ಹೊಸದಿಗಂತ ಡಿಜಿಟಲ್ ಡೆಸ್ಕ್:
ಹರಿಹರ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ನಿರೀಕ್ಷಣಾ ಜಾಮೀನು ರದ್ದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ಮಹತ್ವದ ಆದೇಶ ಪ್ರಕಟಣೆಯನ್ನು ದಾವಣಗೆರೆ ಜಿಲ್ಲಾ ವಿಶೇಷ ಪೋಕ್ಸೊ ನ್ಯಾಯಾಲಯವು ಜೂನ್ 30ಕ್ಕೆ ಮುಂದೂಡಿದೆ. ಇದರಿಂದಾಗಿ ಶ್ರೀಗಳಿಗೆ ಬಂಧನದ ಭೀತಿಯಿಂದ ಸದ್ಯಕ್ಕೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ಮಠದ ಹಾಸ್ಟೆಲ್‌ನಲ್ಲಿದ್ದ ಅಪ್ರಾಪ್ತ ಬಾಲಕರ ಮೇಲೆ ದೌರ್ಜನ್ಯ ಎಸಗಿದ ಗಂಭೀರ ಆರೋಪ ಎದುರಿಸುತ್ತಿರುವ ಸ್ವಾಮೀಜಿ ವಿರುದ್ಧ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಜಾಮೀನು ರದ್ದತಿಗೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ನ್ಯಾಯಾಲಯವು ತನ್ನ ತೀರ್ಪನ್ನು ಕಾಯ್ದಿರಿಸಿದೆ.
ಪೊಲೀಸರಿಂದ ಜಾಮೀನು ರದ್ದತಿಗೆ ಒತ್ತಾಯ
ಪ್ರಕರಣದಲ್ಲಿ ಎಫ್‌ಐಆರ್ ದಾಖಲಾಗುವ ಮುನ್ನವೇ ವಚನಾನಂದ ಶ್ರೀ ಜಿಲ್ಲಾ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ, “ಆರೋಪಿಯು ತನಿಖೆಗೆ ಸರಿಯಾಗಿ ಸಹಕರಿಸುತ್ತಿಲ್ಲ ಮತ್ತು ಸಾಕ್ಷ್ಯಗಳನ್ನು ನಾಶಪಡಿಸುವ ಆತಂಕವಿದೆ” ಎಂದು ಆರೋಪಿಸಿ ಹರಿಹರ ಪೊಲೀಸರು ಮುಚ್ಚಿದ ಲಕೋಟೆಯಲ್ಲಿ ತನಿಖಾ ವರದಿ ಸಲ್ಲಿಸಿ, ಜಾಮೀನು ರದ್ದುಗೊಳಿಸುವಂತೆ ಕೋರ್ಟ್‌ಗೆ ಮನವಿ ಮಾಡಿದ್ದರು.
410 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ
ಈ ಮಧ್ಯೆ, ತನಿಖಾಧಿಕಾರಿಗಳು ಕೇವಲ ಮೂರೇ ವಾರಗಳಲ್ಲಿ ತನಿಖೆಯನ್ನು ಪೂರ್ಣಗೊಳಿಸಿ ಬರೋಬ್ಬರಿ 410 ಪುಟಗಳ ಬೃಹತ್ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ಸಂತ್ರಸ್ತ ಬಾಲಕರ ಹೇಳಿಕೆಗಳು ಮತ್ತು ಪ್ರಮುಖ ಸಾಕ್ಷ್ಯಗಳನ್ನು ಅಳವಡಿಸಲಾಗಿದೆ. ಆದರೆ, “ರಾಜಕೀಯ ಪ್ರೇರಿತವಾಗಿ ಅತ್ಯಂತ ಆತುರದಿಂದ ಈ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ” ಎಂದು ಶ್ರೀಗಳ ಪರ ವಕೀಲರಾದ ಎಸ್.ವಿ. ಪಾಟೀಲ್ ನ್ಯಾಯಾಲಯದಲ್ಲಿ ಆಕ್ಷೇಪಣೆ ಎತ್ತಿದ್ದಾರೆ.
ಇದನ್ನೂ ಓದಿ:
ಹೈಕೋರ್ಟ್‌ನಿಂದಲೂ ತೀವ್ರ ನಿಗಾ
ಮತ್ತೊಂದೆಡೆ, ಈ ಪ್ರಕರಣದ ತನಿಖೆ ಹೈಕೋರ್ಟ್ ಮೆಟ್ಟಿಲೇರಿದ್ದು, ಸಂತ್ರಸ್ತ ಬಾಲಕನ ತಾಯಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ದೂರು ದಾಖಲಾಗುವ ಮುನ್ನವೇ ಕೆಳ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನೀಡಿರುವುದು ಆಘಾತಕಾರಿ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಹೈಕೋರ್ಟ್ ಈಗಾಗಲೇ ವಚನಾನಂದ ಶ್ರೀಗಳಿಗೆ ನೋಟಿಸ್ ಜಾರಿ ಮಾಡಿದ್ದು, ಜೂನ್ 23 ರಂದು ಮುಂದಿನ ವಿಚಾರಣೆ ಕೈಗೆತ್ತಿಕೊಳ್ಳಲಿದೆ.
ಜೂನ್ 30 ರಂದು ದಾವಣಗೆರೆ ವಿಶೇಷ ನ್ಯಾಯಾಲಯವು ಪೊಲೀಸರ ಅರ್ಜಿಯನ್ನು ಪುರಸ್ಕರಿಸಿ ಜಾಮೀನು ರದ್ದುಗೊಳಿಸಿದರೆ, ವಚನಾನಂದ ಸ್ವಾಮೀಜಿಯ ಬಂಧನ ನಿಶ್ಚಿತ ಎನ್ನಲಾಗುತ್ತಿದೆ. ಹೀಗಾಗಿ ಇಡೀ ರಾಜ್ಯದ ಕಣ್ಣು ಈಗ ಜೂನ್ 30ರ ನ್ಯಾಯಾಲಯದ ತೀರ್ಪಿನತ್ತ ನೆಟ್ಟಿದೆ.



