ಷೇತ್ರಗಳಲ್ಲಿ ನಂಬರ್​ ಒನ್​ ಮಾಡೋಣ. ರಾಜ್ಯವನ್ನು ವಿಕಾಸ ಕ್ಷೇತ್ರದಲ್ಲಿ ನಂಬರ್​ ಒನ್​ ಮಾಡೋಣ. ಆದರೆ ಕಾಂಗ್ರೆಸ್​ಗೆ ಏನು ಬೇಕಾಗಿದೆ. ಕಾಂಗ್ರೆಸ್​ಗೆ ರಾಜ್ಯವನ್ನು ಎಟಿಎಂ ಮಾಡಬೇಕೆಂದಿದೆ. ಜೆಡಿಎಸ್​ ಕೂಡ ಕಚ್ಚೆ-ಪಂಚೆ ಪಕ್ಷವಾಗಿದೆ ಎಂದು ಗುಡುಗಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!