ಹೊಸದಿಗಂತ ಡಿಜಿಟಲ್ ಡೆಸ್ಕ್ :
ಬಂಡೀಪುರ ರಾಷ್ಟ್ರೀಯ ಉದ್ಯಾನವನ್ನು ರಾಷ್ಟ್ರೀಯ ಹುಲಿ ಸಂರಕ್ಷಿತಾ ಅರಣ್ಯ ಎಂದು ಘೋಷಿಸಿ 50 ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ಮೋದಿ ಬಂಡೀಪುರ ಅಭಯಾರಣ್ಯಕ್ಕೆ ಭೇಟಿ ನೀಡಲಿದ್ದಾರೆ. ವಿಧಾನಸಭೆ ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ಅವರ ಮೊದಲ ಭೇಟಿ ಇದಾಗಿದೆ.
ಕಾರ್ಯಕ್ರಮ ಮುಗಿದ ಬಳಿಕ ತಮಿಳುನಾಡಿನ ಮದುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಕ್ಯಾಂಪ್‌ಗೆ ಆಗಮಿಸಿ ಆಸ್ಕರ್ ಪ್ರಶಸ್ತಿ ಪಡೆದಿದ್ದ ‘ದಿ ಎಲೆಫೆಂಟ್ ವಿಸ್ಪರ್ಸ್’ ಡಾಕ್ಯುಮೆಂಟರಿ ಖ್ಯಾತಿಯ ಬೊಮ್ಮನ್ ಮತ್ತು ಬೆಳ್ಳಿ ದಂಪತಿಯನ್ನ ಪ್ರಧಾನಿ ಭೇಟಿಯಾಗಲಿದ್ದಾರೆ.
‘ದಿ ಎಲೆಫೆಂಟ್ ವಿಸ್ಪರ್ಸ್’ ಡಾಕ್ಯುಮೆಂಟರಿಯ ಪಾತ್ರಧಾರಿಗಳಾದ ಬೊಮ್ಮನ್ ಮತ್ತು ಬೆಳ್ಳಿ ಅವರು ಮದುಮಲೈ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಕ್ಯಾಂಪ್ ನಲ್ಲಿ ವಾಸಿಸುತ್ತಿದ್ದಾರೆ. ಬೊಮ್ಮನ್ ಮತ್ತು ಬೆಳ್ಳಿ ಅವರನ್ನು ಪ್ರಧಾನಿ ಮೋದಿ ಇಂದು ಸನ್ಮಾನಿಸಲಿದ್ದಾರೆ. ಅಲ್ಲದೆ ಅವರೊಂದಿಗೆ ಸಮಯ ಕಳೆಯಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್, ಸಚಿವರುಗಳು ಇರಲಿದ್ದಾರೆ.
95ನೇ ಅಕಾಡೆಮಿ ಅವಾರ್ಡ್ ಕಾರ್ಯಕ್ರಮದಲ್ಲಿ ‘ದಿ ಎಲಿಫೆಂಟ್ ವಿಸ್ಪರರ್ಸ್’ ಸಾಕ್ಷ್ಯಚಿತ್ರಕ್ಕೆ ಆಸ್ಕರ್ ಮುಡಿಗೇರಿತ್ತು. ಆ ಸಾಕ್ಷ್ಯಚಿತ್ರದಲ್ಲಿ ಅನಾಥ ಆನೆಗಳ ಆರೈಕೆ ಮಾಡುತ್ತಿದ್ದ ಬೆಳ್ಳಿ ಮತ್ತು ಬೊಮ್ಮನ್ ಜೀವನ ಇಡೀ ವಿಶ್ವಕ್ಕೆ ಪರಿಚಯವಾಗಿತ್ತು. ಪ್ರಧಾನಿ ಮೋದಿ ಟ್ವಿಟರ್‌ನಲ್ಲಿ ಈ ವಿಚಾರವನ್ನು ಶೇರ್ ಮಾಡಿದ್ದರು. ಇದೀಗ ಖುದ್ದು ಅವರನ್ನೇ ಭೇಟಿ ಮಾಡುತ್ತಿದ್ದಾರೆ.