ದೇಶವನ್ನು ಸೆಮಿಕಂಡಕ್ಟರ್‌ ಹಬ್‌ ಆಗಿಸುವ ಗುರಿ: ಬೆಂಗಳೂರು ಸೆಮಿಕಾನ್ ಕಾನ್ಫರೆನ್ಸ್‌ ನಲ್ಲಿ ಪ್ರಧಾನಿ ಮೋದಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಸಿಲಿಕಾನ್ ವ್ಯಾಲಿ ಬೆಂಗಳೂರಿನಲ್ಲಿ ಆಯೋಜಿಸಲಾಗಿರುವ ಸೆಮಿಕಂಡಕ್ಟರ್ ಇಂಡಿಯಾ ಕಾನ್ಫರೆನ್ಸ್ 2022ರ ಉದ್ಘಾಟನಾ ಅಧಿವೇಶನವನ್ನು ಉದ್ದೇಶಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶುಕ್ರವಾರ ಮಾತನಾಡಿದರು. ತಮ್ಮ ಭಾಷಣದಲ್ಲಿ, ಸೆಮಿಕಂಡಕ್ಟರ್ ವಲಯಕ್ಕೆ ಭಾರತವು ಏಕೆ ಆಕರ್ಷಕ ತಾಣವಾಗಿದೆ ಎಂಬ ವಿಚಾರದ ಕುರಿತು ಪ್ರಧಾನ ಮಂತ್ರಿಯವರು ವಿಸ್ತಾರವಾಗಿ ಮಾತನಾಡಿದರು.
ಭಾರತದಲ್ಲಿ ಇಂತಹ ಸಮ್ಮೇಳನ ನಡೆಯುತ್ತಿರುವುದು ಸಂತಸ ತಂದಿದೆ. ತಂತ್ರಜ್ಞಾನದ ಅಗಾಧ ಬೆಳವಣಿಗೆಯಿಂದಾಗಿ ಸೆಮಿಕಂಡಕ್ಟರ್ ವಲಯವು ನಾವು ಊಹಿಸಿಕೊಳ್ಳುವುದಕ್ಕಿಂತ ಹೆಚ್ಚಿನ ರೀತಿಯಲ್ಲಿ ವೇಗದ ಬೆಳವಣಿಗೆಯನ್ನು ದಾಖಲಿಸುತ್ತಿದೆ. ಜಾಗತಿಕವಾಗಿ ಸೆಮಿಕಂಡಕ್ಟರ್ ಗಳ ಪೂರೈಕೆ ಸರಪಳಿಗಳಲ್ಲಿ ಭಾರತವನ್ನು ಪ್ರಮುಖ ಪಾಲುದಾರ ದೇಶವನ್ನಾಗಿ ರೂಪಿಸುವುದು ನಮ್ಮ ಗುರಿಯಾಗಿದೆ. ಭಾರತವನ್ನು ಸೆಮಿ-ಕಂಡಕ್ಟರ್ ತಂತ್ರಜ್ಞಾನಗಳಿಗೆ ಆಕರ್ಷಕ ಹೂಡಿಕೆಯ ತಾಣವನ್ನಾಗಿಸಲು ಎದುರು ನೋಡುತ್ತಿದ್ದೇವೆ.
ವಿಶ್ವದಲ್ಲೇ ಅತ್ಯಂತ ವೇಗವಾಗಿ ಭಾರತದಲ್ಲಿ ಸ್ಟಾರ್ಟ್‌ಅಪ್ ಗಳು ಬೆಳವಣಿಗೆ ಕಾಣುವುದರೊಂದಿಗೆ ದೇಶವು ಸದೃಢವಾದ ಆರ್ಥಿಕ ಬೆಳವಣಿಗೆಯತ್ತ ಸಾಗುತ್ತಿದೆ. ವಾರ ವಾರಗಳಿಗೂ ದೇಶದಲ್ಲಿ ತಂತ್ರಜ್ಞಾನಗಳು ಹೆಚ್ಚಿನ ಬೆಳವಣಿಗೆ ಹೊಂದುತ್ತಿವೆ. ದೇಶದ ಉತ್ಪಾದನಾ ವಲಯ ಇದೇ ರೀತಿಯ ಬೆಳವಣಿಗೆ ಮುಂದವರೆಸಿದರೆ ದೇಶದಲ್ಲಿ ಸೆಮಿಕಂಡಕ್ಟರ್‌ ಗಳ ಬೇಡಿಕೆ ಮೌಲ್ಯ 2026ರ ವೇಳೆಗೆ 80 ಶತಕೋಟಿ ಡಾಲರ್‌ ಹಾಗೂ 2030 ರ ವೇಳೆಗೆ 110 ಶತಕೋಟಿ ಡಾಲರ್‌ ಗೆ ಮುಟ್ಟಲಿದೆ ಎಂಬ ಅಂದಾಜಿದೆ.
