ದಿಗಂತ ವರದಿ ವಿಜಯಪುರ:
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಟ್ರಿ ಪಿಸ್ತೂಲ್ ಪೂರೈಸಿದ ಆರೋಪಿ ಸೆರೆಗೆ ಹೋದ ವೇಳೆ, ಪೊಲೀಸರ ಮೇಲೆ ಚಾಕುವಿನಿಂದ ಪ್ರತಿದಾಳಿ ನಡೆಸಿದ್ದಕ್ಕೆ, ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿರುವ ಘಟನೆ ನಗರ ಹೊರ ಭಾಗದ ಮಹಿಳಾ ವಿವಿ ಬಳಿ ನಡೆದಿದೆ.
ಇಲ್ಲಿನ ಸುರೇಶ ರಾಠೋಡ ಬಂಧಿತ ಆರೋಪಿಯಾಗಿದ್ದು, ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಸುರೇಶ ರಾಠೋಡ ಈತ, ಇತ್ತೀಚಿಗೆ ಜಿಲ್ಲೆಯ ತಿಕೋಟಾ ತಾಲೂಕಿನ ಅರಕೇರಿ ಎಲ್.ಟಿ. 1 ರ ಬಳಿ ನಡೆದ ಸತೀಶ ರಾಠೋಡ ಮೇಲಿನ ಗುಂಡಿನ ದಾಳಿ ಕೊಲೆ ಪ್ರಕರಣಕ್ಕೆ, ಮಧ್ಯಪ್ರದೇಶದಿಂದ ಕಂಟ್ರಿ ಪಿಸ್ತೂಲ್ ತಂದು ಕೊಟ್ಟಿರುವ ಆರೋಪವಿದ್ದ ಕಾರಣ, ಆರೋಪಿ ಸುರೇಶ ರಾಠೋಡ ನಗರ ಹೊರ ಬಾಗದ ಮಹಿಳಾ ವಿವಿ ಬಳಿಯ ಅಥಣಿ ರಸ್ತೆ ಬಳಿ ಅಡಗಿ ಕುಳಿತ ಖಚಿತ ಮಾಹಿತಿ ಆಧರಿಸಿ, ಬಂಧಿಸಲು ಹೋದ ಸಂದರ್ಭ, ಆರೋಪಿ ಸುರೇಶ ರಾಠೋಡ ಚಾಕುವಿನಿಂದ ಪೊಲೀಸರ ಮೇಲೆ ಪ್ರತಿದಾಳಿ ನಡೆಸಿದ್ದಾನೆ. ಆಗ ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿ, ಬಂಧಿಸಿದ್ದಾರೆ. ಈ ಘಟನೆಯಲ್ಲಿ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್ ಐ ವಿನೋದ ದೊಡಮನಿ ಸೇರಿ ಓರ್ವ ಸಿಬ್ಬಂದಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಎಸ್ಪಿ ಲಕ್ಷ್ಮಣ ನಿಂಬರಗಿ, ಎಎಸ್ಪಿ ರಾಮನಗೌಡ ಹಟ್ಟಿ ಸೇರಿದಂತೆ ಅಧಿಕಾರಿಗಳು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಪೊಲೀಸ್ ಅಧಿಕಾರಿ, ಸಿಬ್ಬಂದಿಯ ಆರೋಗ್ಯ ವಿಚಾರಿಸಿದ್ದಾರೆ.
ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.