ಹೊಸದಿಗಂತ ಡಿಜಿಟಲ್ ಡೆಸ್ಕ್
ಗುತ್ತಿಗೆ ಕಾಮಗಾರಿಯಲ್ಲಿ ಸಚಿವರು ಶೇ 40ರಷ್ಟು ಕಮಿಷನ್‌ಗೆ ಬೇಡಿಕೆ ಇಟ್ಟಿದ್ದಾರೆ ಎಂದು ತೋಟಗಾರಿಕೆ ಮತ್ತು ಯೋಜನಾ ಸಚಿವ ಮುನಿರತ್ನ ನಾಯ್ಡು ವಿರುದ್ಧ ಇತ್ತೀಚೆಗೆ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಡಿ ಕೆಂಪಣ್ಣ ಅವರನ್ನು ವಯ್ಯಾಲಿಕಾವಲ್ ಪೊಲೀಸರು ಬಂಧಿಸಿದ್ದಾರೆ.
ಸಚಿವರು ಈ ಆರೋಪಕ್ಕೆ ಪ್ರತಿಯಾಗಿ ಹೂಡಿದ್ದ ಮಾನನಷ್ಟ ಮೊಕದ್ದಮೆಯನ್ವಯ ಕೆಂಪಣ್ಣ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪದ ಬೆನ್ನಲ್ಲೇ ಸಚಿವ ಮುನಿರತ್ನ ಕೆಂಪಣ್ಣ ವಿರುದ್ಧ 50 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಸಚಿವರಿಂದ ಮಾನನಷ್ಟ ಮೊಕದ್ದಮೆ ಹೂಡಿದ ನಂತರ ಅವರ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಲಾಗಿತ್ತು.
8 ನೇ ಎಸಿಎಂಎಂ ನ್ಯಾಯಾಲಯವು ಡಿಸೆಂಬರ್ 19 ರಂದು ಕೆಂಪಣ್ಣ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದ ನಂತರ ಪೊಲೀಸರು ಅವರನ್ನು ಬಂಧಿಸಿದರು. ನಾಲ್ವರು ಪದಾಧಿಕಾರಿಗಳೊಂದಿಗೆ ಗುತ್ತಿಗೆದಾರರ ಸಂಘದ ಒಟ್ಟು ಐವರನ್ನು ಬಂಧಿಸಲಾಗಿದೆ.
ಗುತ್ತಿಗೆದಾರರ ಸಂಘದ ಖಜಾಂಚಿ ನಟರಾಜ್, ಸಂಘದ ಜಂಟಿ ಕಾರ್ಯದರ್ಶಿ ಗುರುಸಿದ್ದಪ್ಪ, ಸಂಘದ ಉಪಾಧ್ಯಕ್ಷ ಕೃಷ್ಣಾರೆಡ್ಡಿ ಕೆಂಪಣ್ಣ ಅವರೊಂದಿಗೆ ಬಂಧಿತರಾದ ಇತರ ಮೂವರು ಪದಾಧಿಕಾರಿಗಳು. 40 ರಷ್ಟು ಕಮಿಷನ್ ನೀಡುವಂತೆ ರಾಜ್ಯ ಸರ್ಕಾರದ ಸಚಿವರು ಆಗ್ರಹಿಸಿದ್ದಾರೆ ಎಂದು ಇವರೆಲ್ಲ ನೇರವಾಗಿ ಆರೋಪ ಮಾಡಿದ್ದರು.
ರಾಜ್ಯ ಸರ್ಕಾರದ ಸಚಿವರು ಗುತ್ತಿಗೆ ಕಾಮಗಾರಿಯಲ್ಲಿ ಶೇ.40ರಷ್ಟು ಕಮಿಷನ್ ನೀಡುವಂತೆ ಒತ್ತಾಯಿಸಿದ್ದಾರೆ ಎಂದು ಕೆಂಪಣ್ಣ ಅವರು ಪ್ರಧಾನಿಗೆ ಪತ್ರ ಬರೆದಿದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