ದೇಶವು ಸೆಮಿಕಂಡಕ್ಟರ್‌ ಗಳ ಅಧ್ಬುತ ವಿನ್ಯಾಸಕಾರನ್ನು ಹೊಂದಿದೆ. ಇಂದು ಪ್ರಪಂಚದ 20% ರಷ್ಟು ಸೆಮಿಕಂಡಕ್ಟರ್ ವಿನ್ಯಾಸಗಳನ್ನು ಭಾರತೀಯ ಎಂಜಿನಿಯರ್‌ಗಳೇ ಮಾಡುತ್ತಿದ್ದಾರೆ. ವಿಶ್ವದ ಅಗ್ರ 25 ಸೆಮಿ-ಕಂಡಕ್ಟರ್ ವಿನ್ಯಾಸ ಕಂಪನಿಗಳು ನಮ್ಮ ದೇಶದಲ್ಲಿ ತಮ್ಮ ವಿನ್ಯಾಸ ಕೇಂದ್ರಗಳನ್ನು ಹೊಂದಿವೆ. ಮುಂದಿನ 5 ವರ್ಷಗಳಲ್ಲಿ ದೇಶದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನಾ ವಲಯವು ದಾಖಲೆಯ ಬೆಳವಣಿಗೆ ಕಾಣುವ ನಿರೀಕ್ಷೆಯಿದೆ. ಕೇಂದ್ರ ಸರ್ಕಾರವು ಇತ್ತೀಚಿಗೆ 10 ಶತಕೋಟಿ ಡಾಲರ್‌ ಮೌಲ್ಯದ ಸೆಮಿ-ಕಾನ್ ಇಂಡಿಯಾ ಕಾರ್ಯಕ್ರಮವನ್ನು ಘೋಷಿಸಿದೆ. ಈ ಕಾರ್ಯಕ್ರಮವು ಅರೆ-ವಾಹಕಗಳ(ಸೆಮಿಕಂಡಕ್ಟರ್) ಉತ್ಪಾದನೆ ಮತ್ತು ವಿನ್ಯಾಸ ಪರಿಸರ ವ್ಯವಸ್ಥೆಯಲ್ಲಿ ಹೂಡಿಕೆ ಮಾಡುವ ಕಂಪನಿಗಳಿಗೆ ಹಣಕಾಸಿನ ಬೆಂಬಲವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಸೆಮಿಕಂಡಕ್ಟರ್‌ ಉತ್ಪಾದನಾ ವಲಯವು ಬಲಿಷ್ಠಗೊಳ್ಳಲು ಸರ್ಕಾರದಿಂದ ಬೆಂಬಲ ಅಗತ್ಯವೆಂಬುದು ನಮಗೆ ತಿಳಿದಿದೆ ಎಂದು ಪ್ರಧಾನ ಮಂತ್ರಿ ಮೋದಿಯವರು ಕಾರ್ಯಕ್ರಮದಲ್ಲಿ ಹೇಳಿದ್ದಾರೆ.
ಇದಲ್ಲದೇ 5G, IoT ಮತ್ತು ಕ್ಲೀನ್ ಎನರ್ಜಿ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಸರ್ಕಾರವು ಬ್ರಾಡ್‌ಬ್ಯಾಂಡ್ ಕ್ಷೇತ್ರದಲ್ಲಿ ಹೂಡಿಕೆ ಮಾಡುತ್ತಿದೆ. ಡಿಜಿಟಲೀಕರಣದ ಮೂಲಕ ಆರು ಲಕ್ಷ ಹಳ್ಳಿಗಳನ್ನು ಸಂಪರ್ಕಿಸುವ ಗುರಿಯನ್ನು ಹೊಂದಿದ್ದೇವೆ. ಭಾರತವು ಮುಂದಿನ ತಂತ್ರಜ್ಞಾನ ಕ್ರಾಂತಿಗೆ ಬುನಾದಿ ಹಾಕುತ್ತಿದೆ ಎಂದು ಪ್ರಧಾನಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!